Udupi Election Results 2023: ಕಾಂಗ್ರೆಸ್ ಹಿರಿಯ ನಾಯಕರ ರಾಜಕೀಯ ನಿವೃತ್ತಿಗೆ ಕಾರಣವಾದ ಉಡುಪಿ ಫಲಿತಾಂಶ
ಉಡುಪಿ ಜಿಲ್ಲೆಯಲ್ಲಿ ಈ ಬಾರಿಯೂ ಕೂಡ ಐದು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರ ರಾಜಕೀಯ ನಿವೃತ್ತಿಗೆ ಕಾರಣವಾಗಿದೆ.
ಉಡುಪಿ (ಮೇ.15): ರಾಜ್ಯಾದ್ಯಂತ ಸೋಲು ಕಂಡರೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಅದರಲ್ಲೂ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಎಕ್ಸ್ಪರಿಮೆಂಟ್ ಮಾಡುವ ಮೂಲಕ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಮತದಾರರು ಈ ನಾಲ್ವರನ್ನು ಕೂಡ ಆಯ್ಕೆ ಮಾಡುವ ಮೂಲಕ ಬಿಜೆಪಿ ಎಕ್ಸ್ಪರಿಮೆಂಟ್ ಗೆ ಜೈ ಅಂದಿದ್ದಾರೆ. ಅದರಲ್ಲೂ ಕಾಪು ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಆರಿಸಿ ಬರುವ ಮೂಲಕ ಅನುಭವಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ರಾಜಕೀಯ ನಿವೃತ್ತಿ ಕೊಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿಯೂ ಕೂಡ ಐದು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಕೊನೆಯ ತನಕ ಕಾತುರತೆ ಮೂಡಿಸಿದ ಐದು ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಆರಿಸುವ ಮೂಲಕ ಕಾಂಗ್ರೆಸ್ ಗ್ಯಾರಂಟಿಯನ್ನು ಉಡುಪಿಯ ಮತದಾರರು ಧಿಕ್ಕರಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಇನ್ನು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಎಕ್ಸ್ಪರಿಮೆಂಟ್ ಮಾಡಿತ್ತು. ಉದ್ಯಮಿ ಬಂಟ ಸಮುದಾಯದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಬಿಜೆಪಿ ಕಾಪು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಎಕ್ಸ್ಪರಿಮೆಂಟ್ ಮಾಡಿತ್ತು. ಕಾಂಗ್ರೆಸ್ ನಿಂದ ಮೂರು ಬಾರಿ ಶಾಸಕ ಮತ್ತು ಒಂದು ಬಾರಿ ಲೋಕಸಭಾ ಸದಸ್ಯರಾಗಿರುವ ಅನುಭವವಿರುವ ವಿನಯ್ ಕುಮಾರ್ ಸೊರಕೆ ಅವರು ಕಣದಲ್ಲಿದ್ದರು. ಸಾಕಷ್ಟು ಕುತೂಹಲ ಮೂಡಿಸಿದ್ದ ಸ್ಪರ್ಧೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ವಿಜಯ ಪತಾಕೆ ಹಾರಿಸಿದ್ದಾರೆ. ಕಾಂಗ್ರೆಸ್ ನ ಈ ಸೋಲು ಇತ್ತ ಓರ್ವ ಅನುಭವಿ ಕಾಂಗ್ರೆಸ್ ರಾಜಕಾರಣಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿದೆ ಎನ್ನಬಹುದು. ಯಾಕಂದ್ರೆ ಪ್ರಚಾರದ ಉದ್ದಕ್ಕೂ ಸೊರಕೆ ಇದು ತನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು.
ಫಲಿತಾಂಶ ಬಂದ ನಂತರವೂ ಮಾದ್ಯಮಗಳ ಜೊತೆ ಮಾತನಾಡಿದ ವಿನಯ ಕುಮಾರ ಸೊರಕೆ, ರಾಜಕೀಯ ನಿವೃತ್ತಿ ಯ ಸುಳಿವು ನೀಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬರಿಗಾಲಿನ ಸಂತ ಬಡವರ ಮನೆಯ ಮಗ ಹೀಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಸಂಘದ ಕಟ್ಟಾಳು ಗುರುರಾಜಶೆಟ್ಟಿ ಗಂಟಿ ಹೊಳೆ ಈ ಬಾರಿ ಬೈಂದೂರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಅನುಭವ ಇರುವ ಹಿಂದುಳಿದ ವರ್ಗದ ನಾಯಕ ಗೋಪಾಲ ಪೂಜಾರಿ ಕಣದಲ್ಲಿದ್ದರು.
ಬೈಂದೂರು ಬಿಜೆಪಿಯಲ್ಲಿನ ಕೆಲವು ಅತೃಪ್ತ ನಾಯಕರ ವಿರೋಧದ ನಡುವೆಯು ಬಿಜೆಪಿ ಕಾರ್ಯಕರ್ತರ ಸಂಘಟಿತ ಹೋರಾಟದಿಂದಾಗಿ ಗುರುರಾಜಶೆಟ್ಟಿ ಗಂಟಿಹೊಳೆ ಜಯಗಳಿಸಿದ್ದಾರೆ. ಸ್ವತಃ ಡಿಕೆ ಶಿವಕುಮಾರ್ ಬಂದು ಬೈಂದೂರಿನಲ್ಲಿ ಪ್ರಚಾರ ಮಾಡಿದ್ದರು , ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಈ ಕ್ಷೇತ್ರದ ಫಲಿತಾಂಶದ ಬಗ್ಗೆ ಕುತೂಹಲ ಹೊಂದಿದ್ದರು.
ಪುತ್ತೂರಿನಲ್ಲಿ ನಳಿನ್-ಡಿವಿಎಸ್‌ಗೆ ಶ್ರದ್ಧಾಂಜಲಿ ಬ್ಯಾನರ್: ಚಪ್ಪಲಿ ಹಾರ ಹಾಕಿ ಆಕ್ರೋಶ!
ಕಾಂಗ್ರೆಸ್ ಟಿಕೆಟ್ ಪಡೆದು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ ದಿನದಿಂದಲೂ ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಾ ಬಂದಿದ್ದ ಗೋಪಾಲ ಪೂಜಾರಿ ಅವರ ಈ ಸೋಲು ರಾಜಕೀಯ ನಿವೃತ್ತಿ ಪಡೆಯುವಂತೆ ಮಾಡಿದೆ.
KARNATAKA ELECTION RESULTS 2023: ಬೆಳಗಾವಿಯಲ್ಲಿ ಬಿಜೆಪಿ ಯಡವಟ್ಟು, ಮಾಮನಿ ಕುಟುಂಬ ಸೋತಿದ್ದೇಗೆ?
ಒಟ್ಟಾರೆಯಾಗಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಪು ಮತ್ತು ಬೈಂದೂರು ಕ್ಷೇತ್ರದ ಅಭ್ಯರ್ಥಿಗಳು ಸೋಲಿನಿಂದ ಬಹುತೇಕ ರಾಜಕೀಯ ನಿವೃತ್ತಿ ತೆಗದುಕೊಳ್ಳುವುದು ಮಾಡಿದೆ. ಇನ್ನು ಗೆದ್ದ ಅಭ್ಯರ್ಥಿಗಳು ಕ್ಷೇತ್ರದ ಬಗ್ಗೆ ಕಂಡ ಕನಸು ನೀಡಿದ ಆಶ್ವಾಸನೆಯನ್ನು ಪ್ರತಿಪಕ್ಷದಲ್ಲಿ ಕುಳಿತು ಹೇಗೆ ಪೂರೈಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.