Asianet Suvarna News Asianet Suvarna News

ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ, ಗ್ಯಾರಂಟಿ ಕೊಡುತ್ತೇವೆ: ಕೇಂದ್ರ ಸಚಿವ ಅಮಿತ್‌ ಶಾ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ ಶೇ. 4ರಷ್ಟುಮೀಸಲಾತಿಯನ್ನು ಮತ್ತೆ ಕೊಡುತ್ತೇವೆ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ, ನೀವು ಅಧಿಕಾರಕ್ಕೆ ಬರುವುದಿಲ್ಲ. ಅದರ ಗ್ಯಾರಂಟಿಯನ್ನು ನಾವು ಕೊಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. 

Karnataka Election 2023 Union Minister Amit Shah Slams On Congress gvd
Author
First Published Apr 29, 2023, 2:40 AM IST

ಹಾವೇರಿ (ಏ.29): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ ಶೇ. 4ರಷ್ಟುಮೀಸಲಾತಿಯನ್ನು ಮತ್ತೆ ಕೊಡುತ್ತೇವೆ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ, ನೀವು ಅಧಿಕಾರಕ್ಕೆ ಬರುವುದಿಲ್ಲ. ಅದರ ಗ್ಯಾರಂಟಿಯನ್ನು ನಾವು ಕೊಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಹಾವೇರಿ ಜಿಲ್ಲೆ ಹಾನಗಲ್ಲ ಕ್ಷೇತ್ರದ ಅಕ್ಕಿಆಲೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಎಂದರೆ ಸುಳ್ಳಿನ, ಭ್ರಷ್ಟಾಚಾರದ, ಜಾತಿವಾದಿ, ತುಷ್ಟೀಕರಣದ, ಪರಿವಾರವಾದಿ ಗ್ಯಾರಂಟಿ ಪಕ್ಷ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ಯಾರೂ ನಂಬುವುದಿಲ್ಲ. 

ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರು ಮುಸ್ಲಿಂರಿಗೆ ನೀಡಿದ್ದ ಶೇ.4ರಷ್ಟುಮೀಸಲಾತಿಯನ್ನು ನಾವು ತೆಗೆದುಹಾಕಿದ್ದೇವೆ. ಎಸ್ಸಿ, ಎಸ್ಟಿಗಳಿಗೆ, ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡಿದ್ದೇವೆ. ಕರ್ನಾಟಕ ಕಾಂಗ್ರೆಸ್‌ ದೆಹಲಿ ಕಾಂಗ್ರೆಸ್‌ ನಾಯಕರಿಗೆ ಎಟಿಎಂ ಇದ್ದಂತೆ. ದೆಹಲಿಯ ಖಜಾನೆಗೆ ಹಣ ಕಳುಹಿಸಲು ಮಾತ್ರ ಅದು ಸೀಮಿತವಾಗಿರುತ್ತದೆ. ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ ಬೇಕಾ ಅಥವಾ ರಾಹುಲ್‌ ನೇತೃತ್ವದ ಎಟಿಎಂ ಸರ್ಕಾರ ಬೇಕಾ ನೀವೇ ನಿರ್ಧರಿಸಿ ಎಂದು ಹೇಳಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪುಂಗಿದಾಸರು: ಸಿ.ಟಿ.ರವಿ ಲೇವಡಿ

ಕಾಂಗ್ರೆಸ್‌ನ ಬಿ ಟೀಂ ಜೆಡಿಎಸ್‌: ಈ ಚುನಾವಣೆ ಡಬಲ್‌ ಎಂಜಿನ್‌ ಸರ್ಕಾರ ಮತ್ತು ರಿವರ್ಸ್‌ ಗೇರ್‌ ಕಾಂಗ್ರೆಸ್‌ ನಡುವಿನ ಹಣಾಹಣಿಯಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ. ಜೆಡಿಎಸ್‌ ರಾಜ್ಯದಲ್ಲಿ ಕಾಂಗ್ರೆಸಿನ ಬಿ ಟೀಮ್‌. ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಮತ ಹಾಕಿದಂತೆ. ನಾವು ಕರ್ನಾಟಕವನ್ನು ರಕ್ಷಣೆ ಮಾಡಿ, ಅಭಿವೃದ್ಧಿ ಮಾಡುತ್ತೇವೆ. ರಾಜ್ಯದಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ಹಿಂದಿದ್ದ ಪಿಎಫ್‌ಐಅನ್ನು ಬ್ಯಾನ್‌ ಮಾಡಿದ್ದು ಬಿಜೆಪಿ. ಕಾಂಗ್ರೆಸ್‌ನವರು ಪಿಎಫ್‌ಐ ವಿರುದ್ಧ ಮಾತನಾಡುತ್ತಿರಲಿಲ್ಲ. ಇದು ಮನಮೋಹನಸಿಂಗ್‌ ಸರ್ಕಾರವಲ್ಲ, ಮೋದಿ ಸರ್ಕಾರ ಎಂಬುದು ಆತಂಕವಾದಿಗಳಿಗೆ ಅರ್ಥವಾಗಿದೆ. ಪಿಎಫ್‌ಐನಲ್ಲಿ ಅಳಿದುಳಿದವರನ್ನೂ ಹುಡುಕಿ ಜೈಲಿಗೆ ಅಟ್ಟುತ್ತೇವೆ ಎಂದು ಅಮಿತ್‌ ಶಾ ಹೇಳಿದರು.

ಮೋದಿ ತೆಗಳಿದಷ್ಟು ಕಮಲ ಅರಳುತ್ತದೆ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷದ ಹಾವು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಮೋದಿ ವಿರುದ್ಧ ಸೋನಿಯಾ, ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡುತ್ತಾರೆ. ಮೋದಿಯವರನ್ನು ಎಷ್ಟುತೆಗಳುತ್ತೀರೋ ಅಷ್ಟು ಕಮಲ ಅರಳುತ್ತದೆ. ಆದರೆ, ಕಾಂಗ್ರೆಸಿಗರ ಬಳಿ ಮುಖವೇ ಇಲ್ಲ. ಈಗ ಸಿಎಂ ಆಗಲು ಖರ್ಗೆ, ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯನವರ ನಡುವೆ ಪೈಪೋಟಿ ಇದೆ. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದು ಶಾ ಹೇಳಿದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದೇವೆ. ಈಗ ಮೊದಲಿನಂತೆ ಅಲ್ಲಿ ರಕ್ತದ ನದಿ ಹರಿಯುತ್ತಿಲ್ಲ. 2009ರಿಂದ 14ರವರೆಗೆ ನಿಮ್ಮದೇ ಸರ್ಕಾರವಿದ್ದಾಗ ರಾಜ್ಯದ ಅಭಿವೃದ್ಧಿಗೆ ಎಷ್ಟುಅನುದಾನ ಕೊಟ್ಟಿದ್ದೀರಿ ಹೇಳಿ ಎಂದು ಕಳೆದ ಒಂದು ತಿಂಗಳಿಂದ ಕೇಳುತ್ತಿದ್ದೇನೆ. 

ಆದರೆ, ಕಾಂಗ್ರೆಸ್‌ ನಾಯಕರು ಉತ್ತರಿಸುತ್ತಿಲ್ಲ. ಭಾರತವನ್ನು ವಿಶ್ವದ ನಂ. 1 ಮಾಡಲು ಮೋದಿಯಿಂದ ಮಾತ್ರ ಸಾಧ್ಯ. 2024ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್‌ನವರು 70 ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ಮಾಡಲು ಬಿಡಲಿಲ್ಲ. ಮೋದಿ ಅದಕ್ಕೆ ಚಾಲನೆ ನೀಡಿದ್ದು, 2026ಕ್ಕೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಸಂಸದ ಶಿವಕುಮಾರ ಉದಾಸಿ, ಹಾನಗಲ್ಲ ಅಭ್ಯರ್ಥಿ ಶಿವರಾಜ ಸಜ್ಜನರ, ಬ್ಯಾಡಗಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ, ಹಾವೇರಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಇತರರು ಇದ್ದರು.

ಜೆಡಿಎಸ್‌-ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಚಲುವರಾಯಸ್ವಾಮಿ

ಕನಕದಾಸರು, ಶರೀಫರನ್ನು ನೆನೆದ ಶಾ: ಅಕ್ಕಿಆಲೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕನಕದಾಸರು, ಶಿಶುನಾಳ ಶರೀಫರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೆನೆದು ಮಾತು ಆರಂಭಿಸಿದರು. ಕಾಗಿನೆಲೆ ಕನಕಗುರುಪೀಠ, ಪಂಚಮಸಾಲಿ ಪೀಠಕ್ಕೆ ನಮಿಸುತ್ತೇನೆ. ಬಸವೇಶ್ವರರ ಪಾದಗಳಿಗೆ ನಮಿಸುತ್ತೇನೆ ಎಂದು ಭಾಷಣ ಆರಂಭಿಸಿದರು. ಹಾನಗಲ್ಲ ಕ್ಷೇತ್ರದಲ್ಲಿ ಶಿವರಾಜ ಸಜ್ಜನ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಮೋದಿ ಕೈ ಬಲಪಡಿಸಲು ಬಿಜೆಪಿ ಬೆಂಬಲಿಸಿ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios