ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಧನಂಜಯ ಬದಲು ಮಾಜಿ ಶಾಸಕ, ಎಚ್‌.ಡಿ. ದೇವೇಗೌಡರ ಮಾನಸ ಪುತ್ರ ವೈಎಸ್‌ವಿ ದತ್ತಾ ಅವರಿಗೆ ನೀಡಲು ಪಕ್ಷ ತೀರ್ಮಾನ ತೆಗೆದುಕೊಂಡಿದೆ.

ಚಿಕ್ಕಮಗಳೂರು (ಏ.15) : ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಧನಂಜಯ ಬದಲು ಮಾಜಿ ಶಾಸಕ, ಎಚ್‌.ಡಿ. ದೇವೇಗೌಡರ ಮಾನಸ ಪುತ್ರ ವೈಎಸ್‌ವಿ ದತ್ತಾ ಅವರಿಗೆ ನೀಡಲು ಪಕ್ಷ ತೀರ್ಮಾನ ತೆಗೆದುಕೊಂಡಿದೆ.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ದತ್ತಾ ಅವರ ಹೆಸರು ಘೋಷಣೆ ಮಾಡುವ ಮೂಲಕ ಧನಂಜಯ ಅವರ ಹೆಸರನ್ನು ಕೈಬಿಡಲಾಗಿದೆ. ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಯಾರೆಂಬ ಗೊಂದಲಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.

ನನ್ನ ವಿರುದ್ಧ ಭ್ರಷ್ಟ​ತೆ ಸಾಬೀ​ತಾದ್ರೆ 1 ಕೋಟಿ ರು. ಬಹು​ಮಾ​ನ: ಹರತಾಳು ಹಾಲಪ್ಪ ಸವಾಲು

ಮೂಡಿಗೆರೆ ಕ್ಷೇತ್ರ: ಜಿಲ್ಲೆಯ ಮೂಡಿಗೆರೆ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ(BV Ningayya) ಅವರ ಹೆಸರು ಮೊದಲ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಟಿಕೆಟ್‌ ಸಿಗದೆ ಇದ್ದರಿಂದ ಬಿಜೆಪಿಗೆ ಗುಡ್‌ ಬೈ ಹೇಳಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಶುಕ್ರವಾರ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರು ಈ ಬಾರಿ ಮೂಡಿಗೆರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಇಚ್ಛೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ . ಹಾಗಾಗಿ ಶನಿವಾರ ಸಂಜೆ, ತಪ್ಪಿದರೆ ಭಾನುವಾರ ಮೂಡಿಗೆರೆ ಕ್ಷೇತ್ರದ ಟಿಕೆಟ್‌ ಫೈನಲ್‌ ಆಗಲಿದೆ.

ಬಿ.ಬಿ. ನಿಂಗಯ್ಯಮತ್ತು ಎಂ.ಪಿ. ಕುಮಾರಸ್ವಾಮಿ(MP Kumaraswamy) ಇಬ್ಬರೂ ಬೆಂಗಳೂರಲ್ಲೆ ಇದ್ದು ಜೆಡಿಎಸ್‌ ವರಿಷ್ಠರ ಸಂಪರ್ಕದಲ್ಲಿ ಇದ್ದಾರೆ

ಕಡೂರಿನಲ್ಲಿ ಆಗಿದ್ದೇನು ?

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಹಲವು ವರ್ಷಗಳಿಂದ ನೆಲೆವೂರಿದ್ದು, ತನ್ನದೆಯಾದ ನಿಷ್ಠಾವಂತ ಕಾರ್ಯಕರ್ತರನ್ನು ಉಳಿಸಿಕೊಂಡಿದೆ.

ಪರಿಸ್ಥಿತಿ ಹೀಗಿದ್ದರೂ ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಡೆಯಿಂದ ಮುನಿಸಿಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು, ಈ ಬಾರಿ ಕಡೂರಿನಿಂದ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲೂ ಇದ್ದರು. ಆದರೆ, ಅವರ ಲೆಕ್ಕಾಚಾರದಂತೆ ಕಾಂಗ್ರೆಸ್‌ನಲ್ಲಿ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಭೇಟಿ ಮಾಡಿದರು.

ಇತ್ತೀಚೆಗೆ ಆಗಿರುವ ಬೆಳವಣಿಗೆಯನ್ನು ಮರೆತು ಎಚ್‌.ಡಿ. ದೇವೇಗೌಡ ಅವರು ಎಚ್‌.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಎಚ್‌.ಡಿ.ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ಅವರನ್ನು ದತ್ತ ಅವರ ಮನೆಗೆ ಕಳುಹಿಸಿ ಜೆಡಿಎಸ್‌ಗೆ ಬರ ಮಾಡಿಕೊಂಡು, ಟಿಕೆಟ್‌ ನೀಡುವ ಭರವಸೆ ಸಹ ನೀಡಿದರು. ಹೀಗೆ ಜೆಡಿಎಸ್‌ನಲ್ಲಿ ಅಂದುಕೊಂಡಂತೆ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆದಿದ್ದರಿಂದ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ವೈಎಸ್‌ವಿ ದತ್ತಾ ಅವರ ಹೆಸರನ್ನು ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ನಿಂಗಯ್ಯಗೆ ಟಿಕೆಟ್‌ ಮಿಸ್‌ ಆಗುವ ಸಾಧ್ಯತೆ ?

ಜೆಡಿಎಸ್‌ ಅಭ್ಯರ್ಥಿ(JDS Canddidate)ಗಳ ಮೊದಲ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಬಿ.ಬಿ. ನಿಂಗಯ್ಯ ಅವರ ಹೆಸರು ಪ್ರಕಟಿಸಲಾಗಿತ್ತು.

ಆದರೆ, ಪಂಚರತ್ನ ಯಾತ್ರೆ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ನಂತರ ಮೂಡಿಗೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಬದಲಾವಣೆಯ ಗಾಳಿ ಸುದ್ದಿ ಹರಡಿತ್ತು.

ಕಡೂರಿನ ಎಪಿಎಂಸಿ ಆವರಣದಲ್ಲಿ ನಡೆದ ಜೆಡಿಎಸ್‌ ಸಮಾವೇಶಕ್ಕೆ ಆಗಮಿಸಿದ್ದ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಅವರು ಚಿಕ್ಕಮಗಳೂರು ಹಾಗೂ ಮೂಡಿಗೆರೆ ಅಭ್ಯರ್ಥಿಗಳ ಬಗ್ಗೆ ಇನ್ನೊಮ್ಮೆ ಚರ್ಚಿಸಲಾಗುವುದು ಎಂಬ ಸುಳಿವು ನೀಡಿದ್ದರು.

ಮೂಡಿಗೆರೆ ಕ್ಷೇತ್ರದಲ್ಲಿ ಮೂರು ಬಾರಿ ನಡೆಸಿರುವ ಸಮೀಕ್ಷೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಸಾಲಿನಲ್ಲಿ ಎಂ.ಪಿ. ಕುಮಾರಸ್ವಾಮಿ ಮುಂಚೂಣಿಯಲ್ಲಿದ್ದರಿಂದ ನಿಂಗಯ್ಯ ಅವರ ಬದಲಿಗೆ ಎಂ.ಪಿ. ಕುಮಾರಸ್ವಾಮಿಗೆ ಜೆಡಿಎಸ್‌ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಎಂ.ಪಿ.ಕುಮಾರಸ್ವಾಮಿ, ರಘು ಆಚಾರ್‌ ಜೆಡಿಎಸ್‌ ಸೇರ್ಪಡೆ

ಕಡೂರು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಕುಮಾರಣ್ಣನವರು ಹೇಳಿದ್ದರು. ಈಗ ವೈಎಸ್‌ವಿ ದತ್ತಾ ಅವರ ಹೆಸರು ಅಂತಿಮಗೊಳಿಸಿದ್ದಾರೆ. ಇದರಿಂದಾಗಿ ಏನೂ ಬೇಸರ ಇಲ್ಲ.

ಕುಮಾರಣ್ಣನವರು ಈ ರಾಜ್ಯದ ಸಿಎಂ ಆಗಬೇಕು. ಅವರ ಕೈ ಬಲಪಡಿಸಬೇಕು, ಹಾಗಾಗಿ ಅವರೊಟ್ಟಿಗೆ ಇದ್ದು ರಾಜ್ಯದಲ್ಲಿ ಪಕ್ಷದ ಸಂಘಟನೆಯ ಕೆಲಸ ಮಾಡುತ್ತೇನೆ.

- ಸಿ.ಎಂ. ಧನಂಜಯ

ಮೂಡಿಗೆರೆಯ ನಿಂಗಯ್ಯ ಅವರು ಬೆಂಗಳೂರಿಗೆ ಬಂದಿದ್ದಾರೆ. ನಮ್ಮನ್ನು ಭೇಟಿ ಮಾಡಿದ್ದಾರೆ. ಎಂ.ಪಿ. ಕುಮಾರಸ್ವಾಮಿ ಅವರು ಸಹ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಕೂಡ ಇಲ್ಲೇ ಇದ್ದಾರೆ. ಮೂಡಿಗೆರೆ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ಈ ಇಬ್ಬರ ಸಮ್ಮುಖದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು.

- ಎಚ್‌.ಡಿ. ರೇವಣ್ಣ