ದೇವರಾಜ ಅರಸು ನಂತರ ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇಲ್ಲದಂತಾಗಿದೆ. ರಾಜ್ಯದಲ್ಲಿ 197 ಸಣ್ಣ ಪುಟ್ಟಜಾತಿಗಳಿವೆ. ಇವರಾರಿಗೂ ಟಿಕೆಟ್‌ ನೀಡಲಾಗಿಲ್ಲ. ರಾಜ್ಯದಲ್ಲಿ ಎಲ್ಲಿಯೂ ನಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಲಾಗಿಲ್ಲ.

ಚಿತ್ರದುರ್ಗ (ಏ.07): ‘ದೇವರಾಜ ಅರಸು ನಂತರ ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇಲ್ಲದಂತಾಗಿದೆ. ರಾಜ್ಯದಲ್ಲಿ 197 ಸಣ್ಣ ಪುಟ್ಟಜಾತಿಗಳಿವೆ. ಇವರಾರಿಗೂ ಟಿಕೆಟ್‌ ನೀಡಲಾಗಿಲ್ಲ. ರಾಜ್ಯದಲ್ಲಿ ಎಲ್ಲಿಯೂ ನಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಲಾಗಿಲ್ಲ. ಇದರ ಪ್ರತಿಫಲವನ್ನು ಮೇ 13ರಂದು ಕಾಂಗ್ರೆಸ್ಸಿಗರು ಅನುಭವಿಸುತ್ತಾರೆ.’ ಕಾಂಗ್ರೆಸ್‌ನ ಎರಡನೇ ಪಟ್ಟಿಬಿಡುಗಡೆಯಾದ ಬೆನ್ನಲ್ಲೇ ತಮಗೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದ್ದರಿಂದ ಆಕ್ರೋಶಭರಿತರಾಗಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಕಾಂಗ್ರೆಸ್‌ ವಿರುದ್ಧ ನಡೆಸಿದ ಎಚ್ಚರಿಕೆ ರೂಪದ ವಾಗ್ದಾಳಿಯಿದು.

ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮೊದಲು ಮೂರನೇ ಬಾರಿ ವಿಧಾನ ಪರಿಷತ್‌ ಚುನಾವಣೆಗೆ ನಿಲ್ಲಲು ಮುಂದಾದಾಗ ಎಂಎಲ್‌ಸಿ ಸಾಕು, ಎಂಎಲ್‌ಎಗೆ ನಿಲ್ಲುವಿಯಂತೆ. ಟಿಕೆಟ್‌ ಕೊಡ್ತೇವೆ’ ಅಂದಿದ್ದರು. ಸ್ವತಃ ಸಿದ್ದರಾಮಯ್ಯ ಅವರೇ ಟಿಕೆಟ್‌ ಕೊಡ್ತೀನಿ ಅಂದಿದ್ದರು. ಈಗ ನಂಬಿಸಿ ಅರ್ಧ ದಾರಿಯಲ್ಲಿ ಕತ್ತು ಕೊಯ್ದರು ಎಂದು ಆಕ್ರೋಶ ಹೊರ ಹಾಕಿದರು. ಜತೆಗೆ, ಚಿತ್ರದುರ್ಗ ಜಿಲ್ಲೆಯಲ್ಲಿ ಯಾವೊಂದು ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲ್ಲವುದಿಲ್ಲವೆಂದು ಭವಿಷ್ಯ ನುಡಿದರು. ನಾನು ಸಣ್ಣ ಜಾತಿಗೆ ಸೇರಿದವನೆಂದು ಟಿಕೆಟ್‌ ವಂಚಿಸಲಾಗಿದೆ. ಜಿಲ್ಲೆಯ ಜನ ಇದಕ್ಕೆ ಉತ್ತರಿಸುತ್ತಾರೆ. ನನ್ನ ಒಬ್ಬನಿಗೆ ಅಲ್ಲ, ಸಣ್ಣ ಪುಟ್ಟಸಮುದಾಯದ ಅನೇಕರಿಗೆ ರಾಜ್ಯದಲ್ಲಿ ಅನ್ಯಾಯವಾಗಿದೆ. 

ಶಾಸಕಿ ಸೌಮ್ಯಾ ರೆಡ್ಡಿ ಕಾರಿನಲ್ಲಿ 20 ಸೀರೆ, 14 ಮೊಬೈಲ್‌ಗಳು ಪತ್ತೆ: ದೂರು ದಾಖಲು

ಈ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನಿಂದ ಆಗಿರುವ ಅನ್ಯಾಯಕ್ಕೆ ನಾನು ಸುಮ್ಮನೆ ಕೂರುವುದಿಲ್ಲ. ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ಸಿಗೆ ಮತ ಹಾಕದಂತೆ ವಿಶ್ವಕರ್ಮ ಸಮಾಜದಿಂದ ಹೋರಾಟ ಕಟ್ಟುವೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದಿಲ್ಲ. ಟಿಕೆಟ್‌ ವಂಚನೆಗೆ ಸಂಬಂಧಿಸಿದಂತೆ ತಮ್ಮ ಬೆಂಬಲಿಗರ ಸಭೆ ಕರೆದು ನಿರ್ಧಾರ ಕೈಗೊಳ್ಳುವೆ. ಏಪ್ರಿಲ್‌ 17 ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ರಘು ಆಚಾರ್‌ ಹೇಳಿದರು.

ವೈಎಸ್‌ವಿ ದತ್ತಗೆ ಟಿಕೆಟಿಲ್ಲ: ವಲಸಿಗರ ಪೈಕಿ ಜೆಡಿಎಸ್‌ನಿಂದ ಪಕ್ಷ ಸೇರಿದ್ದ ಶಾಸಕ ಎಂ.ಆರ್‌. ಶ್ರೀನಿವಾಸ್‌ ಅವರಿಗೆ ಗುಬ್ಬಿಯಿಂದ, ಬಿಜೆಪಿಯಿಂದ ಆಗಮಿಸಿದ್ದ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮುರಿನಿಂದ ಹಾಗೂ ಬಾಬುರಾವ್‌ ಚಿಂಚನಸೂರು ಅವರಿಗೆ ಗುರುಮಿಠಕಲ್‌ನಿಂದ ಟಿಕೆಟ್‌ ಘೋಷಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿ ಕಡೂರಿನಿಂದ ಟಿಕೆಟ್‌ ಬಯಸಿದ್ದ ವೈ.ಎಸ್‌.ವಿ.ದತ್ತ ಅವರಿಗೆ ಕೊಕ್‌ ನೀಡಲಾಗಿದ್ದು, ಆ ಕ್ಷೇತ್ರಕ್ಕೆ ಕೆ.ಎಸ್‌.ಆನಂದ್‌ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಅದೇ ರೀತಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ್ದ ಮಾಜಿ ಸಚಿವ ಎ.ಬಿ.ಮಾಲಕರಡ್ಡಿ ಅವರ ಪುತ್ರಿ ಅನೂರಾಧ ಅವರಿಗೆ ಯಾದಗಿರಿಯಿಂದ ಟಿಕೆಟ್‌ ನಿರಾಕರಿಸಲಾಗಿದ್ದು, ಆ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಚೆನ್ನಾರಡ್ಡಿ ಪಾಟೀಲ್‌ ತುನ್ನೂರು ಅವರಿಗೆ ಟಿಕೆಟ್‌ ನೀಡಲಾಗಿದೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ ಅವರನ್ನು ಕಣಕ್ಕೆ ಇಳಿಸಲು ಉದ್ದೇಶಿಸಲಾಗಿದೆ ಎನ್ನಲಾಗಿತ್ತು. ಆದರೆ, ಅಂತಿಮವಾಗಿ ರಘುನಾಥ ನಾಯ್ದು ಅವರಿಗೆ ಟಿಕೆಟ್‌ ನೀಡಲಾಗಿದೆ.

ಅಕ್ರಮ ಆಸ್ತಿ ಗಳಿಕೆ: ಶಾಸಕ ಜಮೀರ್‌ ವಿರುದ್ಧದ ಲೋಕಾ ತನಿಖೆಗೆ ತಡೆ ಇಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಕಟ್ಟಿಹಾಕಲು ಪ್ರಬಲ ಹುರಿಯಾಳು ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲಾಗುವುದು ಎನ್ನಲಾಗಿತ್ತು. ಆದರೆ, ವಿನಯ ಕುಲಕರ್ಣಿ ತಮ್ಮ ಬಯಕೆಯ ಕ್ಷೇತ್ರವಾದ ಧಾರವಾಡದಿಂದಲೇ ಟಿಕೆಟ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.