Asianet Suvarna News Asianet Suvarna News

ಸಿದ್ದಾಪುರ: ನೂತನ ಶಾಸಕ ಪೊನ್ನಣ್ಣ ಎದುರು ಸಾಲು ಸಾಲು ಸವಾಲು!

ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಮೊದಲ ಬಾರಿ ಆಯ್ಕೆಯಾದ ವಿರಾಜಪೇಟೆ ನೂತನ ಶಾಸಕ ಎ.ಎಸ್‌.ಪೊನ್ನಣ್ಣ ಅವರಿಗೆ ಸಿದ್ದಾಪುರ ಭಾಗದಲ್ಲಿ ಸಾಲು ಸಾಲು ಸವಾಲುಗಳು ಪರಿಹಾರಕ್ಕೆ ಕಾದಿವೆ.

Karnataka election results New MLA Ponnanna has facing series of challenges at siddapur rav
Author
First Published May 20, 2023, 3:02 PM IST

ಸವಾಲಿನ ಹಾದಿ

ಸುಬ್ರಮಣಿ

ಸಿದ್ದಾಪುರ (ಮೇ.20) : ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಮೊದಲ ಬಾರಿ ಆಯ್ಕೆಯಾದ ವಿರಾಜಪೇಟೆ ನೂತನ ಶಾಸಕ ಎ.ಎಸ್‌.ಪೊನ್ನಣ್ಣ ಅವರಿಗೆ ಸಿದ್ದಾಪುರ ಭಾಗದಲ್ಲಿ ಸಾಲು ಸಾಲು ಸವಾಲುಗಳು ಪರಿಹಾರಕ್ಕೆ ಕಾದಿವೆ.

ಕ್ಷೇತ್ರದಾದ್ಯಂತ ಹಲವು ಕುಟುಂಬಗಳು ಇಂದಿಗೂ ಗುಡಿಸಲುಗಳಲ್ಲಿ ಪ್ಲಾಸ್ಟಿಕ್‌ ಹೊದಿಕೆಗಳಲ್ಲಿ ವಾಸವಾಗಿದ್ದು ಅವರಿಗೆ ಶಾಶ್ವತ ಸೂರು ಕಲ್ಪಿಸಿ ಕೊಡಬೇಕಾಗಿದೆ. ಸಿದ್ದಾಪುರದ ಕರಡಿಗೋಡು ಗುಹ್ಯ ಗೂಡುಗದ್ದೆಯ ನದಿ ದಡದ ನಿವಾಸಿಗಳು ಇಂದಿಗೂ ಸಂಕಷ್ಟದಲ್ಲೆ ಬದುಕುತ್ತಿದ್ದು ನದಿ ಪ್ರವಾಹಕ್ಕೆ ಹಲವರ ಮನೆ ನೆಲಸಮವಾಗಿದ್ದು ಪ್ಲಾಸ್ಟಿಕ್‌ ಹೊದಿಕೆಯಲ್ಲೇ ಜೀವನ ದೂಡುತ್ತಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಲು ಹಿಂದಿನ ಶಾಸಕ ಕೆ.ಜಿ. ಬೋಪಯ್ಯ ಶ್ರಮಿಸಿದರೂ ಈಡೇರಿಸಲು ಸಾಧ್ಯವಾಗಿಲ್ಲ. ಶಾಸಕ ಪೊನ್ನಣ್ಣ ಈ ಬಾರಿ ಸ್ಥಳ ಗುರುತಿಸಿ ಪುನರ್ವಸತಿ ಕಲ್ಪಿಸಬೇಕಿದೆ.

ಕೊಡಗು: 4 ವರ್ಷವಾದರೂ ಮುಗಿಯದ ಕಾಮಗಾರಿ, ನೂರಾರು ಕುಟುಂಬಗಳಿಗೆ ತಪ್ಪದ ಯಾತನೆ

ರಸ್ತೆ ಅಭಿವೃದ್ಧಿ ಅತ್ಯಗತ್ಯ:

ಸಿದ್ದಾಪುರ​-ಅಮ್ಮತ್ತಿ ರಾಜ್ಯ ಹೆದ್ದಾರಿ, ಅಮ್ಮತ್ತಿ-ಪಾಲಿಬೆಟ್ಟರಸ್ತೆಗಳು ಹದೆಗಟ್ಟಿದ್ದು ಅವುಗಳ ಅಭಿವೃದ್ಧಿ ಸೇರಿದಂತೆ ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಕರಡಿಗೋಡು, ಗುಹ್ಯ ಮುಂತಾದ ಕಡೆಗಳಲ್ಲಿನ ರಸ್ತೆಗಳು ಗುಂಡಿ ಬಿದ್ದಿದ್ದು ಅವುಗಳನ್ನು ಸರಿ ಪಡಿಸಬೇಕಿದೆ.

ಕಸ ವಿಲೇಗೆ ಆದ್ಯತೆ ಅಗತ್ಯ: ಸಿದ್ದಾಪುರ ಭಾಗದಲ್ಲಿ ಕಸ ಹಾಕಲು ಸ್ಥಳದ ಕೊರತೆಯಿಂದ ಪಟ್ಟಣದ ವಿವಿಧ ಕಡೆಗಳಲ್ಲಿ ಕಸದ ರಾಶಿ ಬಿದ್ದಿದ್ದು ದುರ್ನಾತ ಬೀರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗ ಹರಡುವ ಆತಂಕ ಹೆಚ್ಚಾಗಿದ್ದು ಕಸ ವಿಲೇವಾರಿ ಗಂಭೀರ ಸಮಸ್ಯೆಯಾಗಿದೆ. ಅದಷ್ಟುಶೀಘ್ರದಲ್ಲಿ ಸೂಕ್ತ ಜಾಗ ಗುರುತಿಸಿ ಅಥವಾ ಖರೀದಿಸಿ ಕಸ ವಿಲೇವಾರಿ ಮಾಡುವುದರ ಮೂಲಕ ಕಸದ ಸಮಸ್ಯೆಗೆ ಇತೀಶ್ರೀ ಹಾಡಬೇಕಿದೆ.

ವನ್ಯಜೀವಿ ಉಪಟಳ: ದಕ್ಷಿಣ ಕೊಡಗಿನಲ್ಲಿ ವನ್ಯಜೀವಿಗಳ ಉಪಟಳ ಅಧಿಕವಾಗಿದ್ದು ಕಾಡಾನೆ ಹುಲಿ ದಾಳಿಗೆ ಮಾನವರೂ ಸೇರಿದಂತೆ ಜಾನುವಾರಗಳ ಬಲಿ ನಿರಂತರ ನಡೆಯುತ್ತಿದೆ. ಈ ಭಾಗದಲ್ಲಿ ಹುಲಿ ದಾಳಿಗೆ ಸಣ್ಣ ಬಾಲಕ ಸೇರಿದಂತೆ ಕಾರ್ಮಿಕರು ಬಲಿಯಾಗಿದ್ದಾರೆ. ಕಾಡಾನೆಗಳ ಉಪಟಳ ಅಧಿಕವಾಗಿದ್ದು ಆನೇಕ ಮಂದಿ ಬಲಿಯಾಗಿರುವುದಲ್ಲದೆ ಬೆಳೆ ನಾಶ ಕೂಡ ಆಗಿದ್ದು ಕಾರ್ಮಿಕರು, ಬೆಳೆಗಾರರು ಕಂಗಾಲಾಗಿದ್ದಾರೆ.

ವನ್ಯಜೀವಿಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಆನೇಕ ಯೋಜನೆಗಳನ್ನು ಅನುಸರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ . ಮುಂದೆ ಶಾಸಕರು ವನ್ಯಜೀವಿಗಳ ಉಪಟಳದಿಂದ ಪ್ರಾಣಹಾನಿ ಮತ್ತು ಬೆಳೆ ಹಾನಿ ತಡೆಯಲು ಶ್ರಮ ವಹಿಸಬೇಕಿದೆ.

ಕಂದಾಯ ನಿರೀಕ್ಷಕರ ಕಚೇರಿ ಶಿಥಿಲ:

ಅಮ್ಮತ್ತಿಯಲ್ಲಿರುವ ಕಂದಾಯ ನೀರಿಕ್ಷಕರ ಹಳೆಯ ಕಾಲದ ಕಟ್ಟಡ ಶಿಥಿಲವಸ್ಥೆಯಿಂದ ಕೂಡಿದೆ. ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆಯಿಲ್ಲ. ವಿದ್ಯುತ್‌ ಮತ್ತು ಸರ್ವರ್‌ ಸಮಸ್ಯೆಯಿಂದಾಗಿ ಸಾರ್ವಜನಿಕರು ವಾರಗಟ್ಟಲೆ ತಮ್ಮ ಸಣ್ಣ ಕೆಲಸಗಳಿಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಿಂಗಳಿನ ಹಿಂದೆ ಅಲ್ಲಿನ ಯುಪಿಎಸ್‌ ಕೈ ಕೊಟ್ಟಹಿನ್ನಲೆಯಲ್ಲಿ ಒಂದು ವಾರದಷ್ಟುಸಮಯ ಸಾರ್ವಜನಿಕರಿಗೆ ಯಾವುದೇ ಸೇವೆ ಸೌಲಭ್ಯ ಲಭ್ಯವಿರಲಿಲ್ಲ. ಶೌಚಾಲಯಗಳು ಪಾಳು ಬಿದ್ದಿದ್ದು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸುವ ಮಹಿಳೆಯರು, ಮಕ್ಕಳು ಶೌಚಾಲಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ನೂತನ ಆಧುನಿಕ ಕಟ್ಟಡ ನಿರ್ಮಿಸಿ ಕಚೇರಿಯನ್ನು ಮೇಲ್ದರ್ಜೆಗೆರಿಸಬೇಕಾಗಿದೆ.

Karnataka assembly election results: ನ್ಯಾಯವಾದಿ, ವೈದ್ಯರು ಕೊಡಗಿನ ನೂತನ ಶಾಸಕರು

ನಾನು ಕಳೆದ ನಾಲ್ಕು ವರ್ಷದಿಂದ ಕ್ಷೇತ್ರದ ಎಲ್ಲಾ ಕಡೆ ಓಡಾಡಿದ್ದೆನೆ. ನನಗೆ ಎಲ್ಲಾ ಸಮಸ್ಯೆಗಳ ಅರಿವಿದ್ದು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.

-ಎ.ಎಸ್‌.ಪೊನ್ನಣ್ಣ, ವಿರಾಜಪೇಟೆ ನೂತನ ಶಾಸಕ.

ನಾವು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಈ ಪ್ಲಾಸ್ಟಿಕ್‌ ಹೊದಿಕೆಯ ಮನೆಯಲ್ಲಿಯೇ ವಾಸವಾಗಿದ್ದು ಮಳೆಗಾಲದಲ್ಲಿ ಸಂಕಷ್ಟದಲ್ಲಿ ದಿನ ದೂಡುತ್ತಿದ್ದು, ಹೊಸ ಶಾಸಕರು ನಮಗೆ ಶಾಶ್ವತ ಮನೆ ನಿರ್ಮಿಸಿಕೊಡುವ ವಿಶ್ವಾಸ ಇದೆ.

-ಚಿತ್ರಾ ಎಚ್‌.ಎಸ್‌., ಅಂಬೇಡ್ಕರ್‌ ನಗರ ನಿವಾಸಿ, ಸಿದ್ದಾಪುರ.

 

Follow Us:
Download App:
  • android
  • ios