ಕಾಂಗ್ರೆಸ್‌ನವರು ಈವರೆಗೆ ನನ್ನ ವಿರುದ್ಧ ಬರೋಬ್ಬರಿ 91 ಬಾರಿ ಬಗೆಬಗೆಯ ಬೈಗುಳ ಶಬ್ದಗಳನ್ನು ಬಳಸಿ, ನನ್ನನ್ನು ತೆಗಳಿದ್ದಾರೆ. ಕಾಂಗ್ರೆಸ್ಸಿಗರಿಗೆ ಚುನಾವಣೆ ಸಂದರ್ಭಗಳಲ್ಲಿ ನನ್ನನ್ನು ಬೈಯ್ಯುವುದೇ ಕೆಲಸವಾಗಿದೆ.
ಹುಮನಾಬಾದ್/ಬೀದರ್ (ಏ.30): ‘ಕಾಂಗ್ರೆಸ್‌ನವರು ಈವರೆಗೆ ನನ್ನ ವಿರುದ್ಧ ಬರೋಬ್ಬರಿ 91 ಬಾರಿ ಬಗೆಬಗೆಯ ಬೈಗುಳ ಶಬ್ದಗಳನ್ನು ಬಳಸಿ, ನನ್ನನ್ನು ತೆಗಳಿದ್ದಾರೆ. ಕಾಂಗ್ರೆಸ್ಸಿಗರಿಗೆ ಚುನಾವಣೆ ಸಂದರ್ಭಗಳಲ್ಲಿ ನನ್ನನ್ನು ಬೈಯ್ಯುವುದೇ ಕೆಲಸವಾಗಿದೆ. ಆದರೆ, ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್‌ನ ಆ ತೆಗಳಿಕೆಗಳೆಲ್ಲ ಮಣ್ಣು ಪಾಲಾಗುವುದು ಗ್ಯಾರಂಟಿ. ಕಾಂಗ್ರೆಸ್‌ನವರು ಯಾವ ಪ್ರಮಾಣದಲ್ಲಿ ಕೆಸರೆರಚುತ್ತಾರೋ, ಅಷ್ಟೇ ಪ್ರಮಾಣದಲ್ಲಿ ಕಮಲ ಅರಳುವುದು ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಮೋದಿ, ಬೆಳಗಾವಿ ಜಿಲ್ಲೆ ರಾಯಬಾಗ, ವಿಜಯಪುರ ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಳೆದ ಗುರುವಾರ ಗದಗ ತಾಲೂಕಿನ ನರೇಗಲ್‌ನಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮೋದಿ ವಿಷದ ಹಾವು ಇದ್ದ ಹಾಗೆ. ಮೋದಿ ಒಳ್ಳೆಯದನ್ನು ಮಾಡಿದ್ದಾರೆ, ಒಂದು ಸಾರಿ ನೆಕ್ಕಿ ನೋಡೋಣ ಎಂದು ಹೋದರೆ ನೀವು ಸತ್ತ ಹಾಗೆ’ ಎಂದಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ಅಮಿತ್ ಶಾ ಸೇರಿ ಬಿಜೆಪಿಯ ಉನ್ನತ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಈ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದರು. ‘ಕಾಂಗ್ರೆಸ್‌ನವರು ಈ ಹಿಂದೆ ಅಂಬೇಡ್ಕರ್ ಅವರನ್ನೇ ದೇಶದ್ರೋಹಿ, ಅಸುರ ಎಂದು ಜರಿದಿದ್ದರು. ಕಾಂಗ್ರೆಸ್ ಹೇಗೆ ನೋವು ನೀಡಿತು ಎಂಬುದನ್ನು ಅಂಬೇಡ್ಕರ್ ಅವರೇ ಬೆಳಗಾವಿಯಲ್ಲಿ ಹೇಳಿದ್ದರು. ಸಾವರ್ಕರ್ ಅವರನ್ನೂ ಕಾಂಗ್ರೆಸ್ ಬಿಟ್ಟಿಲ್ಲ. ನನ್ನನ್ನೂ ಅದೇ ರೀತಿಯಾಗಿ ಪದಗಳನ್ನು ಹುಡುಕಿ, ಹುಡುಕಿ ತೆಗಳುತ್ತಿರುವದನ್ನು ನೋಡಿದರೆ, ನಾನೂ ಆ ಮಹಾತ್ಮರ ಸಾಲಿಗೆ ಸೇರಿದೆ ಎಂಬ ಹೆಮ್ಮೆ ಆಗುತ್ತಿದೆ’ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ‘ಈ ಹಿಂದೆ ನನಗೆ ಚೌಕಿದಾರ್ ಚೋರ್ ಎಂದರು. ನಂತರದ ಚುನಾವಣೆಯಲ್ಲಿ ಮೋದಿ ಚೋರ್ ಎಂದರು. ಈಗ ಲಿಂಗಾಯತ ಭ್ರಷ್ಟಅಂತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲೇಬೇಕು. ಕಾಂಗ್ರೆಸ್ಸಿಗರಿಗೆ ಚುನಾವಣೆ ಸಂದರ್ಭಗಳಲ್ಲಿ ನನ್ನನ್ನು ಬೈಯ್ಯುವುದೇ ಕೆಲಸವಾಗಿದೆ. ಚೌಕಿದಾರ್ ಚೋರ್ ಎಂದರೂ ಆಟ ನಡೆಯಲಿಲ್ಲ, ಮೋದಿ ಚೋರ್ ಎಂದರೂ ಆಟ ನಡೆಯಲಿಲ್ಲ, ಈಗ ಲಿಂಗಾಯತ ಸಿಎಂ ಚೋರ್ ಎನ್ನುತ್ತಿದ್ದಾರೆ. ಕಾಂಗ್ರೆಸ್ ನನ್ನನ್ನು ತೆಗಳುವುದರಲ್ಲಿಯೇ ಕಾಲಹರಣ ಮಾಡುತ್ತಿರಲಿ, ನಾನು ಮಾತ್ರ ಜನತೆಯ ಸೇವೆ ಮಾಡುವುದರಲ್ಲಿಯೇ ಮಗ್ನನಾಗಿರುತ್ತೇನೆ.
ಜನರಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ನನ್ನನ್ನು ಬೈಯಲು ಶಬ್ದಕೋಶಗಳಲ್ಲಿ ಶಬ್ದಗಳನ್ನು ಹುಡುಕಿ, ಹುಡುಕಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು, ಇಷ್ಟೇ ಶ್ರಮವನ್ನು ಉತ್ತಮ ಆಡಳಿತ, ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವುದಕ್ಕೆ ಬಳಸಿದ್ದರೆ ಕಾಂಗ್ರೆಸ್‌ಗೆ ಈ ದು:ಸ್ಥಿತಿ, ದಯನೀಯ ಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು. ಈ ಹಿಂದೆ ಯಾರಾರಯರ ವಿರುದ್ಧ ಕಾಂಗ್ರೆಸ್ ಕಟು ಶಬ್ದಗಳಿಂದ ತೆಗಳಿದೆಯೋ ಅವರಾರಯರೂ ಇವರನ್ನು ಕ್ಷಮಿಸಿಲ್ಲ, ನೆಲಕಚ್ಚಿಸಿದ್ದಾರೆ. ಜಗಜ್ಯೋತಿ ಬಸವೇಶ್ವರ, ಭಕ್ತ ಕನಕದಾಸರಂತಹ ಅನೇಕ ಮಹಾನ್ ಪುರುಷರು ಜನಿಸಿದ ಪುಣ್ಯಭೂಮಿ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರಿಗೆ ಇತರರನ್ನು ಅವಮಾನ ಮಾಡುವುದೇ ಕಾಯಕವಾಗಿದೆ.
ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ
ಕರ್ನಾಟಕದ ಮಾನ ಕಳೆಯುವ ಇಂತವರನ್ನು ನೀವು ಕ್ಷಮಿಸುತ್ತಿರಾ?. ಇಂತಹ ಮಹನೀಯರ ನಾಡಿನಲ್ಲಿ ಲಿಂಗಾಯತರ ಸ್ವಾಭಿಮಾನ ಕೆಣಕಿ ಅವಹೇಳನ ಮಾಡಿದ ಕಾಂಗ್ರೆಸ್‌ನವರಿಗೆ ಓಟಿನ ಮೂಲಕ ಉತ್ತರ ಕೊಡಿ. ಬಿಜೆಪಿಯನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ. ಕರ್ನಾಟಕವನ್ನು ರಾಜ್ಯದಲ್ಲಿಯೇ ನಂಬರ್ ಒನ್ ಮಾಡುತ್ತೇವೆ ಎಂದು ಜನರಿಗೆ ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
