ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಬೆಂಬಲ; ಯಾವುದೇ ಪಕ್ಷ ನನ್ನ ಟಾರ್ಗೆಟ್ ಅಲ್ಲ: ಸುಮಲತಾ
ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಿದ್ದೇನೆಯೇ ಹೊರತು ಯಾವುದೋ ಒಂದು ಪಕ್ಷವನ್ನು ಟಾರ್ಗೆಟ್ ಮಾಡಿಕೊಂಡು ಮುಗಿಸಲು ನಾನು ಬಂದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ಮಂಡ್ಯ (ಮೇ.8) : ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಿದ್ದೇನೆಯೇ ಹೊರತು ಯಾವುದೋ ಒಂದು ಪಕ್ಷವನ್ನು ಟಾರ್ಗೆಟ್ ಮಾಡಿಕೊಂಡು ಮುಗಿಸಲು ನಾನು ಬಂದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್(Sumalata ambarish) ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಶಿಸ್ತು, ಬದ್ಧತೆ, ಕಾರ್ಯವೈಖರಿ ಮೆಚ್ಚಿ ಬಿಜೆಪಿ ಬೆಂಬಲಿಸುತ್ತಿದ್ದೇನೆ. ಯಾವುದೇ ಪಕ್ಷವನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ನಾನೆಂದಿಗೂ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ನಿಂದ ನನಗೆ ಆಹ್ವಾನ ಇರಲಿಲ್ಲ: ಸುಮಲತಾ ಅಂಬರೀಶ್
ವಿಪಕ್ಷಗಳು ಕಂಗಾಲು:
ಪ್ರಧಾನಿ ಮೋದಿ(PM Narendra Modi) ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆಸುತ್ತಿರುವ ರೋಡ್ ಶೋ (Narendra Modi roadshow) ಹಾಗೂ ಪ್ರಚಾರದಿಂದ ವಿರೋಧ ಪಕ್ಷಗಳು ಕಂಗಾಲಾಗಿವೆ. ಈ ಕಾರಣದಿಂದ ಅವರ ಪ್ರಚಾರ ಕಾರ್ಯವನ್ನು ಟೀಕಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ರಾಕ್ಸ್ಟಾರ್, ಸಿನಿಮಾ ನಟರು ಬಂದರೂ ಸ್ವ ಇಚ್ಚೆಯಿಂದ ಇಷ್ಟುಪ್ರಮಾಣದ ಜನ ಬರುವುದಿಲ್ಲ. ಆದರೆ, ವಿಶ್ವ ಮೆಚ್ಚಿದ ಒಬ್ಬ ಮೋದಿಯವರಿಗೆ ಇಷ್ಟೊಂದು ಜನಸಾಗರ ಹರಿದುಬರುತ್ತಿರುವುದರಿಂದ ವಿರೋಧ ಪಕ್ಷಗಳಿಗೆ ನಡುಕ ಉಂಟಾಗಿದೆ ಎಂದರು.
ಕಳೆದ ಆರು ತಿಂಗಳ ಹಿಂದಿನ ಸಮೀಕ್ಷೆಗೂ ನಿನ್ನೆ ಮೊನ್ನೆ ನಡೆದ ಸಮೀಕ್ಷೆಗೂ ಭಾರೀ ವ್ಯತ್ಯಾಸ ಕಾಣುತ್ತಿದ್ದೇವೆ. ಮೋದಿ ಪ್ರಚಾರ ಕಾರ್ಯದಿಂದಾಗಿ 18 ಸ್ಥಾನಗಳು ರಾಜ್ಯದಲ್ಲಿ ಹೆಚ್ಚಾಗಲಿವೆ ಎಂದು ಸಮೀಕ್ಷೆಗಳು ತಿಳಿಸಿವೆ. ಇದು ಸಹಜವಾಗಿ ವಿಪಕ್ಷಗಳಿಗೆ ಆತಂಕ ತಂದೊಡ್ಡಿದೆ ಎಂದರು.
ನೊಂದವರ ಸಮಸ್ಯೆಗಳಿಗೆ ಸ್ಪಂದನೆ ಮುಖ್ಯ:
ಅತಿವೃಷ್ಟಿವೇಳೆ ಪ್ರಧಾನಿಯಂತಹ ಹುದ್ದೆಯಲ್ಲಿರುವವರು ಸ್ಥಳಕ್ಕೆ ಬರಬೇಕೆಂದೇನೂ ಇಲ್ಲ. ಆಡಳಿತ ನಡೆಸುವವರು ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವುದು ಅಗತ್ಯ. ಮನೆ ಕಳೆದುಕೊಂಡವರಿಗೆ, ಹಾನಿಗೊಳಗಾದವರಿಗೆ 1 ಲಕ್ಷ ರು. ನಿಂದ 5 ಲಕ್ಷ ರು.ವರೆಗೂ ಪರಿಹಾರ ನೀಡಲಾಗಿದೆ. ಇಂತಹ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯಬೇಕೋ ಅಥವಾ ಅವರು ಖುದ್ದು ಭೇಟಿ ನೀಡಿ ಭರವಸೆ ನೀಡಿ ಹೋಗುವುದು ಮುಖ್ಯವೋ ಎಂದು ಪ್ರಶ್ನಿಸಿದರು.
ಅಂಬರೀಶ್ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ
ಡಬಲ್ ಎಂಜಿನ್ ಸರ್ಕಾರಗಳ ಜನಪರ ಕಾರ್ಯಗಳಿಂದಾಗಿ ಜನ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲೂ ಸಹ ನಿರೀಕ್ಷೆಗೂ ಮೀರಿದ ಫಲಿತಾಂಶ ಬರುವ ಸಾಧ್ಯತೆಗಳಿವೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಜಗದೀಶ್ ಹಿರೇಮನಿ, ಅಭ್ಯರ್ಥಿ ಅಶೋಕ್ ಜಯರಾಂ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮಂಡ್ಯ ಉಸ್ತುವಾರಿ ಈ.ಸಿ.ನಿಂಗರಾಜ್ಗೌಡ, ಪ.ನಾ. ಸುರೇಶ್, ನಾಗಾನಂದ್ ಗೋಷ್ಠಿಯಲ್ಲಿದ್ದರು.