ಉತ್ತರ ಕನ್ನಡ: ಹೆಬ್ಬಾರ್-ಪಾಟೀಲ್ ಮತ್ತೊಮ್ಮೆ ಕಾಳಗಕ್ಕೆ ಅಖಾಡ ಸಿದ್ಧ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಯಲ್ಲಾಪುರ- ಮುಂಡಗೋಡ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರತೊಡಗಿದೆ.
ಸಂತೋಷ ದೈವಜ್ಞ
ಮುಂಡಗೋಡ (ಏ.15) : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಯಲ್ಲಾಪುರ- ಮುಂಡಗೋಡ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರತೊಡಗಿದೆ.
ಬಿಜೆಪಿ(BJP)ಯಿಂದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್(Shivaram Hebbar) ಹಾಗೂ ಕಾಂಗ್ರೆಸ್ಸಿನಿಂದ ಮಾಜಿ ಶಾಸಕ ವಿ.ಎಸ್. ಪಾಟೀಲ(VS Patil) ನಡುವೆ ಕಾಳಗಕ್ಕೆ ಅಖಾಡ ಸಿದ್ಧವಾಗಿದೆ. ಹಾಲಿ ಮತ್ತು ಮಾಜಿಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
Karnataka election 2023: ಕಿತ್ತೂರು ಕರ್ನಾಟಕದಲ್ಲಿ ಪ್ರಬಲ ಲಿಂಗಾಯತರಿಗೆ ಬಿಜೆಪಿ ಮಣೆ
2013 ಮತ್ತು 2018 ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 2 ಬಾರಿ ಹಾಗೂ 2019ರಲ್ಲಿ ಆಪರೇಷನ್ ಕಮಲಕ್ಕೊಳಗಾಗಿ ಉಪಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲುವು ಸಾಧಿಸಿರುವ ಶಿವರಾಮ ಹೆಬ್ಬಾರ್ ಈ ಬಾರಿ ಕೂಡ ಬಿಜೆಪಿ ಹುರಿಯಾಳು. ಚುನಾವಣೆಗೆ ಅವರು ರಣಕಹಳೆ ಮೊಳಗಿಸಿದರೆ, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕ ವಿ.ಎಸ್. ಪಾಟೀಲ, ಹೆಬ್ಬಾರ್ ವಿರುದ್ಧ ತೊಡೆ ತಟ್ಟಿದ್ದಾರೆ.
ಕಳೆದ ಉಪ ಚುನಾವಣೆ ಹೊರತುಪಡಿಸಿ ಇನ್ನುಳಿದ ಮೂರು ಚುನಾವಣೆಯಲ್ಲೂ ವಿ.ಎಸ್. ಪಾಟೀಲ ಮತ್ತು ಶಿವರಾಮ ಹೆಬ್ಬಾರ್ ನಡುವೆಯೇ ನೇರಾನೇರ ಸ್ಪರ್ಧೆ ನಡೆದಿದೆ. ಆದರೆ, ಹಿಂದಿನ ಚುನಾವಣೆಗಳಲ್ಲಿ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಯಾದರೆ ವಿ.ಎಸ್. ಪಾಟೀಲ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದರು. ಆದರೆ, ಈಗ ಇಬ್ಬರ ಪಕ್ಷ ಅದಲು ಬದಲಾಗಿರುವುದರಿಂದ ಈ ಚುನಾವಣೆಯಲ್ಲಿ ಹೆಬ್ಬಾರ್ ಬಿಜೆಪಿಯಿಂದ ಹಾಗೂ ವಿ.ಎಸ್. ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಪಕ್ಷ ಬದಲಾದರೂ ಸಂಪ್ರದಾಯದಂತೆ ಇವರಿಬ್ಬರ ನಡುವೆಯೇ ಸ್ಪರ್ಧೆ ಏರ್ಪಡಲಿದ್ದು, ಬೇರೆ ಯಾರೇ ಅಭ್ಯರ್ಥಿಗಳಿದ್ದರೂ ಲೆಕ್ಕಕ್ಕಿಲ್ಲ ಎಂಬ ವಾತಾವರಣ ಇಲ್ಲಿಯದು.
ಕ್ಷೇತ್ರದ ಇತಿಹಾಸ:
ಸುಮಾರು 25 ವರ್ಷಗಳ ಕಾಲ ಮಾಜಿ ಸಚಿವ ಆರ್.ವಿ. ದೇಶಪಾಂಡೆ(RV Deshapande) ಅವರ ಹಿಡಿತದಲ್ಲಿದ್ದ ಹಳಿಯಾಳ ಕ್ಷೇತ್ರವು 2008ರಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರವಾಗಿ ಮರು ವಿಂಗಡಣೆಯಾದ ಬಳಿಕ ಮೊದಲ ಬಾರಿಗೆ ಬಿಜೆಪಿಯಿಂದ ವಿ.ಎಸ್. ಪಾಟೀಲ ಅವರು ಶಿವರಾಮ ಹೆಬ್ಬಾರ್ ವಿರುದ್ಧ ಗೆಲುವು ಸಾಧಿಸಿದರು. ಆಗ ಯಡಿಯೂರಪ್ಪ ಸರ್ಕಾರದಲ್ಲಿ ಸಾಕಷ್ಟುಅನುದಾನ ತಂದು ಕೆಲಸ ಮಾಡಿದರೂ 2013 ಹಾಗೂ 2018ರ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2019ರಲ್ಲಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಿವರಾಮ ಹೆಬ್ಬಾರ್ ಹಾಲಿ ಕಾರ್ಮಿಕ ಸಚಿವರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ.
2019ರಲ್ಲಿ ಬಿಜೆಪಿ ಸೇರಿದ ಶಿವರಾಮ ಹೆಬ್ಬಾರ್ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟವಿ.ಎಸ್. ಪಾಟೀಲ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶಿವರಾಮ ಹೆಬ್ಬಾರ್ ಅವರನ್ನು ಎದುರಿಸಲು ವಿ.ಎಸ್. ಪಾಟೀಲ ಅವರೇ ಪ್ರಬಲ ಅಭ್ಯರ್ಥಿ ಎಂಬುದನ್ನು ಅರಿತ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಕರೆ ತಂದು ಟಿಕೆಟ್ ನೀಡಿದೆ. ಹೀಗಾಗಿ ಜಿದ್ದಾಜಿದ್ದಿನ ಕಣ ರೆಡಿಯಾಗುತ್ತಿದೆ. ಅಭಿವೃದ್ಧಿ ವಿಚಾರಕ್ಕೆ ಬಂದರೆ ಕ್ಷೇತ್ರದಲ್ಲಿ ಇಬ್ಬರೂ ಸಾಕಷ್ಟುಕೆಲಸ ಮಾಡಿದ್ದಾರೆ.
ವಿ.ಎಸ್. ಪಾಟೀಲ್ ಕಾಂಗ್ರೆಸ್ ಸೇರಿದ ಬಳಿಕ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಯಲ್ಲಾಪುರ, ಮುಂಡಗೋಡ ಮತ್ತು ಬನವಾಸಿ ಭಾಗದ ಸಾಕಷ್ಟುಜನ ಮೂಲ ಬಿಜೆಪಿಗರು ಕಾಂಗ್ರೆಸ್ ಸೇರುವ ಮೂಲಕ ವಿ.ಎಸ್. ಪಾಟೀಲ ಅವರನ್ನು ಬೆಂಬಲಿಸುತ್ತಿರುವುದು ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಕಟ್ಟಿದ ಮನೆಯಿಂದ ಹೊರಹೋಗಲು ದುಃಖವಾಗ್ತಿದೆ: ಜಗದೀಶ ಶೆಟ್ಟರ್ ಭಾವುಕ ಮಾತು
ಜಾತಿವಾರು ಮತದಾರರು:
ಕ್ಷೇತ್ರದಲ್ಲಿ 1.80 ಲಕ್ಷ ಮತದಾರರಿದ್ದು, ಬ್ರಾಹ್ಮಣ 30 ಸಾವಿರ, ಮುಸ್ಲಿಂ 25 ಸಾವಿರ, ಲಿಂಗಾಯತ 25 ಸಾವಿರ, ಮರಾಠ ಹಾಗೂ ಗೌಳಿ 30 ಸಾವಿರ, ಈಡಿಗ ನಾಯ್ಕ 20 ಸಾವಿರ, ಎಸ್ಸಿ ಎಸ್ಟಿ30 ಸಾವಿರ ಮತದಾರರಿದ್ದಾರೆ.