Asianet Suvarna News Asianet Suvarna News

Karnataka election results 2023: ಕಿತ್ತೂರು ಕರ್ನಾಟಕದಲ್ಲಿ ಮುದುಡಿದ ತಾವರೆ, ಕೈ ಮೇಲುಗೈ!

  • ಕಾಂಗ್ರೆಸ್‌ 33, ಬಿಜೆಪಿ 16, ಜೆಡಿಎಸ್‌
  • ಆಡಳಿತ ವಿರೋಧಿ ಅಲೆ ನಿರ್ಲಕ್ಷಿಸಿ ಬೆಲೆತೆತ್ತ ಬಿಜೆಪಿ
Karnataka election results kittur karnataka bjp defeat against congress in hubballi assembly constituency rav
Author
First Published May 14, 2023, 2:09 AM IST

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ (ಮೇ.14)  ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ತಮ್ಮ ವಿರುದ್ಧ ಸಿಡಿ ಪ್ರಕರಣ ಕೇಳಿ ಬಂದಾಗ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ‘ಅರೇ ಯಾರ್‌, ಸರ್ಕಾರ ತೆಗೆದು ಮತ್ತೊಂದ್‌ ಸರ್ಕಾರ ತರೂ ತಾಕತ್‌ ಇದ್ದವ್ರು ನಾವ್‌, ಇದೇನ್‌ ಮಹಾ’ ಎನ್ನುವ ಧಾಡಸಿ ಮಾತುಗಳನ್ನಾಡಿದ್ದರು.

ಅಂದು ತಾವೂ ಸೇರಿದಂತೆ 17 ಶಾಸಕರು ರಾಜೀನಾಮೆ ನೀಡಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy)ಸರ್ಕಾರ ಉರುಳಿಸಿ, ಯಡಿಯೂರಪ್ಪ (BS Yadiyurappa)ನೇತೃತ್ವದ ಬಿಜೆಪಿ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಕಂಡಿದ್ದಾರೆ ಇದೇ ಜಾರಕಿಹೊಳಿ. ಇವರನ್ನು ನಂಬಿಕೊಂಡು ಕಣಕ್ಕಿಳಿದಿದ್ದ ರಮೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌, ನಾಗೇಶ್‌ ಮನ್ವಾಳ್ಕರ್‌ ಸೋತಿದ್ದಾರೆ. ಅಷ್ಟೇ ಅಲ್ಲ ಇವರೊಂದಿಗೆ ಆಪರೇಷನ್‌ ಕಲಮಕ್ಕೆ ಒಳಗಾಗಿದ್ದ ಬಿ.ಸಿ.ಪಾಟೀಲ್‌, ಆರ್‌.ಶಂಕರ್‌ ಕೂಡ ಪರಾಭವಗೊಂಡಿದ್ದಾರೆ. ಪಕ್ಷಾಂತರಿಗಳನ್ನು ಮತದಾರ ಸಾರಾಸಗಟಾಗಿ ತಿರಸ್ಕರಿಸಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದಿದ್ದಾನೆ.

Karnataka election results 2023: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

ಮುದುಡಿದ ತಾವರೆ:

2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದದ್ದು-10 ಸ್ಥಾನ. ಮುಂದೆ ಆಪರೇಷನ್‌ ಕಮಲದ ಮೂಲಕ 3 ಸ್ಥಾನ ಪಡೆಯಿತು. ಅದರಂತೆ ವಿಜಯಪುರ-3 ಸ್ಥಾನಗಳಿದ್ದವು. ಸಿಂದಗಿ ಜೆಡಿಎಸ್‌ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅಕಾಲಿಕ ನಿಧನದ ಹಿನ್ನಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಆ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತು. ಬಾಗಲಕೋಟೆ-5, ಧಾರವಾಡ-5, ಹಾವೇರಿ-5, ಗದಗ-3 ಸೇರಿದಂತೆ ಒಟ್ಟು 35 ಸ್ಥಾನಗಳ ಬಲ ಹೊಂದಿತ್ತು.

ಬಿಜೆಪಿ ಆರಂಭದಿಂದಲು ಆಡಳಿತ ವಿರೋಧಿ ಅಲೆಯನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು, ಸಿಡಿ ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿ ರಕ್ಷಣೆಗೆ ನಿಂತದ್ದು, ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧದ ರಮೇಶ್‌ ಜಾರಕಿಹೊಳಿ ವಾಕ್‌ ಸಮರ ನಿಯಂತ್ರಿಸದೇ ಹೋಗಿದ್ದು, ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಪಾಟೀಲ್‌ ಪ್ರಕರಣದಲ್ಲೂ ನಿಷ್ಪಕ್ಷಪಾತ ನಿಲುವು ತಾಳದ್ದು ಪಕ್ಷಕ್ಕೆ ಮುಳುವಾಯಿತು. ಜತೆಗೆ, ಪಕ್ಷದ ಪ್ರಮುಖರ ವಿರುದ್ಧವೇ ಮಾತನಾಡುತ್ತಿದ್ದ ಯತ್ನಾಳ್‌ರನ್ನು ನಿಯಂತ್ರಿಸದೇ ಇದ್ದುದು, ಹಿರಿಯ ಸಂಸದ ರಮೇಶ್‌ ಜಿಗಜಿಣಗಿ ಸೇರಿದಂತೆ ಹಲವು ಹಿರಿಯರ ನಿರ್ಲಕ್ಷ್ಯ ಪಕ್ಷಕ್ಕೆ ಕೈಕೊಟ್ಟಿತು. ಇನ್ನು ಸಚಿವ ಮುರಗೇಶ್‌ ನಿರಾಣಿ ವಿಮಾನ ನಿಲ್ದಾಣ ನಿರ್ಮಿಸಲು ಹೋಗಿ ಬಾದಾಮಿ, ಗುಳೇದಗುಡ್ಡ ತಾಲೂಕುಗಳ ರೈತರ ವಿರೋಧ ಕಟ್ಟಿಕೊಂಡರು. ಪ್ರವಾಹ ಸಮಸ್ಯೆ ನಿರ್ಲಕ್ಷಿಸಿದ್ದು ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಯ್ತು. ರೋಣ ಶಾಸಕ ಕಳಕಪ್ಪ ಬಂಡಿ ಸಿಡಿ ಪ್ರಕರಣ, ಎಲ್ಲದಕ್ಕೂ ಹೆಚ್ಚಾಗಿ ಮುಖ್ಯಮಂತ್ರಿ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರಕ್ಕೆ ಸೀಮಿತವಾಗಿದ್ದೂ ಸೇರಿ ಹಲವು ಸಂಗತಿಗಳು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಮೂಲೆಗುಂಪಾಗಲು ಮತ್ತು ಪ್ರಸಕ್ತ ಚುನಾವಣೆಯಲ್ಲಿ ಆ ಹಿಂದಿನ ಫಲಿತಾಂಶ ಅದಲು ಬದಲಾಗಿ 16ಕ್ಕೆ ಇಳಿಯಲು ಕಾರಣವಾಗಿವೆ.

Karnataka election results 2023 : ಕಾಂಗ್ರೆಸ್ ವಶವಾಯ್ತು ಕಲ್ಯಾಣ ಕರ್ನಾಟಕ!

ಕಾಂಗ್ರೆಸ್‌ ಮೇಲುಗೈ:

ಹಿಂದಿನ ಚುನಾವಣೆಯಲ್ಲಿ 14 ಸ್ಥಾನ ಹೊಂದಿದ್ದ ಕಾಂಗ್ರೆಸ್‌ ಈ ಬಾರಿ 33 ಕಡೆ ಗೆದ್ದಿದೆ. ಕಾಂಗ್ರೆಸ್ಸಿನ ಈ ಬೆಳವಣಿಗೆಗೆ ಪರೋಕ್ಷವಾಗಿ ಬಿಜೆಪಿಯೇ ಕಾರಣ. ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ್‌, ಎಚ್‌.ಕೆ.ಪಾಟೀಲ್‌, ಸಲೀಂ ಅಹ್ಮದ್‌, ಲಕ್ಷ್ಮೇ ಹೆಬ್ಬಾಳ್ಕರ್‌ರ ಸಂಘಟಿತ ಪ್ರಯತ್ನ ಕೂಡಾ ಕಾರಣವಾಗಿದೆ. 50 ಸ್ಥಾನಗಳ ಈ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಜೆಡಿಎಸ್‌ ಬಲ 1 ಸ್ಥಾನಕ್ಕೆ ಸೀಮಿತಗೊಂಡಿದೆ.

Follow Us:
Download App:
  • android
  • ios