ಬಡವರು ಮತ್ತು ರೈತರ ಕಷ್ಟನಿವಾರಣೆಗೆ ಶ್ರಮಿಸುತ್ತಿರುವ, ಜಗತ್ತಿನಲ್ಲೇ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪದೇಪದೇ ಕೀಳು ಅಭಿರುಚಿಯ ಪದಗಳಿಂದ ಅವಮಾನಿಸುತ್ತಿದೆ.
ಹುಬ್ಬಳ್ಳಿ (ಏ.29): ಬಡವರು ಮತ್ತು ರೈತರ ಕಷ್ಟನಿವಾರಣೆಗೆ ಶ್ರಮಿಸುತ್ತಿರುವ, ಜಗತ್ತಿನಲ್ಲೇ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪದೇಪದೇ ಕೀಳು ಅಭಿರುಚಿಯ ಪದಗಳಿಂದ ಅವಮಾನಿಸುತ್ತಿದೆ. ‘ಮೌತ್ ಕಾ ಸೌದಾಗರ್’, ‘ಕೀಳು ಜಾತಿಯ ಮನುಷ್ಯ’ದಂಥ ಪದ ಪ್ರಯೋಗದ ಬಳಿಕ ಇದೀಗ ವಿಷ ಸರ್ಪಕ್ಕೆ ಹೋಲಿಸುತ್ತಿದೆ. ಆದರೆ, ಕಾಂಗ್ರೆಸ್ಸಿಗರು ಮೋದಿ ಅವರನ್ನು ಬೈದಷ್ಟೂ ಕಮಲ ಹೆಚ್ಚೆಚ್ಚು ಅರಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಮೂಲಕ ‘ಮೋದಿ ವಿಷ ಸರ್ಪವಿದ್ದಂತೆ. ನೀವೇನಾದರೂ ವಿಷ ಇದೆಯೋ, ಇಲ್ಲವೋ ಎಂದು ನೆಕ್ಕಲು ಹೋದರೆ ಸತ್ತ ಹಾಗೆ’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನವಲಗುಂದ ಕ್ಷೇತ್ರದ ಅಣ್ಣಿಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಪರ ಪ್ರಚಾರ ಸಭೆಯಲ್ಲಿ ಶುಕ್ರವಾರ ಮಾತನಾಡಿ, ಮೋದಿ ಒಬ್ಬ ಬಡ ಕುಟುಂಬದಿಂದ ಬಂದಂಥ ವ್ಯಕ್ತಿ. ಚಹಾ ಮಾರಿಕೊಂಡು ಜೀವನ ಸಾಗಿಸುತ್ತಾ ಸಾಮಾಜಿಕ ಜೀವನ ಆರಂಭಿಸಿದವರು. ಇದೀಗ ಇಡೀ ದೇಶವೇ ಹೆಮ್ಮೆ ಪಡುವಂತೆ ಕೆಲಸ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ದೇಶದ ಕೀರ್ತಿಯನ್ನೂ ಹೆಚ್ಚಿಸಿದ್ದಾರೆ. ಜಗತ್ತಿನ ಯಾವುದೇ ದೇಶಕ್ಕೆ ತೆರಳಿದರೂ ಮೋದಿ ಮೋದಿ... ಎಂಬ ಜೈಕಾರಗಳು ಕೇಳಿ ಬರುತ್ತವೆ.
ಕಾಂಗ್ರೆಸ್‌ಗೆ ನೀಡುವ ಮತ ಪಿಎಫ್‌ಐನಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದಂತೆ: ಜೆ.ಪಿ.ನಡ್ಡಾ
ಆದರೆ, ಇಲ್ಲಿ ಕಾಂಗ್ರೆಸ್ ಮಾತ್ರ ಬರೀ ಅವರನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಬಾಬಾ ‘ಮೌತ್ ಕಾ ಸೌದಾಗರ್’ (ಸಾವಿನ ವ್ಯಾಪಾರಿ) ಎಂದು ಟೀಕಿಸಿದ್ದರು. ಇನ್ನು ಪ್ರಿಯಾಂಕಾ ಗಾಂಧಿ ಕೀಳು ಜಾತಿಯ ಮನುಷ್ಯ ಎಂದು ಹೀಗಳೆದಿದ್ದರು. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷ ಸರ್ಪ, ಮುಟ್ಟಲು ಹೋದರೆ ವಿಷ ತಗುಲುತ್ತದೆ ಎಂದು ಟೀಕಿಸಿದ್ದಾರೆ. ಇಂಥವರನ್ನು ಅಧಿಕಾರಕ್ಕೆ ತಂದು ಕೂಡಿಸಬೇಕಾ? ಅಥವಾ ಬಡವರು, ರೈತರು, ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಬಿಜೆಪಿಯನ್ನು ಗೆಲ್ಲಿಸಬೇಕಾ? ಎಂದು ಯೋಚನೆ ಮಾಡಿ. ಇಂಥವರನ್ನು ಮನೆಗೆ ಕಳುಹಿಸಲು ಇದು ಸಕಾಲ. ಆ ಕೆಲಸ ನೀವೆಲ್ಲ ಮಾಡುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು.
ಕೇಸ್ ದಾಖಲಿಸಲಿ: ಇನ್ನು ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ ದಂಗೆ ಆಗುತ್ತದೆ ಎಂದು ನಾನು ಹೇಳಿದ್ದೆ. ಆ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಅದಕ್ಕಾಗಿ ಕಾಂಗ್ರೆಸ್‌ನವರು ನನ್ನ ಮೇಲೆ ಕೇಸ್ ಮಾಡಿದ್ದಾರೆ. ಕೇಸ್ ಮಾಡಿಕೊಳ್ಳಲಿ ಬೇಡ ಎಂದವರು ಯಾರು? ಇಂಥ ಕೇಸ್‌ಗಳಿಗೆಲ್ಲ ನಾನು ಹೆದರಲ್ಲ. ದೇಶದ್ರೋಹಿ ಪಿಎಫ್‌ಐ ಬ್ಯಾನ್ ಮಾಡಿದ್ದೇವೆ. ಅದನ್ನು ನಿಷೇಧಿಸಿ ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿ ಮಾಡಿದ್ದೇವೆ ಎಂದು ನುಡಿದರು. ಪಿಎಫ್‌ಐ ಸಂಘಟನೆಯನ್ನು ತಲೆ ಮೇಲೆ ಇಟ್ಟುಕೊಂಡು ಅವರು ಅಧಿಕಾರ ನಡೆಸಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ. ಕರ್ನಾಟಕದಲ್ಲಿ ಮತೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡಿದವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ನನ್ನ ಮೇಲೆ ಒಂದಲ್ಲ, ಇನ್ನೂ ಬೇಕಾದಷ್ಟುಕೇಸ್ ಮಾಡಿಕೊಳ್ಳಲಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ: ಜಮೀರ್ ಅಹಮದ್ ಖಾನ್
ಅವಕಾಶ ಕೊಡಲ್ಲ: ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ, ಇವರು ವೋಟ್ ಬ್ಯಾಂಕಿಗಾಗಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದ್ದರು. ಅದನ್ನು ರದ್ದುಪಡಿಸಿ ಲಿಂಗಾಯತರು, ಒಕ್ಕಲಿಗರಿಗೆ ನೀಡಿದ್ದೇವೆ. ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಿಸಿದ್ದೇವೆ. ಇದೀಗ ಕಾಂಗ್ರೆಸ್‌ನವರು ತಾವು ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಂ ಮೀಸಲಾತಿ ಕೊಡುವುದಾಗಿ ಹೇಳುತ್ತಿದ್ದಾರೆ. ಯಾರ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲೆಸೆದರು. ಅಲ್ಲದೆ, ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಮೀಸಲಾತಿ ಕೊಡಲು ಅವಕಾಶ ನೀಡಲ್ಲ. ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
