ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಸಚಿವ ಆರ್‌. ಅಶೋಕ್‌ ಸ್ಪರ್ಧಿಸಿರುವ ಪದ್ಮನಾಭನಗರಕ್ಕೆ ಈಗಾಗಲೇ ಅಧಿಕೃತ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್‌, ಇದೀಗ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸುವ ಹೊಸ ಚೆಕ್‌ ಇಟ್ಟಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರು (ಏ.20): ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಸಚಿವ ಆರ್‌. ಅಶೋಕ್‌ ಸ್ಪರ್ಧಿಸಿರುವ ಪದ್ಮನಾಭನಗರಕ್ಕೆ ಈಗಾಗಲೇ ಅಧಿಕೃತ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್‌, ಇದೀಗ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸುವ ಹೊಸ ಚೆಕ್‌ ಇಟ್ಟಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ. ಇದರಿಂದಾಗಿ ಬುಧವಾರ ಬಿ ಫಾರಂ ಸಹಿತವಾಗಿ ಬುಧವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ರಘುನಾಥ ನಾಯ್ಡು ಹೈಕಮಾಂಡ್‌ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಿದರೆ ತಾವು ಹಿಂದೆ ಸರಿಯುವುದಾಗಿಯೂ ಹೇಳಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಕಂದಾಯ ಸಚಿವ ಆರ್‌.ಅಶೋಕ್‌ ಪ್ರತಿನಿಧಿಸುವ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಇಬ್ಬರಲ್ಲಿ ಯಾರನ್ನು ಅಂತಿಮವಾಗಿ ಕಣಕ್ಕಿಳಿಸಲಿದೆ ಎಂಬ ಕುತೂಹಲ ಹುಟ್ಟುಹಾಕಲಾಗಿದೆ.

ಟೈಲರ್‌ ವೃತ್ತಿ... ಹೈನುಗಾರಿಕೆ ಉಪವೃತ್ತಿ...ಈಗ ಬಿಜೆಪಿ ಅಭ್ಯರ್ಥಿ: ಸುಳ್ಯ ಕ್ಷೇತ್ರದಿಂದ ಭಾಗೀರಥಿ ಮುರುಳ್ಯ ಸ್ಪರ್ಧೆ

ಈ ಸಂಬಂಧ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿಜೆಪಿ, ಜೆಡಿಎಸ್‌ನವರು ಚೆಸ್‌ ಆಡುತ್ತಿದ್ದಾರೆ ನಾವು ಆಡೋದು ಬೇಡವಾ? ಹಾಗಾಗಿಯೇ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಘುನಾಥ ನಾಯ್ಡು ಅವರ ಜತೆಗೆ ಸಂಸದ ಡಿ.ಕೆ.ಸುರೇಶ್‌ ಅವರೂ ನಾಮಪತ್ರ ಸಲ್ಲಿಸಲಿದ್ದಾರೆ. ಹೈಕಮಾಂಡ್‌ ನಿರ್ಧಾರದ ಬಳಿಕ ಅಂತಿಮವಾಗಿ ಯಾರು ಕಣದಲ್ಲಿ ಉಳಿಯಬೇಕು ಎಂಬುದು ತೀರ್ಮಾನವಾಗುತ್ತದೆ. ನಾವೂ ಚೆಸ್‌ ಆಡುತ್ತಿದ್ದೇವೆ ಎಂದು ಹೇಳಿದರು.

ಸುರೇಶ್‌ ಬಂದರೆ ಹಿಂದೆ ಸರಿಯುತ್ತೇನೆ: ಮತ್ತೊಂದಡೆ ಕಾಂಗ್ರೆಸ್‌ ಅಭ್ಯರ್ಥಿ ರಘುನಾಥ್‌ ನಾಯ್ಡು ಮಾತನಾಡಿ, ಪಕ್ಷದ ಸೂಚನೆಯಂತೆ ಪದ್ಮನಾಭನಗರಕ್ಕೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದಲ್ಲಿನ ಬೆಳೆವಣಿಗೆಯಲ್ಲಿ ಹೈಕಮಾಂಡ್‌ ನಾಯಕರು ಸೂಚಿಸಿದರೆ ಗುರುವಾರ ಮಧ್ಯಾಹ್ನ ಡಿ.ಕೆ.ಸುರೇಶ್‌ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಅವರು ನಾಮಪತ್ರ ಸಲ್ಲಿಸಿದರೆ ನಾನು ಕಣದಿಂದ ಹಿಂದೆ ಸರಿಯಲು ಒಪ್ಪಿದ್ದೇನೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕಾಂಗ್ರೆಸ್‌ನ ಬೈರತಿ ಸುರೇಶ್‌ ಆಸ್ತಿ 649 ಕೋಟಿ: ಸಿಎಂ ಬೊಮ್ಮಾಯಿ ಆಸ್ತಿ 3 ಪಟ್ಟು ಹೆಚ್ಚಳ

ನಾಮಪತ್ರ ಸಲ್ಲಿಸಲು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರ ಸೂಚನೆಗಾಗಿ ಕಾಯುತ್ತಿದ್ದೇನೆ. ಪದ್ಮನಾಭನಗರದಿಂದ ನಾಮಪತ್ರ ಸಲ್ಲಿಸಲು ನಮ್ಮ ಪಕ್ಷದ ಅಭ್ಯರ್ಥಿ ರಘುನಾಥ ನಾಯ್ಡು ಕೂಡ ಆಹ್ವಾನಿಸಿದ್ದಾರೆ. ಪಕ್ಷದಲ್ಲಿ ಒಂದಷ್ಟುರಾಜಕೀಯ ಲೆಕ್ಕಾಚಾರಗಳು ನಡೆದಿವೆ. ಗುರುವಾರ ಮಧ್ಯಾಹ್ನ 3 ಗಂಟೆ ವರೆಗೂ ಅಭ್ಯರ್ಥಿ ಬದಲಾವಣೆಗೆ ಅವಕಾಶವಿದೆ. ನನಗೆ ವೈಯಕ್ತಿಕವಾಗಿ ವಿಧಾನಸಭೆ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ. ಆದರೆ, ಪಕ್ಷದ ನಾಯಕರು, ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಮುಖ್ಯ. ಶುಭ ಘಟಿಗೆ ಬಂದಾಗ ಎಲ್ಲವೂ ನಡೆಯುತ್ತದೆ.
- ಡಿ.ಕೆ.ಸುರೇಶ್‌, ಸಂಸದ