Asianet Suvarna News Asianet Suvarna News

ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಭಯವಿಲ್ಲ: ಚಲುವರಾಯಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದರೆ ನಮಗೆ ಯಾವುದೇ ಭಯ, ಆತಂಕ ಇಲ್ಲ. ಮಂಡ್ಯದ ಜನರು ಸ್ವಾಭಿಮಾನಿಗಳು. ಅವರು ಹೊರಗಿನವರಿಗೆಂದೂ ಅವಕಾಶ ನೀಡುವುದಿಲ್ಲ. ಅದು 2019ರ ಚುನಾವಣೆಯಲ್ಲೇ ಸಾಬೀತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿಳಿಸಿದರು. 
 

Karnataka Election 2023 N Chaluvaraya Swamy Slams On HD Kumaraswamy gvd
Author
First Published Apr 18, 2023, 3:20 AM IST | Last Updated Apr 18, 2023, 3:20 AM IST

ನಾಗಮಂಗಲ (ಏ.18): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದರೆ ನಮಗೆ ಯಾವುದೇ ಭಯ, ಆತಂಕ ಇಲ್ಲ. ಮಂಡ್ಯದ ಜನರು ಸ್ವಾಭಿಮಾನಿಗಳು. ಅವರು ಹೊರಗಿನವರಿಗೆಂದೂ ಅವಕಾಶ ನೀಡುವುದಿಲ್ಲ. ಅದು 2019ರ ಚುನಾವಣೆಯಲ್ಲೇ ಸಾಬೀತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕುಮಾರಸ್ವಾಮಿ ಮಂಡ್ಯಕ್ಕೆ ಬರುವುದನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ. 

ಬೇರೆ ತಾಲೂಕಿನವರನ್ನು ನಮ್ಮ ಜನರು ಪ್ರೀತಿಯಿಂದ ಕಾಣಬಹುದು. ವಿಶ್ವಾಸ ತೋರಿಸಬಹುದು. ಆದರೆ, ಅವರ ತೀರ್ಮಾನ ಯಾವಾಗಲೂ ನಮ್ಮ ಪರವಾಗಿರುತ್ತದೆ. ಹಾಗಾಗಿ ನಮಗೆ ಅವರು ಬರುವುದರಿಂದ ಭಯ, ಆತಂಕವಿಲ್ಲ ಎಂದು ನುಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರು. ಆದರೆ, ಜನರು ಕೊಟ್ಟತೀರ್ಪು ಎಲ್ಲರಿಗೂ ಗೊತ್ತೇ ಇದೆ. ಬೇರೆ ಜಿಲ್ಲೆಯವರನ್ನು ನಮ್ಮ ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.

ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ: ಸಿದ್ದರಾಮಯ್ಯ ವಿರುದ್ದ ಕಿಡಿ

ಕುಮಾರಸ್ವಾಮಿ ಅವರ ಎದುರಾಗಿ ನೀವು ಸ್ಪರ್ಧೆಗಿಳಿಯುವಿರಾ ಎಂಬ ಪ್ರಶ್ನೆಗೆ, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅವರನ್ನು ಎದುರಿಸುವ ಸಮರ್ಥ ಅಭ್ಯರ್ಥಿಗಳೂ ನಮ್ಮಲ್ಲಿದ್ದಾರೆ ಎಂದು ಚುಟುಕಾಗಿ ಉತ್ತರಿಸಿದರು. 2018ರ ಚುನಾವಣೆಯಲ್ಲಿ ಜಿಲ್ಲೆಯ ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿದರು. ಅದಕ್ಕೆ ಪ್ರತಿಯಾಗಿ 16 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಜಿಲ್ಲೆಗೆ ಏನು ಕೊಡುಗೆ ಕೊಟ್ಟರು. ಶಾಸಕರು ಮಾಡಿದ ಅಭಿವೃದ್ಧಿ ಸಾಧನೆ ಏನು. ಆಗಲೇ ಏನು ಮಾಡಲಾಗದವರು ಈಗ ಬಂದು ಅಭಿವೃದ್ಧಿ ಮಾಡುತ್ತೇನೆ ಎಂದರೆ ಜನರು ಅದನ್ನು ನಂಬುವಷ್ಟುದಡ್ಡರಲ್ಲ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಗಿ ಹೇಳಿದರು.

ಕುಮಾರಸ್ವಾಮಿ ಅವರು 16 ತಿಂಗಳು ಮುಖ್ಯಮಂತ್ರಿಯಾಗಿ ಜನರಿಗೆ ನೀಡಿದ ಭರವಸೆ ಈಡೇರಿಸಲಿಲ್ಲ. ಕಾಂಗ್ರೆಸ್‌ ಅವರ ಮನೆ ಬಾಗಿಲಿಗೆ ಹೋಗಿ ನೀಡಿದ ಅಧಿಕಾರವನ್ನೂ ಉಳಿಸಿಕೊಳ್ಳಲಿಲ್ಲ. ಮುಖ್ಯಮಂತ್ರಿಯಾಗಿ ಅವರಿಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದೆವು. ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದೆವು. ಅವರಿಗೆ ಇಚ್ಛಾಶಕ್ತಿ, ಬದ್ಧತೆ ಇದ್ದಿದ್ದರೆ ಆಗಲೇ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸಬಹುದಿತ್ತು. ಮೈಷುಗರ್‌ ಕಾರ್ಖಾನೆಯನ್ನು ಅವರಿಂದ ಆರಂಭಿಸಲಾಗಲಿಲ್ಲ. ಅವರು ಕೊಟ್ಟ8 ಸಾವಿರ ಕೋಟಿ ರು. ಎಲ್ಲಿಗೆ ಹೋಯಿತೋ ದೇವರಿಗೇ ಗೊತ್ತು. ಈ ರೀತಿಯ ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸಲು ಸಾಧ್ಯವಿಲ್ಲ ಎಂದು ನೇರವಾಗಿ ನುಡಿದರು. ಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾಧ್ಯಕ್ಷೆ ಅಂಜನಾ, ಮುಖಂಡರಾದ ಜವರೇಗೌಡ, ಪ್ರಸನ್ನ, ಬಾಲು, ಎಚ್‌.ಟಿ.ಕೃಷ್ಣೇಗೌಡ ಇತರರಿದ್ದರು.

ಜೆಡಿಎಸ್‌ ಶಾಸಕರು ಅಸಮರ್ಥರೆಂದು ಒಪ್ಪಿಕೊಂಡಂತೆ: ಜಿಲ್ಲೆಯ ಅಭಿವೃದ್ಧಿಗಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಕುಮಾರಸ್ವಾಮಿ ಅವರನ್ನು ಆಹ್ವಾನಿಸುತ್ತಿದ್ದಾರೆ ಎಂದರೆ ಜೆಡಿಎಸ್‌ ಶಾಸಕರೆಲ್ಲರೂ ಅಸಮರ್ಥರು ಎಂದು ಒಪ್ಪಿಕೊಂಡಂತಲ್ಲವೇ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಳೆದ ಚುನಾವಣೆಯಲ್ಲಿ ಈ ನೆಲದ ಜನರು ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದರು. ಈಗ ಅಭಿವೃದ್ಧಿಗಾಗಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದ್ದಾರೆ. ಹಾಗಾದರೆ ಜೆಡಿಎಸ್‌ ಶಾಸಕರೆಲ್ಲರೂ ಅಸಮರ್ಥರು. ಅಭಿವೃದ್ಧಿ ಮಾಡಲಾಗದವರು ಎನ್ನುವುದು ಶ್ರೀನಿವಾಸ್‌ ಹೇಳಿಕೆಯಿಂದಲೇ ಸಾಬೀತಾದಂತಾಗಿದೆ ಎಂದು ಕುಟುಕಿದರು.

ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?

ಏಳೂ ಜನ ಶಾಸಕರು ಅಭಿವೃದ್ಧಿಗೆ ಆದ್ಯತೆ ಕೊಡಲಿಲ್ಲ. ಮನ್‌ಮುಲ್‌ನಲ್ಲಿ ನಡೆದ ನೀರು ಮಿಶ್ರಿತ ಹಾಲು ಹಗರಣ ಮುಚ್ಚಿಹಾಕಿದರು. ಕಬ್ಬು, ಭತ್ತ ರೇಷ್ಮೆ, ಹಾಲು, ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲಾಗಲಿಲ್ಲ. ಮೈಷುಗರ್‌ ಕಾರ್ಖಾನೆ ಸಮರ್ಥವಾಗಿ ನಡೆಯುವಂತೆ ಮಾಡಲಿಲ್ಲ. ರೈತರ ಸಮಸ್ಯೆಗಳ ಬಗ್ಗೆ ದನಿ ಎತ್ತಲಿಲ್ಲ. ಇಷ್ಟೆಲ್ಲಾ ವೈಫಲ್ಯಗಳಿದ್ದ ಮೇಲೆ ಜೆಡಿಎಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಏನು ಪ್ರಯೋಜನ. ಅವರೆಲ್ಲರನ್ನೂ ಚುನಾವಣೆಯಲ್ಲಿ ತಿರಸ್ಕರಿಸುವಂತೆ ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios