ಕಾಂಗ್ರೆಸ್ ಪಟ್ಟಿಯಲ್ಲಿ ಪ್ರಭಾವಿಗಳ ಮಕ್ಕಳಿಗೆ ಮಣೆ: ಧರಂಸಿಂಗ್, ಮಂಜುಪುತ್ರನಿಗೆ ಟಿಕೆಟ್
ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲೂ ರಾಜಕೀಯ ಪ್ರಭಾವಿಗಳ ರಕ್ತಸಂಬಂಧಿಗಳಿಗೆ ಮಣೆ ಹಾಕಲಾಗಿದೆ. ಸಿದ್ದರಾಮಯ್ಯ ಹಿಂದೆ ಸರಿದ ಕಾರಣ ಬಾದಾಮಿ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿಪುತ್ರ ಭೀಮಸೇನ ಬಿ. ಚಿಮ್ಮನಕಟ್ಟಿಅವರಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರು (ಏ.07): ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲೂ ರಾಜಕೀಯ ಪ್ರಭಾವಿಗಳ ರಕ್ತಸಂಬಂಧಿಗಳಿಗೆ ಮಣೆ ಹಾಕಲಾಗಿದೆ. ಸಿದ್ದರಾಮಯ್ಯ ಹಿಂದೆ ಸರಿದ ಕಾರಣ ಬಾದಾಮಿ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿಪುತ್ರ ಭೀಮಸೇನ ಬಿ. ಚಿಮ್ಮನಕಟ್ಟಿಅವರಿಗೆ ಟಿಕೆಟ್ ನೀಡಲಾಗಿದೆ. ಬಸವ ಕಲ್ಯಾಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ವಿಜಯ್ ಧರಂ ಸಿಂಗ್‌ಗೆ ಟಿಕೆಟ್ ನೀಡಲಾಗಿದೆ. ತನ್ಮೂಲಕ ಅಜಯ್‌ಸಿಂಗ್ ಹಾಗೂ ವಿಜಯ್‌ಸಿಂಗ್ ಇಬ್ಬರೂ ಸಹೋದರರಿಗೂ ಟಿಕೆಟ್ ನೀಡಿದಂತಾಗಿದೆ. ಮಾಜಿ ಸಚಿವ ಹಾಗೂ ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್‌ನ ಅರಕಲಗೂಡು ಅಭ್ಯರ್ಥಿಯಾಗಿರುವ ಎ. ಮಂಜು ಪುತ್ರ ಡಾ. ಮಂಥರ್‌ಗೌಡ ಕಾಂಗ್ರೆಸ್‌ನಿಂದ ಟಿಕೆಟ್ ಗಿಟ್ಟಿಸಿ ಮಡಿಕೇರಿ ಅಭ್ಯರ್ಥಿಯಾಗಿದ್ದಾರೆ.
ಮಹಿಳೆಯರಿಗಿಲ್ಲ ಅವಕಾಶ: ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಮಹಿಳೆಯರಿಗೆ ಅವಕಾಶವನ್ನೇ ನೀಡಿಲ್ಲ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳ ಪೈಕಿ ಕೇವಲ 6 ಸ್ಥಾನ (ಶೇ.5ಕ್ಕಿಂತ ಕಡಿಮೆ) ನೀಡಿದ್ದ ಕಾಂಗ್ರೆಸ್ ಎರಡನೇ ಪಟ್ಟಿಯ 42 ಕ್ಷೇತ್ರಗಳ ಪೈಕಿ ಒಂದೂ ಕ್ಷೇತ್ರದ ಟಿಕೆಟನ್ನೂ ಮಹಿಳೆಯರಿಗೆ ನೀಡಿಲ್ಲ. ತನ್ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರಿಗೆ ಆದ್ಯತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಟ್ಟು 166 ಅಭ್ಯರ್ಥಿಗಳ ಪೈಕಿ ಶೇ.3.60 ರಷ್ಟು(6) ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬಿಜೆಪಿಗೆ ಸುದೀಪ್ ಬೆಂಬಲ ಸ್ವಾಗತಾರ್ಹ: ಬಿ.ಎಸ್.ಯಡಿಯೂರಪ್ಪ
ವಲಸಿಗರಿಗೆ ಮಣೆ: ಕಾಂಗ್ರೆಸ್ ಎರಡನೇ ಪಟ್ಟಿಯಲ್ಲೂ ವಲಸಿಗರಿಗೆ ಮಣೆ ಹಾಕಲಾಗಿದೆ. ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಎಸ್.ಆರ್.ಶ್ರೀನಿವಾಸ್ (ಗುಬ್ಬಿ), ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಎನ್.ವೈ. ಗೋಪಾಲಕೃಷ್ಣ (ಮೊಳಕಾಲ್ಮುರು) ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಬಂದ ಬಾಬುರಾವ್ ಚಿಂಚನಸೂರು ಅವರಿಗೆ (ಗುರುಮಿಟ್ಕಲ್), ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ಕೆ.ಸಿ. ವೀರೇಂದ್ರ ಪಪ್ಪಿ (ಚಿತ್ರದುರ್ಗ), ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ ಅವರಿಗೆ ಆಪ್ತರಾಗಿದ್ದ ಸಿದ್ದೇಗೌಡ (ಚಾಮುಂಡೇಶ್ವರಿ) ಅವರಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.
ನಂಬಿಸಿ ಕುತ್ತಿಗೆ ಕೊಯ್ದರು: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ರಘು ಆಚಾರ್ ಕಿಡಿ
5 ಮಂದಿ ಹಾಲಿ ಶಾಸಕರಿಗೆ 2ನೇ ಪಟ್ಟಿಯಲ್ಲೂ ಟಿಕೆಟಿಲ್ಲ: ಪುಲಕೇಶಿನಗರದ ಅಖಂಡ ಶ್ರೀನಿವಾಸ್, ಶಿಡ್ಲಘಟ್ಟದ ವಿ. ಮುನಿಯಪ್ಪ, ಕುಂದಗೋಳದ ಕುಸುಮಾ ಶಿವಳ್ಳಿ, ಲಿಂಗಸುಗೂರು ಡಿ.ಎಸ್. ಹೂಲಗಿರಿ, ಹರಿಹರ ಕ್ಷೇತ್ರದ ರಾಮಪ್ಪ ಸೇರಿದಂತೆ ಐದು ಮಂದಿ ಹಾಲಿ ಶಾಸಕರಿಗೆ ಎರಡನೇ ಪಟ್ಟಿಯಲ್ಲೂ ಟಿಕೆಟ್ ನೀಡಿಲ್ಲ. ಮೊದಲ ಪಟ್ಟಿಯಲ್ಲಿ ಟಿಕೆಟ್ ತಪ್ಪಿಸಿಕೊಂಡಿದ್ದ 6 ಮಂದಿ ಪೈಕಿ ಅಫ್ಜಲ್‌ಪುರದ ಎಂ.ವೈ. ಪಾಟೀಲ್ ಅವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.