ಜೆಡಿಎಸ್‌-ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಚಲುವರಾಯಸ್ವಾಮಿ

ರೈತ ವಿರೋಧಿ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಪರ ಕೈಜೋಡಿಸಿರುವ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ದೂರಿದರು.

Karnataka Election 2023 N Chaluvaraya Swamy Slams On JDS And BJP gvd

ಮಂಡ್ಯ (ಏ.28): ರೈತ ವಿರೋಧಿ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಪರ ಕೈಜೋಡಿಸಿರುವ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ದೂರಿದರು. ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪಿ.ರವಿಕುಮಾರ್‌ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಬಿಜೆಪಿ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಜನವಿರೋಧಿ ನಡವಳಿಕೆಗಳಿಂದ ಜನರು ಕಂಗಲಾಗಿದ್ದಾರೆ. ಇಂತಹ ಭ್ರಷ್ಟಜನವಿರೋಧಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಭವಿಷ್ಯ ಏನಾಗಬಹುದೆಂದು ಜನರು ಅರಿತಿದ್ದಾರೆ. ಹೀಗಾಗಿ ಈ ಬಾರಿ ಜನತೆ ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಿ ಆಶೀರ್ವದಿಸಲಿದ್ದಾರೆ ಎಂದರು. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈಗಾಗಲೇ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದ್ದು, ಯೋಜನೆಗಳ ಅನುಷ್ಠಾನ ಖಚಿತ ಎಂದರು.

ಅಭಿವೃದ್ಧಿ ಮಾಡಲಿಲ್ಲ: ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಆದರೂ ಜಿಲ್ಲೆಯ ಅಭಿವೃದ್ಧಿ ಮಾಡಲಿಲ್ಲ, ಒಂದೇ ಒಂದು ಜನಪರ ಕಾರ್ಯಕ್ರಮ ಮಾಡಲಿಲ್ಲ. ಕಾಂಗ್ರೆಸ್‌ ಬೆಂಬಲದಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಸೌಜನ್ಯಕ್ಕಾದರೂ ಮಂಡ್ಯದಲ್ಲಿ ಒಂದು ಸಭೆ ಮಾಡಿ ಕೃತಜ್ಞತೆ ಹೇಳಲಿಲ್ಲ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಪಿ.ರವಿಕುಮಾರ್‌ ಮಾತನಾಡಿ, ಕಳೆದ 13 ವರ್ಷಗಳಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಕೊರೋನಾ ಸಂದರ್ಭದಲ್ಲಿ ರೈತರ ತರಕಾರಿ ಖರೀದಿ ಮಾಡಿ ಮನೆಮನೆಗೆ ಹಂಚಿದ್ದೇನೆ. ಹೆಲ್ತ್‌ ಕಿಟ್‌ಗಳನ್ನು ಮನೆ ಮನೆಗೆ ವಿತರಿಸುವ ಕೆಲಸ ಮಾಡಿದ್ದೇನೆ ಎಂದರು.

ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ?: ಸಿದ್ದು ವಿರುದ್ಧ ಶ್ರೀನಿವಾಸ್ ಪ್ರಸಾದ್‌ ವಾಗ್ದಾಳಿ

ನಾನು ಕ್ಷೇತ್ರದ ಮಗ: ನಾನು ಮಂಡ್ಯ ಕ್ಷೇತ್ರದ ಮಗ. ಅಳಿಯನಲ್ಲ. ಆದ್ದರಿಂದ ಮನೆ ಮಕ್ಕಳಿಗೆ ಅಧಿಕಾರ ಕೊಡಿ. ಕಳೆದ ಬಾರಿ ಸೋತಿದ್ದೇನೆ. ಈ ಬಾರಿ ನನ್ನನ್ನು ಗೆಲ್ಲಿಸಿ ಕೈಬಿಡಬೇಡಿ ಎಂದು ಮನವಿ ಮಾಡಿದರು. ನಾನು ಶಾಸಕನಾಗಿ ಆಯ್ಕೆಯಾದರೆ ಕೆರಗೋಡು ಗ್ರಾಮದಲ್ಲಿ 100 ಬೆಡ್‌ ಆಸ್ಪತ್ರೆಯ ಕೊರಗು ಇದೆ. ಅದನ್ನು ಮಾಡುವ ಜವಾಬ್ದಾರಿ ನನ್ನದು. ಬಡವರ ಮಕ್ಕಳ ಕಷ್ಟಏನು ಎಂದು ಅರಿವಿದ್ದು ಕೆರಗೋಡು ಗ್ರಾಮದಲ್ಲಿ ಬಡವರ ಮಕ್ಕಳು ಮದುವೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನ ಮಾಡುವುದು ನನ್ನ ಗುರಿ ಎಂದರು.

ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಅರುಣ್‌ ಸಿಂಗ್‌ ವಿಶ್ವಾಸ

ಮಾಜಿ ಶಾಸಕರಾದ ಎಂ.ಎಸ್‌.ಆತ್ಮಾನಂದ, ಎಚ್‌.ಬಿ.ರಾಮು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮೈಷುಗರ್‌ ಮಾಜಿ ಅಧ್ಯಕ್ಷರಾದ ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ ಹಾಲಹಳ್ಳಿ ರಾಮಲಿಂಗಯ್ಯ, ಮುಖಂಡರಾದ ಎಂ.ಎಸ್‌.ಚಿದಂಬರ್‌, ಅಮರಾವತಿ ಚಂದ್ರಶೇಖರ್‌, ಡಾ.ಕೃಷ್ಣ, ಉಮ್ಮಡಹಳ್ಳಿ ಶಿವಪ್ಪ, ಸಿದ್ಧಾರೂಢ ಸತೀಶ್‌ ಗೌಡ, ವಿಜಯ್‌ಕುಮಾರ್‌ ಸೇರಿದಂತೆ ಇತರರು ಭಾಗವಹಿಸಿದರು. ಇದಕ್ಕೂ ಮೊದಲು ಕೆರಗೋಡು ಗ್ರಾಮದ ಶ್ರೀಪಂಚಲಿಂಗೇಶ್ವರ ದೇವಾಲಯದಲ್ಲಿ ಪೂಜಿ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.ನಂತರ ಕೆರಗೋಡು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪಿ.ರವಿಕುಮಾರ್‌ ಚುನಾವಣಾ ಪ್ರಚಾರ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios