ನೆಮ್ಮದಿ ಬದುಕಿಗೆ ಕಾಂಗ್ರೆಸ್‌ ಬೆಂಬಲಿಸಿ: ಆರ್‌ಆರ್‌ ನಗರ ಅಭ್ಯರ್ಥಿ ಕುಸುಮಾ

ರಾಜ್ಯ ಹಾಗೂ ಈ ಕ್ಷೇತ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ಜನರು ನೆಮ್ಮದಿಯಿಂದ ಬದುಕಲು ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ಮತವನ್ನು ಚಲಾಯಿಸುವ ಮೂಲಕ ಆಶೀರ್ವಾದ ಮಾಡಬೇಕು ಎಂದು ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕುಸುಮಾ ಮನವಿ ಮಾಡಿದರು.

Karnataka Election 2023 Support Congress for a comfortable life Says H Kusuma gvd

ಬೆಂಗಳೂರು (ಏ.22): ರಾಜ್ಯ ಹಾಗೂ ಈ ಕ್ಷೇತ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ಜನರು ನೆಮ್ಮದಿಯಿಂದ ಬದುಕಲು ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ಮತವನ್ನು ಚಲಾಯಿಸುವ ಮೂಲಕ ಆಶೀರ್ವಾದ ಮಾಡಬೇಕು ಎಂದು ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕುಸುಮಾ ಮನವಿ ಮಾಡಿದರು. ಕ್ಷೇತ್ರದ ವ್ಯಾಪ್ತಿಯ ಜೆಪಿ ಪಾರ್ಕ್, ಯಶವಂತಪುರ, ಜಾಲಹಳ್ಳಿ, ಎಚ್‌ಎಂಟಿ ಕ್ವಾಟ್ರ್ರಸ್‌ ಮತ್ತಿತರ ಕಡೆ ಬೆಂಬಲಿಗರೊಂದಿಗೆ ಸಂಚರಿಸಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಅವರು ಮಾತನಾಡಿದರು.

ರಾಜ್ಯ ಹಾಗೂ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಜನತೆ ನೊಂದಿದ್ದು ಬದಲಾವಣೆ ಬಯಸಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾದ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಈ ಬಾರಿ ಕಾಂಗ್ರೆಸ್‌ ಬೆಂಬಲಿಸಬೇಕು. ಎಲ್ಲರೂ ನೆಮ್ಮದಿಯ ಬದುಕನ್ನು ಸಾಗಿಸಲು ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ತಮ್ಮನ್ನು ಆಶೀರ್ವದಿಸಬೇಕು. ಒಂದೇ ಒಂದು ಬಾರಿ ಅವಕಾಶ ನೀಡಿ ನೋಡಿ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತ: ನಾಡಿದ್ದು ಅಂತಿಮ ಕಣ ರೆಡಿ

ಉಸಿರುಗಟ್ಟಿಸುವ ವಾತಾವರಣ: ರೈತರು, ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸಲು ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಬೇಕು. ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡಲು ತಮಗೆ ಅವಕಾಶ ಮಾಡಿಕೊಡಬೇಕು. ಕ್ಷೇತ್ರದಲ್ಲಿ ಉಸಿರುಗಟ್ಟುವ ವಾತಾವರಣವಿದ್ದು ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಆದ್ದರಿಂದ ಕ್ಷೇತ್ರದ ಹಿತದೃಷ್ಟಿಯಿಂದ ತಮ್ಮನ್ನು ಬೆಂಬಲಿಸಬೇಕು ಎಂದು ಕೋರಿದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕುಸುಮಾ ಅವರು ಕ್ಷೇತ್ರದ ಹಲವೆಡೆ ಸಂಚರಿಸಿ ಮತ ಯಾಚನೆ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಜಯಕುಮಾರ್‌, ಮುಖಂಡರಾದ ನಯಾಜ್‌, ಮಣಿ, ಪುರುಷೋತ್ತಮ, ಮುನಿಸ್ವಾಮಿ ಗೌಡ್ರು ಹಾಗೂ ಬೆಂಬಲಿಗರು ಹಾಜರಿದ್ದರು.

ಲಗ್ಗೆರೆಯಲ್ಲಿ ಕುಸುಮಾ ಮತಯಾಚನೆ: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈಗಾಗಲೇ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಿದ್ದು, ಯೋಜನೆಗಳ ಅನುಷ್ಠಾನ ಖಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕುಸುಮಾ ಹೇಳಿದರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆ, ರಾಜೀವ್‌ಗಾಂಧಿ ನಗರದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಶ್ರಮಿಕರು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ತಾಯಂದಿರು, ಅಕ್ಕ ತಂಗಿಯರು ಬೆಲೆ ಏರಿಕೆಯಿಂದ ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. 

ಅವರ ನೆರವಿಗೆ ಕಾಂಗ್ರೆಸ್‌ ಪಕ್ಷ ಇರಲಿದ್ದು, ಸ್ವಂತ ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗೆ ಉಚಿತ ವಿದ್ಯುತ್‌, ಕುಟುಂಬದ ಯಜಮಾನಿಗೆ 2 ಸಾವಿರ ರು. ತಲಾ 10ಕೆಜಿ ಅಕ್ಕಿ. ಹೈಟೆಕ್‌ ಮಾದರಿಯಲ್ಲಿ ಶಿಕ್ಷಣ ನೀಡುವುದಾಗಿ ಪಕ್ಷ ಘೋಷಣೆ ಮಾಡಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಭರವಸೆಗಳನ್ನು ಈಡೇರಿಸಲು ಗ್ಯಾರೆಂಟಿ ಕಾರ್ಡ್‌ ಗಳನ್ನು ನೀಡಿದ್ದು ಈ ಎಲ್ಲ ಯೋಜನೆ ಈಡೇರಲು ಕಾಂಗ್ರೆಸ್‌ಗೆ ಬೆಂಬಲಿಸಿ ಎಂದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ದುಸ್ಥರವಾಗಿದೆ. 400 ರು. ಇದ್ದ ಅಡುಗೆ ಅನಿಲ 1130 ರು.ಗಳಿಗೆ ಹೆಚ್ಚಳವಾಗಿದೆ. 

ಬ್ರಾಹ್ಮಣರೇಕೆ ರಾಜಕಾರಣದಲ್ಲಿ ಮೇಲೆ ಬರುತ್ತಿಲ್ಲ?: ಅಶೋಕ ಹಾರನಹಳ್ಳಿ

ಅಡುಗೆ ಎಣ್ಣೆ ಕೆಜಿಗೆ 80 ರು ಇದ್ದದ್ದು 210 ರು., ತೊಗರಿಬೇಳೆ 120, ಅಕ್ಕಿ 85 ರು. ಆಗಿದೆ. ಜೊತೆಗೆ ಜಿಎಸ್‌ಟಿಯಿಂದ ಉದ್ದಿಮೆಗಳು ನಲುಗುತ್ತಿವೆ. ಬಡವರ ಜೀವನ ಕೇಳುವವರಿಲ್ಲದಂತಾಗಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios