ಬ್ರಾಹ್ಮಣರೇಕೆ ರಾಜಕಾರಣದಲ್ಲಿ ಮೇಲೆ ಬರುತ್ತಿಲ್ಲ?: ಅಶೋಕ ಹಾರನಹಳ್ಳಿ

ಬ್ರಾಹ್ಮಣರು ಮತದಾನದ ಕರ್ತವ್ಯ ಪಾಲನೆಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಆದರೆ ಬ್ರಾಹ್ಮಣರ ನೆರವು ಪಡೆದು ಚುನಾಯಿತರಾದವರು ಕೊನೆಗೆ ಈ ಸಮುದಾಯವನ್ನೇ ಕಡೆಗಣಿಸಿ ಹೋದ ಉದಾಹರಣೆಗಳು ಸಾಕಷ್ಟಿವೆ. ಜೊತೆಗೆ ಈ ಸಮುದಾಯದವರ ಬೆಳವಣಿಗೆಗೆ ಬೇಕಂತಲೇ ಅಡ್ಡಿಪಡಿಸಿದ್ದೂ ಇದೆ. ಇದನ್ನು ಮತದಾನದ ಸಮಯದಲ್ಲಿ ಮರೆಯಬಾರದು.

Why are Brahmins not coming up in politics Says Ashoka Haranahalli gvd

ಅಶೋಕ ಹಾರನಹಳ್ಳಿ, ಬೆಂಗಳೂರು

ರಾಜ್ಯದಲ್ಲಿ ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಚುನಾವಣೆಗಳಲ್ಲಿ ಹೇಗೆ ಜಾತಿ ಮತ್ತು ಹಣ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಹಣದ ಹರಿವು ಕಡಿಮೆ ಮಾಡಲು ಚುನಾವಣಾ ಆಯೋಗ ದಿಟ್ಟಹೆಜ್ಜೆಯನ್ನು ಇಟ್ಟಿರುವುದು ನಿಜಕ್ಕೂ ಪ್ರಶಂಸಾರ್ಹ ವಿಷಯ. ಆದರೆ ಅಭ್ಯರ್ಥಿ ಆಯ್ಕೆ ಬಂದಾಗ ಜಾತಿ ಸಮೀಕರಣವಿಲ್ಲದೆ ಯಾವ ಪಕ್ಷವೂ ಅಭ್ಯರ್ಥಿ ಆಯ್ಕೆ ಮಾಡುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ. ಹಾಗೆ ನೋಡಿದರೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ಜಾತಿ ಮತ, ಪಂಥ ಇಂತಹ ವಿಷಯಗಳಿಗೆ ಆಸ್ಪದ ಕೊಡದೆ ರಾಷ್ಟ್ರಹಿತ, ಅಭಿವೃದ್ಧಿ, ಪ್ರಾಮಾಣಿಕತೆ ಇಂತಹ ವಿಷಯಗಳ ಆಧಾರದ ಮೇಲೆ ಪ್ರತಿನಿಧಿಗಳ ಆಯ್ಕೆ ಆಗಬೇಕು. 

ಆದರೆ ಬದಲಾದ ಸನ್ನಿವೇಶದಲ್ಲಿ ಜಾತಿ, ಮತ, ಪಂಥ ಇಂತಹ ವಿಷಯಗಳೇ ಪ್ರಜಾಪ್ರತಿನಿಧಿಗಳ ಆಯ್ಕೆಯ ಮಾನದಂಡವಾಗುತ್ತಿರುವುದು ನಮ್ಮ ವಿಪ್ರ ಸಮುದಾಯದ ಸೇವಾಕಾಂಕ್ಷಿಗಳು ಚುನಾವಣೆಗಳಲ್ಲಿ ಸ್ಪರ್ಧಿಸುವ ಆಲೋಚನೆಯಿಂದಲೇ ವಿಮುಖರಾಗುವಂತೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾಡಿನ ಸಮಸ್ತ ವಿಪ್ರ ಬಾಂಧವರು ಕೆಲವು ಅಂಶಗಳನ್ನು ಗಮನದಲ್ಲಿಡಬೇಕು. ಪ್ರಪ್ರಥಮವಾಗಿ ನಾಡಿನ ಸಮಸ್ತ ಮತ ಬಾಂಧವರು ಅದರಲ್ಲೂ ವಿಪ್ರರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ವಿಪ್ರರು ಮತದಾನಕ್ಕೆ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆ ಹೋಗಲಾಡಿಸಿ ಬದಲಾವಣೆಯ ಹರಿಕಾರರಾಗಬೇಕು.

500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತ: ನಾಡಿದ್ದು ಅಂತಿಮ ಕಣ ರೆಡಿ

ಎರಡನೆಯದಾಗಿ ನಮ್ಮಲ್ಲಿ ಹಲವು ಪಕ್ಷಗಳಲ್ಲಿ ಹಲವು ನಾಯಕರು ಹಲವು ಹುದ್ದೆಗಳನ್ನು ಪಡೆದುಕೊಳ್ಳಲು ಅರ್ಹರೇ ಆಗಿದ್ದಾರೆ. ಉದಾಹರಣೆಗೆ ಕಾಂಗ್ರೆಸ್‌ ಪಕ್ಷದ ಆರ್‌.ವಿ. ದೇಶಪಾಂಡೆ ಅವರು ನುರಿತ ರಾಜಕಾರಿಣಿ ಹಾಗೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ. ಆದರೆ ಜಾತಿ ಆಧಾರದ ಹಿನ್ನಲೆಯಲ್ಲಿ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾದರು ಎಂದರೆ ತಪ್ಪಿಲ್ಲ. ಹಾಗೆಂದು ಇಡಬ್ಲ್ಯುಎಸ್‌ ಕಾಯ್ದೆಯ ಸಮರ್ಪಕವಾಗಿ ಜಾರಿಯಾಗಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಒತ್ತಾಯಿಸಿದಾಗ ಅದರ ಜಾರಿಯನ್ನು ವಿರೋಧಿಸಿದ್ದು ಕಾಂಗ್ರೆಸ್‌ ಪಕ್ಷವೇ. ಈ ವಿಷಯದ ನಿಲುವಿನ ಬಗ್ಗೆ ಮಹಾಸಭೆಗೆ ಹಾಗೂ ಬ್ರಾಹ್ಮಣರಲ್ಲಿ ಒಂದು ಬಗೆಯ ಅಸಮಾಧಾನವಿದೆ.

ಇನ್ನು ಬಿಜೆಪಿ ಬಗ್ಗೆ ಹೇಳುವುದಾದರೆ ಬ್ರಾಹ್ಮಣರು ಬಹಳಷ್ಟುಮಟ್ಟಿಗೆ ಆ ಪಕ್ಷವನ್ನೇ ಬೆಂಬಲಿಸುತ್ತಾರೆ ಮತ್ತು ಬಿಜೆಪಿ ಕೂಡ ಬ್ರಾಹ್ಮಣರೊಂದಿಗಿದೆ ಎಂಬ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಯೋಚಿಸಿದರೆ ಇಂತಹದ್ದೊಂದು ಅಭಿಪ್ರಾಯ ಭಾಗಶಃ ಸರಿ ಇಲ್ಲ. ಭಾಜಪ ಬ್ರಾಹ್ಮಣರ ಜೊತೆ ಇದೆ ಎಂದೂ ಹೇಳಲು ಸಾಧ್ಯವಿಲ್ಲ. 2019ರಲ್ಲಿ ಕುಂದಾಪುರದ ಅಖಿಲ ಕರ್ನಾಟಕ ಮಹಾಸಭಾದ ರಾಜ್ಯ ಸಮ್ಮೇಳನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮಹಾಸಭೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಹಾಗೂ ಮಹಾಸಭಾದ ಕಟ್ಟಡ ನಿಧಿಗೆ 5 ಕೋಟಿ ರು. ಅನುದಾನ ಘೋಷಣೆ ಮಾಡಿದ್ದರು. 

ನಂತರದ ಕೊರೋನಾ ಕಾರಣದಿಂದಾಗಿ ಈ ಅನುದಾನ ಬಿಡುಗಡೆ ಆಗಲಿಲ್ಲ. ಹಾಗೆಂದು ಮಹಾಸಭೆ ಕೈಕಟ್ಟಿಕೂರದೆ ಹಲವು ಬಾರಿ ಈಗಿನ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅನುದಾನ ಕೇಳಿದರೂ ಅನುದಾನಕ್ಕೆ ಅಂಕಿತ ದೊರೆಯಲಿಲ್ಲ ಹಾಗೂ ಆಶ್ವಾಸನೆ ಆಶ್ವಾಸನೆಯಾಗಿಯೇ ಉಳಿಯಿತು. ಕೊನೆಗೆ ಮಹಾಸಭೆ ಹಮ್ಮಿಕೊಳ್ಳಬೇಕಾದ ಕಲ್ಯಾಣ ಕಾರ್ಯಕ್ರಮಗಳು ಹಾಗೇ ನೆನೆಗುದಿಗೆ ಬಿದ್ದಂತಾಯಿತು. ಅದಷ್ಟೇ ಅಲ್ಲದೆ ಇಡಬ್ಲ್ಯುಎಸ್‌ ಬಗ್ಗೆ ಅನೇಕ ಬಾರಿ ಮನವಿ ಮಾಡಿ ಕೇಳಿಕೊಂಡರೂ, ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದ್ದರೂ ವಿಳಂಬ ಧೋರಣೆಯನ್ನು ಅನುಸರಿಸಿ ಇನ್ನೇನು ಚುನಾವಣೆಯ ಘೋಷಣೆಗೆ ಕೆಲವೇ ಘಂಟೆಗಳು ಉಳಿದಿವೆ ಎಂದಾಗ ಆದೇಶ ಹೊರಡಿಸಿದರು. ಇವತ್ತಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಅದೇ ರೀತಿ ಅನೇಕ ಸ್ಥಳಗಳಲ್ಲಿ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ (ಉದಾ: ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ) ಅಂತಹ ಪ್ರದೇಶಗಳಲ್ಲಿ ಬಿಜೆಪಿಯಿಂದ ಬೇರೆ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶ ನೀಡಿದರೂ ರಾಷ್ಟ್ರ ಹಿತಾಸಕ್ತಿ ಹಾಗೂ ಸನಾತನ ಧರ್ಮದ ಒಳಿತನ್ನು ಬಯಸಿ ಯಾವ ಆಮಿಷಗಳಿಗೂ ಒಳಗಾಗದೆ ಬಿಜೆಪಿಯನ್ನು ಬಹುಸಂಖ್ಯಾತ ಬ್ರಾಹ್ಮಣ ಸಮುದಾಯದವರು ಬೆಂಬಲಿಸುತ್ತಾ ಬಂದಿದ್ದಾರೆ. ಹಾಗೆ ಚುನಾಯಿತರಾದ ಅಭ್ಯರ್ಥಿಗಳು ಬ್ರಾಹ್ಮಣ ಸಮುದಾಯದ ನಿರ್ಣಾಯಕ ಮತಗಳನ್ನು ಪಡೆದು ಬ್ರಾಹ್ಮಣರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬೇರೊಂದು ಸಮುದಾಯದ ನಾಯಕರಾಗಿ ಹೊರಹೊಮ್ಮುತ್ತಾರೆ ಹಾಗೂ ನಂತರ ನಡೆಯುವ ಕಾಪೋರ್‍ರೇಶನ್‌/ ಮುನಿಸಿಪಾಲಿಟಿ ಚುನಾವಣೆಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ಕೊಡದೆ ಬ್ರಾಹ್ಮಣ ಅಭ್ಯರ್ಥಿಗಳು ನೇತಾರರಾಗಿ ಹೊರಹೊಮ್ಮುವ ಅವಕಾಶವನ್ನೇ ಕೊಡದಿರುವ ನಿದರ್ಶನಗಳಿವೆ. 

ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ

ಹೀಗೆ ವಿಪ್ರ ಸಮುದಾಯವನ್ನು ಒಟ್ಟಾರೆಯಾಗಿ ಕಡೆಗಣಿಸಿದ ಪ್ರಸಂಗಗಳು ಹಲವಾರಿವೆ. ಆದರೆ ಈ ಸಮುದಾಯದವರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುತ್ತಿರುವುದು ಒಳ್ಳೆಯ ವಿಚಾರ. ಕೆಲವು ಭಾಗಗಳಲ್ಲಿ ಬ್ರಾಹ್ಮಣರು ಎಲ್ಲ ಪಕ್ಷಗಳಿಂದ ವಿವಶವಾಗಿ ನೋಟಾ ಚಲಾಯಿಸಬೇಕು ಎಂದು ಯೋಚನೆ ಮಾಡಿದ್ದಾರೆ. ಆದರೆ ಇದು ಸೂಕ್ತ ನಿರ್ಧಾರವಲ್ಲ. ಮತವನ್ನು ಯಾವುದಾದರೂ ಪಕ್ಷಕ್ಕೆ ಚಲಾಯಿಸಿ. ಆದರೆ ಈ ಮೇಲ್ಕಂಡ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ. ಅಭ್ಯರ್ಥಿಗಳು ಮತ ಕೋರಲು ಬಂದಾಗ ಕೇವಲ ಈ ಮೇಲಿನ ಎರಡೇ ಪಕ್ಷಗಳೆಂದಲ್ಲ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗೆ ಈ ಅಂಶಗಳ ಬಗ್ಗೆ ಅವರ ನಿಲುವನ್ನು ಪ್ರಕಟಿಸುವಂತೆ ಹೇಳಿ. ನಂತರ ಜನರು ತಮ್ಮ ವಿವೇಚನೆಯಂತೆ ಮನಃಸಾಕ್ಷಿಗನುಗುಣವಾಗಿ ತಪ್ಪದೆ ಮತ ಚಲಾಯಿಸಿದರೆ ಯೋಗ್ಯ ಪ್ರತಿನಿಧಿ ಲಭಿಸುತ್ತಾರೆ.

Latest Videos
Follow Us:
Download App:
  • android
  • ios