ವಿಧಾನಸಭಾ ಚುನಾವಣಾ ಅಖಾಡಕ್ಕೆ ಕೊಡಗು ಜಿಲ್ಲೆ ಸಜ್ಜುಗೊಂಡಿದೆ. ಬಿಜೆಪಿಯಿಂದ ಹಾಲಿ ಶಾಸಕರಿಗೆ ಟಿಕೆಟ್‌ ನೀಡುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಚುನಾವಣಾ ಕಣಕ್ಕೆ ಸಜ್ಜಾಗಿದ್ದು, ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ.

ವಿಘ್ನೇಶ್ ಎಂ ಭೂತನಕಾಡು

ಮಡಿಕೇರಿ (ಏ.13) : ವಿಧಾನಸಭಾ ಚುನಾವಣಾ ಅಖಾಡಕ್ಕೆ ಕೊಡಗು ಜಿಲ್ಲೆ ಸಜ್ಜುಗೊಂಡಿದೆ. ಬಿಜೆಪಿಯಿಂದ ಹಾಲಿ ಶಾಸಕರಿಗೆ ಟಿಕೆಟ್‌ ನೀಡುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಚುನಾವಣಾ ಕಣಕ್ಕೆ ಸಜ್ಜಾಗಿದ್ದು, ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರ(Madikeri assembly constituency)ದಲ್ಲಿ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌(MP Appachhu ranjan MLA) ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಡಾ. ಮಂಥರ್‌ ಗೌಡ(Dr Manthar gowda) ಅವರನ್ನು ಕಣಕ್ಕಿಲಿಸಲಾಗಿದೆ. ಜೆಡಿಎಸ್‌ನಿಂದ ನಾಪಂಡ ಮುತ್ತಪ್ಪ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿಯಾಗಿ ಅಮೀನ್‌ ಮೋಹಿಸಿನ್‌ ಕಣದಲ್ಲಿದ್ದಾರೆ.

ಬಿಜೆಪಿಯ ಮತ್ತೊಂದು ವಿಕೆಟ್‌ ಪತನ: ಕಮಲಕ್ಕೆ ಗುಡ್‌ಬೈ ಹೇಳಿದ ಎಂ.ಪಿ. ಕುಮಾರಸ್ವಾಮಿ...

ಮಡಿಕೇರಿ ಕ್ಷೇತ್ರ: 2008ರಲ್ಲಿ ಪುನರ್‌ವಿಂಗಡಣೆಗೊಂಡ ಮಡಿಕೇರಿ ವಿಧಾನಸಭೆಯ ಮೂರು ಚುನಾವಣೆಯಲ್ಲೂ ಬಿಜೆಪಿಯ ಅಭ್ಯರ್ಥಿಯಾಗಿದ್ದ ಅಪ್ಪಚ್ಚು ರಂಜನ್‌ ಅವರೇ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಿಬಾರಿಯೂ ಮಾಜಿ ಸಚಿವ ಬಿ.ಎ. ಜೀವಿಜಯ ಅವರೇ ರಂಜನ್‌ಗೆ ಪ್ರತಿಸ್ಪರ್ಧಿಯಾಗಿದ್ದರು. ಈ ಬಾರಿ ಹೊಸ ಅಭ್ಯರ್ಥಿ ಕಾಂಗ್ರೆಸ್‌ನ ಮಂಥರ್‌ ಗೌಡÜ- ರಂಜನ್‌ ನಡುವೆ ಸ್ಪರ್ಧೆ ನಡೆಯಲಿದೆ.

ಕಾಂಗ್ರೆಸ್‌ ಅಭ್ಯರ್ಥಿ ಹಾಸನ ಜಿ.ಪಂ. ಮಾಜಿ ಸದಸ್ಯ ಮಂಥರ್‌ ಗೌಡ, ಮಾಜಿ ಸಚಿವ ಎ. ಮಂಜು ಅವರ ಪುತ್ರ. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ್ತೆ ಸ್ಪರ್ಧೆಗೆ ಇಳಿದಿದ್ದು, ತಮ್ಮ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

ಬೋಪಯ್ಯ- ಪೊನ್ನಣ್ಣ ನಡುವೆ ಫೈಟ್‌: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಬಿಜೆಪಿಯಿಂದ ಕೆ.ಜಿ. ಬೋಪಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ. ಕೆ.ಪಿ.ಸಿ.ಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್‌. ಪೊನ್ನಣ್ಣ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ನೀಡಲಾಗಿದ್ದು, ಇಬ್ಬರ ನಡುವೆ ಈ ಬಾರಿಯ ಚುನಾವಣೆಯಲ್ಲಿ ಭಾರೀ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ. 2008ರಲ್ಲಿ ಪುನರ್‌ವಿಂಗಡನೆಗೊಂಡ ಈ ಕ್ಷೇತ್ರದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರೇ ಗೆಲುವು ಸಾಧಿಸಿಕೊಂಡು ಬರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬೋಪಯ್ಯ ಅವರು ನಾಲ್ಕನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ.

ಬಿಜೆಪಿ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಹಾಲಿ ಶಾಸಕರನ್ನು ಸೋಲಿಸಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನಿಸುತ್ತಿದೆ. ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಗಳು ಮತದಾರರ ಬಳಿಗೆ ತೆರಳುತ್ತಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎ.ಎಸ್‌. ಪೊನ್ನಣ್ಣ ಮತದಾರರ ಮನೆಯತ್ತ ತೆರಳುತ್ತಿದ್ದರೆ, ಇತ್ತ ಬೋಪಯ್ಯ ಎಂದಿನಂತೆ ಕ್ಷೇತ್ರ ಸಂಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

2018ರ ಚುನಾವಣೆ ಫಲಿತಾಂಶ

ಮಡಿಕೇರಿ ಕ್ಷೇತ್ರ

  • ಎಂ.ಪಿ. ಅಪ್ಪಚ್ಚು ರಂಜನ್‌ ಬಿಜೆಪಿ 70,631 (ಮತಗಳು)
  • ಬಿ.ಎ. ಜೀವಿಜಯ ಜೆಡಿಎಸ್‌ 54,616 (ಮತಗಳು)
  • ಕೆ.ಪಿ. ಚಂದ್ರಕಲಾ ಕಾಂಗ್ರೆಸ್‌ 38,219 (ಮತಗಳು)

ವಿರಾಜಪೇಟೆ ಕ್ಷೇತ್ರ

  • ಕೆ.ಜಿ. ಬೋಪಯ್ಯ ಬಿಜೆಪಿ 77,944 (ಮತಗಳು)
  • ಅರುಣ್‌ ಮಾಚಯ್ಯ ಕಾಂಗ್ರೆಸ್‌ 64,591 (ಮತಗಳು)
  • ಸಂಕೇತ್‌ ಪೂವಯ್ಯ ಜೆಡಿಎಸ್‌ 11,224 (ಮತಗಳು)

ಕಾಂಗ್ರೆಸ್‌ಗೆ ತಲೆನೋವಾದ ಹರಪಳ್ಳಿ ರವೀಂದ್ರ

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಹರಪಳ್ಳಿ ರವೀಂದ್ರ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಡಾ. ಮಂಥರ್‌ ಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ರವೀಂದ್ರ, ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ನಾಯಕರು ಅವರ ಮನೆಗೆ ತೆರಳಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿ ಮನವೊಲಿಸಲು ಯತ್ನಿಸಿದರೂ ರವೀಂದ್ರ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿ ಬಂಡಾಯವಿಲ್ಲ, ಬೇಸರವಷ್ಟೇ!

ಬಿಜೆಪಿಯ ಮೊದಲ ಪಟ್ಟಿಬಿಡುಗಡೆಯಾಗಿದ್ದು, ಎರಡೂ ಕ್ಷೇತ್ರಕ್ಕೆ ಹೆಚ್ಚು ಆಕಾಂಕ್ಷಿಗಳಿದ್ದರು. ಮಡಿಕೇರಿ ಕ್ಷೇತ್ರಕ್ಕೆ ಶಾಸಕ ಅಪ್ಪಚ್ಚು ರಂಜನ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಭಾರತೀಶ್‌, ಡಾ.ಬಿ.ಸಿ. ನವೀನ್‌ ಕುಮಾರ್‌ ಹೆಸರು ಅಂತಿಮವಾಗಿತ್ತು. ಜಿಪಂ ಮಾಜಿ ಸದಸ್ಯ ದೀಪಕ್‌ ಕೂಡ ಆಕಾಂಕ್ಷಿಯಾಗಿದ್ದರು. ವಿರಾಜಪೇಟೆ ಕ್ಷೇತ್ರದಿಂದ ಶಾಸಕ ಕೆ.ಜಿ. ಬೋಪಯ್ಯ, ಶಾಂತೆಯಂಡ ರವಿ ಕುಶಾಲಪ್ಪ, ಮನುಮುತ್ತಪ್ಪ ಅವರ ಹೆಸರಿತ್ತು. ತೇಲಪಂಡ ಶಿವಕುಮಾರ್‌ ನಾಣಯ್ಯ, ರೀನಾ ಪ್ರಕಾಶ್‌ ಮತ್ತಿತರರು ಆಕಾಂಕ್ಷಿಯಾಗಿದ್ದರು. ಆದರೆ ಶಾಸಕರಿಗೇ ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಇದರಿಂದ ಆಕಾಂಕ್ಷಿಯಾಗಿದ್ದವರು ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದು ಸ್ವಾಗತಿಸಿದ್ದು, ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಬಂಡಾಯ ಇಲ್ಲ. ಬದಲಿಗೆ ಆಕಾಂಕ್ಷಿಯಾಗಿದ್ದ ಕೆಲವರಿಗೆ ಬೇಸರ ಉಂಟಾಗಿದೆ.

ಅಂಗಾರ, ಮಠಂದೂರಿಗೆ ಟಿಕೆಟ್‌ ತಪ್ಪಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ!

ಪ್ರಮುಖರಿಂದ ನಾಮಪತ್ರ ಸಲ್ಲಿಕೆ

  • ಎಸ್‌ಡಿಪಿಐ ಅಭ್ಯರ್ಥಿಯಾಗಿ ಅಮೀನ್‌ ಮೋಹಿಸಿನ್‌ ಮಡಿಕೇರಿಯಲ್ಲಿ ಏ.13ರಂದು ನಾಮಪತ್ರ ಸಲ್ಲಿಸಲಿದ್ದಾರೆ.
  • ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾ. ಮಂಥರ್‌ ಗೌಡ ಏಪ್ರಿಲ್‌ 17 ರಂದು ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ
  • ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎ. ಎಸ್‌. ಪೊನ್ನಣ್ಣ ವಿರಾಜಪೇಟೆಯಲ್ಲಿ ಏಪ್ರಿಲ್‌ 18 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಪಕ್ಷ ತೀರ್ಮಾನ ತೆಗೆದುಕೊಂಡು ಶಾಸಕರಿಗೆ ಟಿಕೆಟ್‌ ನೀಡಿದೆ. ಇದರಿಂದ ಪಕ್ಷದ ಅಭ್ಯರ್ಥಿಗಳನ್ನು ಮತ್ತೆ ಗೆಲ್ಲಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ನಾವು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು.

- ರಾಬಿನ್‌ ದೇವಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ

ನನಗೆ ವಿರಾಜಪೇಟೆ ಕ್ಷೇತ್ರದ ಟಿಕೆಟ್‌ ಸಿಗದಿರುವ ಬಗ್ಗೆ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನನ್ನನ್ನು ನಂಬಿ ನನ್ನೊಂದಿಗೆ ಹೋರಾಟದಲ್ಲಿ ಮತ್ತು ಸೇವೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟನನ್ನೆಲ್ಲ ಕಾರ್ಯಕರ್ತ ಬಂಧುಗಳಿಗೆ ನಾನು ಚಿರಋುಣಿ

- ಶಾತೆಯಂಡ ರವಿ ಕುಶಾಲಪ್ಪ, ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದವರು, ವಿರಾಜಪೇಟೆ ಕ್ಷೇತ್ರ

ಟಿಕೆಟ್‌ ಸಿಗದಿರುವುದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಹೈಕಮಾಂಡ್‌ ಗುರುತಿಸಿ ಅವಕಾಶ ನೀಡುವ ಸಂದರ್ಭ ಇತ್ತು. ಆದರೆ ಕೆಲವೊಂದು ಒತ್ತಡದಿಂದ ಅವಕಾಶ ಸಿಗಲಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಲಿದ್ದು, ಅವಕಾಶದ ಭರವಸೆಯಲ್ಲಿದ್ದೇನೆ.

- ತೇಲಪಂಡ ಶಿವಕುಮಾರ್‌ ನಾಣಯ್ಯ, ಟಿಕೆಟ್‌ ಆಕಾಂಕ್ಷಿಯಾಗಿದ್ದವರು ವಿರಾಜಪೇಟೆ ಕ್ಷೇತ್ರ

ಟಿಕೆಟ್‌ ತಪ್ಪಿ ಹೋಗಿದಕ್ಕೆ ಬೇಸರವಿದೆ. ನಮ್ಮ ಕಾರ್ಯಕರ್ತರ ಮನವಿಗೆ ಸ್ಪಂದಿಸಬೇಕಿತ್ತು. ಈ ಬಗ್ಗೆ ಹಿರಿಯರು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ನಾವು ದೇಶ ಮೊದಲು ಎಂದು ಕೆಲಸ ಮಾಡಿಕೊಂಡು ಬಂದವರು. ಈಗ ಪಕ್ಷದ ಹಿರಿಯರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ.

- ಭಾರತೀಶ್‌, ಟಿಕೆಟ್‌ ಆಕಾಂಕ್ಷಿಯಾಗಿದ್ದವರು ಮಡಿಕೇರಿ ವಿಧಾನಸಭಾ ಕ್ಷೇತ್ರ