Karnataka election 2023: ಕಿತ್ತೂರು ಕರ್ನಾಟಕದಲ್ಲಿ ಪ್ರಬಲ ಲಿಂಗಾಯತರಿಗೆ ಬಿಜೆಪಿ ಮಣೆ
ಶತಾಯ-ಗತಾಯ ಪುನಃ ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ ನಡೆಸಿರುವ ಬಿಜೆಪಿ ಉತ್ತರ ಕರ್ನಾಟಕದಲ್ಲಿ ತನ್ನ ಬೆಂಬಲಕ್ಕೆ ಸದಾ ಇರುವ ಲಿಂಗಾಯತ ಸಮುದಾಯವನ್ನು ಓಲೈಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ.
ಬಸವರಾಜ ಹಿರೇಮಠ
ಧಾರವಾಡ (ಏ.15) : ಶತಾಯ-ಗತಾಯ ಪುನಃ ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ ನಡೆಸಿರುವ ಬಿಜೆಪಿ ಉತ್ತರ ಕರ್ನಾಟಕದಲ್ಲಿ ತನ್ನ ಬೆಂಬಲಕ್ಕೆ ಸದಾ ಇರುವ ಲಿಂಗಾಯತ ಸಮುದಾಯವನ್ನು ಓಲೈಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ.
2018ರಲ್ಲಿ ಉತ್ತರ ಕರ್ನಾಟಕ(North Karnataka)ದ 13 ಜಿಲ್ಲೆಗಳು ಬಿಜೆಪಿಗೆ 54 ಸ್ಥಾನಗಳನ್ನು ಗೆದ್ದುಕೊಟ್ಟಿದ್ದವು. ಈ ಪೈಕಿ ಹೆಚ್ಚಿನ ಸ್ಥಾನಗಳು ಕಿತ್ತೂರು ಕರ್ನಾಟಕದ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳಿಂದ ದೊರೆತಿದ್ದವು.
ಕಟ್ಟಿದ ಮನೆಯಿಂದ ಹೊರಹೋಗಲು ದುಃಖವಾಗ್ತಿದೆ: ಜಗದೀಶ ಶೆಟ್ಟರ್ ಭಾವುಕ ಮಾತು
ದಕ್ಷಿಣ ಕರ್ನಾಟಕ ಮತ್ತು ಮಂಡ್ಯ ಭಾಗದಲ್ಲಿ ಒಕ್ಕಲಿಗರು ಮತ್ತು ಇತರರ ಪ್ರಾಬಲ್ಯ ಇರುವುದರಿಂದ ಅಲ್ಲಿ ಕಾಂಗ್ರೆಸ್ ಮತ್ತು ಜನತಾದಳಕ್ಕೆ ಹೆಚ್ಚಿನ ಬೆಂಬಲ ವ್ಯಕ್ತಗೊಳ್ಳುವ ನಿರೀಕ್ಷೆಯಲ್ಲಿ ಬಿಜೆಪಿ ಅಧಿಕಾರ ತನ್ನ ಕೈಯಿಂದ ತಪ್ಪಬಾರದೆಂಬ ಕಾರಣಕ್ಕೆ ಈ ಬಾರಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಕಿತ್ತೂರು ಕರ್ನಾಟಕದಲ್ಲಿ ಆರು ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇಲ್ಲಿ ವರೆಗೆ ಈ ಆರು ಜಿಲ್ಲೆಗಳ 47 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ಕಾಯ್ದಿರಿಸಿದ ಕ್ಷೇತ್ರಗಳನ್ನು ಬಿಟ್ಟು ಬಹುತೇಕ ಉಳಿದೆಲ್ಲ ಕ್ಷೇತ್ರಗಳಿಗೆ ಲಿಂಗಾಯತರಿಗೆ ಮಣೆ ಹಾಕಿದೆ. ಲಿಂಗಾಯತರಲ್ಲಿಯೇ ವಿವಿಧ ಉಪ ಪಂಗಡಗಳಾದ ಪಂಚಮಸಾಲಿ, ಜಂಗಮ, ಲಿಂಗಾಯತ ರಡ್ಡಿ, ಸಾದರ, ಗಾಣಿಗ, ಬಣಜಿಗ ಇತ್ಯಾದಿಗಳ ನಡುವೆ ಸಮತೋಲನ ಸಾಧಿಸಲು ಕೇಸರಿ ಪಕ್ಷ ಸರ್ಕಸ್ ನಡೆಸಿದೆ.
ಒಬ್ಬರೂ ಬ್ರಾಹ್ಮಣರಿಲ್ಲ:
ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಒಂಭತ್ತು ಜನ ಲಿಂಗಾಯತರಿಗೆ ಸ್ಥಾನ ಸಿಕ್ಕಿದೆ. ಹಾಗೆಯೇ, ಕುರುಬ, ಮರಾಠಾ, ಜೈನ ಅಭ್ಯರ್ಥಿಗಳು ಒಂದೊಂದು ಸ್ಥಾನ ಪಡೆದಿದ್ದಾರೆ. ಇದುವರೆಗೆ ಪ್ರಕಟಿತವಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬ್ರಾಹ್ಮಣರಿಗೆ ಅವಕಾಶವಿಲ್ಲ. 2018ರಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋತ ನಂತರ ಈ ಬಾರಿ ಅವರನ್ನು ಪರಿಗಣಿಸಿಲ್ಲ. ಹಾಗೆಯೇ, ವಿಜಯಪೂರ ಜಿಲ್ಲೆಯಲ್ಲಿ ಒಟ್ಟು ಎಂಟು ಕ್ಷೇತ್ರಗಳಿದ್ದು, ನಾಗಠಾಣ ಪರಿಶಿಷ್ಟವರ್ಗದವರಿಗೆ ಮೀಸಲು. ಇಲ್ಲಿಯ ಅಭ್ಯರ್ಥಿ ಇನ್ನೂ ನಿರ್ಧಾರವಾಗಿಲ್ಲ. ಉಳಿದ ಏಳು ಕ್ಷೇತ್ರಗಳಿಗೆ ಲಿಂಗಾಯತ ಅಭ್ಯರ್ಥಿಗಳಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ ಮುಧೋಳ ಮೀಸಲು ಕ್ಷೇತ್ರವಾಗಿದ್ದು, ಉಳಿದ ಆರು ಕಡೆಗೆ ಲಿಂಗಾಯತರೇ ಅಭ್ಯರ್ಥಿಗಳು. ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರ. ಜಗದೀಶ ಶೆಟ್ಟರ್ ಪ್ರತಿನಿಧಿಸುವ ಹು-ಧಾ ಕೇಂದ್ರ ಕ್ಷೇತ್ರದ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಉಳಿದ ಐದು ಕಡೆಗೆ ಲಿಂಗಾಯತರೇ ಬಿಜೆಪಿ ಅಭ್ಯರ್ಥಿಗಳು. ಹು-ಧಾ ಕೇಂದ್ರಕ್ಕೂ ಮತ್ತೇ ಲಿಂಗಾಯತರೇ ಅಭ್ಯರ್ಥಿ ಆಗುವ ಸಾಧ್ಯತೆಗಳೇ ಹೆಚ್ಚು.
ಜಾತಿಯೇ ಆಧಾರ
ಇನ್ನು, ಹಾವೇರಿ ಜಿಲ್ಲೆಯಲ್ಲಿ ಹಾವೇರಿ ಮೀಸಲು ಕ್ಷೇತ್ರವಾಗಿದ್ದು, ಉಳಿದ ಐದು ಕಡೆಗೆ ಲಿಂಗಾಯತ ಅಭ್ಯರ್ಥಿಗಳಿದ್ದಾರೆ. ಗದಗ ಜಿಲ್ಲೆಯಲ್ಲಿ ಶಿರಹಟ್ಟಿಮೀಸಲು ಕ್ಷೇತ್ರವಾಗಿದ್ದು, ರೋಣ ಕ್ಷೇತ್ರದ ಅಭ್ಯರ್ಥಿ ತೀರ್ಮಾನವಾಗಿಲ್ಲ. ಗದಗ ಹಾಗೂ ನರಗುಂದದಲ್ಲಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು ಲಿಂಗಾಯತರು.
ಇರಿಸು-ಮುರಿಸು:
ಒಂದು ಪ್ರಮುಖ ರಾಜಕೀಯ ಪಕ್ಷವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿ ತನ್ನ ಸಾಧನೆಯ ಬಲದಿಂದ ಚುನಾವಣೆ ಎದುರಿಸುವುದು ಬಿಟ್ಟು ಜಾತಿ ಬಲದ ಆಧಾರದ ಮೇಲೆ ಚುನಾವಣೆ ಗೆಲ್ಲುವ ತಂತ್ರಕ್ಕೆ ಕೈ ಹಾಕಿದ್ದು, ಸುಶಿಕ್ಷಿತ ಬಿಜೆಪಿ ಬೆಂಬಲಿಗರಿಗೆ ಇರಿಸು-ಮುರಿಸು ಮಾಡಿದೆ. ಯಾವುದೇ ಪ್ರಮುಖ ಪಕ್ಷ ತನ್ನ ಸಿದ್ಧಾಂತ ಮತ್ತು ಕ್ಷೇತ್ರದಲ್ಲಿ ಮಾಡಿದ ಸಾಧನೆ ಮೂಲಕ ಜನಬೆಂಬಲವನ್ನು ಪಡೆಯಲು ಯತ್ನಿಸಬೇಕು. ಜಾತ್ಯಾತೀತ ತತ್ವದ ಬಗ್ಗೆ ಮಾತನಾಡುವ ಎಲ್ಲ ಪಕ್ಷಗಳು ಜಾತಿ ಮತ್ತು ಒಳಪಂಗಡಗಳ ಆಧಾರದ ಮೇಲೆ ಮತಗಳಿಸಲು ದೇಶ ಸ್ವತಂತ್ರವಾದ 75 ವರ್ಷಗಳ ನಂತರವೂ ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ ಎಂದು ಹಿರಿಯ ನಾಗರಿಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
Belagavi:ಕಾಂಗ್ರೆಸ್ ಮುಖಂಡನ ಒಡೆತನದ ಬ್ಯಾಂಕ್‌ಗೆ ಐಟಿ ದಾಳಿ, 262 ಲಾಕರ್ ಮಾಹಿತಿಗೆ ಅಪ್ಪ-ಮಗನ ತೀವ್ರ ವಿಚಾರಣೆ
ಬಿಜೆಪಿಯ ಈ ಸರ್ಕಸ್ ಎಲ್ಲ ಲಿಂಗಾಯತರಿಗೆ ಸಂತೃಪ್ತಿ ತಂದಿದೆ ಎಂಬುವಂತಿಲ್ಲ. ವಿವಿಧ ಒಳಪಂಗಡಗಳಿಗೆ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಅಪಸ್ವರವೂ ಇದ್ದೇ ಇದೆ. ಈಗಾಗಲೇ ಧಾರವಾಡ ಗ್ರಾಮೀಣ ಸೇರಿದಂತೆ ಬಾದಾಮಿ, ತೇರದಾಳ, ಬಾಗಲಕೋಟೆ, ಜಮಖಂಡಿ, ವಿಜಯಪೂರ, ಅಥಣಿಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಹಾಗೆಯೇ, ಬಿಜೆಪಿ ಮುಖಂಡರಿಗೆ ಪ್ರತಿಪಕ್ಷಗಳೊಂದಿಗೆ ಹೋರಾಡಿ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಸ್ವಪಕ್ಷೀಯ ಬಂಡಾಯಗಾರರನ್ನು ಎದುರಿಸುವುದೇ ಕಠಿಣ ಸವಾಲಾಗಿದ್ದು ವಿಪರ್ಯಾಸ.