ಬೆಲೆ ಏರಿಕೆ, ನಿರುದ್ಯೋಗಗಳಿಂದಾಗಿ ದೇಶದಲ್ಲಿಂದು ಜನ ಸಂಕಷ್ಟದಲ್ಲಿ ಇದ್ದಾರೆ. ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕರ್ನಾಟಕದಲ್ಲಿನ 40% ಕಮಿಷನ್‌ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ.

ಮಂಗಳೂರು (ಮೇ.08): ಬೆಲೆ ಏರಿಕೆ, ನಿರುದ್ಯೋಗಗಳಿಂದಾಗಿ ದೇಶದಲ್ಲಿಂದು ಜನ ಸಂಕಷ್ಟದಲ್ಲಿ ಇದ್ದಾರೆ. ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕರ್ನಾಟಕದಲ್ಲಿನ 40% ಕಮಿಷನ್‌ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಆದರೆ, ಪ್ರಧಾನಿ ಮೋದಿಯವರು ಈ ಬಗ್ಗೆ ಮಾತನ್ನೇ ಆಡುವುದಿಲ್ಲ. ಜನರ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯ ಕೊಳ್ನಾಡಿನಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಪ್ರಿಯಾಂಕಾ, ಮೋದಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 

ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಮೋದಿಯವರು ಆತಂಕವಾದ ಮತ್ತು ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆ ಎನ್ನುವುದು ಜ್ವಲಂತ ಸಮಸ್ಯೆ ಅಲ್ಲವೇ ಅಲ್ಲ. ರಾಜ್ಯದ ಜನತೆಗೆ ಲೂಟಿ ಮಾಡುವ ಬಿಜೆಪಿ ಸರ್ಕಾರದ ಬಗ್ಗೆ ಆತಂಕ ಇದೆ. ನಿರುದ್ಯೋಗ, ಬೆಲೆ ಏರಿಕೆಯ ಆತಂಕವಿದೆ. ನಿರುದ್ಯೋಗ, ಬೆಲೆ ಏರಿಕೆಯಿಂದಾಗಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದ ಜನರ ಆತಂಕ ಈ ವಿಚಾರಗಳಲ್ಲಿದೆ. ಆದರೆ, ಅವರ ಭಾಷಣ ತಯಾರು ಮಾಡುವ ಅಧಿಕಾರಿ ಉದ್ಯೋಗದ ಬಗ್ಗೆ ಹೇಳಿದರೂ ಅದನ್ನು ಮೋದಿ ಮಾತನಾಡಲ್ಲ. 

ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಮರೆತ ಕಾಂಗ್ರೆಸ್‌: ಸಚಿವ ಅಮಿತ್‌ ಶಾ ಕಿಡಿ

ಏಕೆಂದರೆ, ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯೇ ಆಗಿಲ್ಲ, ಮಾತನಾಡೋದು ಹೇಗೆ? ಹಾಗಾಗಿ, ಜನರ ಸಮಸ್ಯೆಗಳ ಬಗ್ಗೆ ಮಾತನಾಡದೆ, ಮೋದಿಯವರು ಆತಂಕವಾದದ ಬಗ್ಗೆ ಭಾಷಣ ಮಾಡಿ ಹೋಗುತ್ತಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ಬಿಜೆಪಿ ಸರ್ಕಾರ ಪ್ರತಿ ಹುದ್ದೆಗೆ ದರ ನಿಗದಿ ಮಾಡಿದೆ. ಇದು ಇಲ್ಲಿನ ನಿಜವಾದ ಆತಂಕ. ಶಾಸಕರ ಪುತ್ರನ ಬಳಿ ಕೋಟ್ಯಂತರ ಹಣ ದೊರೆತರೂ ಕ್ರಮ ಕೈಗೊಂಡಿಲ್ಲ. ಆದರೆ, ಇದಾವುದರ ಬಗ್ಗೆ ಮೋದಿ ಮಾತನಾಡಲ್ಲ ಎಂದರು.

ಕರಾವಳಿಯಲ್ಲಿ ಹುಟ್ಟಿದ ನಾಲ್ಕು ಬ್ಯಾಂಕ್‌ಗಳನ್ನು ಮೋದಿ ಸರ್ಕಾರ ನಾಶ ಮಾಡಿದೆ. ಇಂದಿರಾಗಾಂಧಿ ನವ ಮಂಗಳೂರು ಬಂದರು ನಿರ್ಮಾಣ ಮಾಡಿದರೆ, ಜವಾಹರ ಲಾಲ್‌ ನೆಹರೂ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರು. ಆದರೆ, ಬಿಜೆಪಿ ಸರ್ಕಾರ ಎರಡನ್ನೂ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದೆ. ದೇಶದ ಎಲ್ಲ ಸಾರ್ವಜನಿಕ ಸಂಪತ್ತನ್ನು ಒಬ್ಬಿಬ್ಬರು ವ್ಯಕ್ತಿಗಳಿಗೆ ಮಾತ್ರ ಮಾರಾಟ ಮಾಡುವುದು ಆತಂಕ ಅಲ್ವಾ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಮೆಗಾ ಪ್ರಚಾರಕ್ಕೆ ತೆರೆ: ಕಡೇ ದಿನ ಬೆಂಗಳೂರಲ್ಲಿ ರೋಡ್‌ ಶೋ

ಬೆಲೆ ಏರಿಕೆಯಿಂದ ತತ್ತರಿಸಿರುವ ಬಡಜನರ ಉದ್ಧಾರಕ್ಕೆಂದೇ ಗ್ಯಾರಂಟಿ ಭರವಸೆಗಳೊಂದಿಗೆ ಕಾಂಗ್ರೆಸ್‌ ನಿಮ್ಮೆದುರು ಬಂದಿದೆ. ಕೊಟ್ಟಮಾತನ್ನು ಉಳಿಸಿಕೊಳ್ಳುತ್ತೇವೆ. ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.