ಬಿಜೆಪಿ ದುರಾಡಳಿತ ತಿಂಗಳಲ್ಲಿ ಅಂತ್ಯ: ಸಂಸದ ಶಶಿ ತರೂರ್
ಕಳೆದ 4 ವರ್ಷದಲ್ಲಿ ಬಿಜೆಪಿ ರಾಜ್ಯವನ್ನು ಹಾಳುಮಾಡಿದೆ. ವಿಶ್ವವಿಖ್ಯಾತಿ ಪಡೆದಿದ್ದ ಬೆಂಗಳೂರು ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಕುಸಿತ ಕಂಡಿದೆ. ಜನರು 40 ಪರ್ಸೆಂಟ್ ಕಮಿಷನ್ ಸರ್ಕಾರದಿಂದ ಬೇಸತ್ತಿದ್ದು, ಶೇ.100ರಷ್ಟು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ.
ಬೆಂಗಳೂರು (ಏ.10): ‘ಕಳೆದ 4 ವರ್ಷದಲ್ಲಿ ಬಿಜೆಪಿ ರಾಜ್ಯವನ್ನು ಹಾಳುಮಾಡಿದೆ. ವಿಶ್ವವಿಖ್ಯಾತಿ ಪಡೆದಿದ್ದ ಬೆಂಗಳೂರು ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಕುಸಿತ ಕಂಡಿದೆ. ಜನರು 40 ಪರ್ಸೆಂಟ್ ಕಮಿಷನ್ ಸರ್ಕಾರದಿಂದ ಬೇಸತ್ತಿದ್ದು, ಶೇ.100ರಷ್ಟು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ. ಬಿಜೆಪಿಯ ದುರಾಡಳಿತ ಒಂದು ತಿಂಗಳಲ್ಲಿ ಅಂತ್ಯವಾಗಲಿದೆ’ ಎಂದು ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಾನು ಮೊದಲ ಬಾರಿ ಮತ ಹಾಕುತ್ತಿರುವ ಯುವ ಮತದಾರರು ಹಾಗೂ ಶಿಕ್ಷಕರ ಜತೆ ಚರ್ಚೆ ಮಾಡಿದ್ದು, ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ದುರಾಡಳಿತವಿದೆ. ಪರಿಣಾಮ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಸಮಸ್ಯೆಗಳಿಗೆ ಪರಿಹಾರ ನೀಡಲು ಕೆಲವು ಕಾರ್ಯಕ್ರಮ ರೂಪಿಸಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ, ಮನೆಯೊಡತಿಗೆ ಪ್ರೋತ್ಸಾಹ ಧನ, ಉಚಿತ ವಿದ್ಯುತ್ ನೀಡಲು ತೀರ್ಮಾನಿಸಿದೆ. ಕಾಂಗ್ರೆಸ್‌ನ ಮೇಲಿನ ವಿಶ್ವಾಸದಿಂದ ಜನರು ಬಿಜೆಪಿಯನ್ನು ಕಿತ್ತೊಗೆಯಲಿದ್ದಾರೆ ಎಂದರು.
ರಾಜಕಾರಣ ನಿಂತ ನೀರಲ್ಲ, ನಾನೆಂದೂ ಭ್ರಷ್ಟಾಚಾರ ಮಾಡಿಲ್ಲ: ರಘು ಆಚಾರ್
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಲ್ಲಿ 5 ಶಾಸಕರು, 2 ಎಂಎಲ್‌ಸಿ, 11 ಮಾಜಿ ಶಾಸಕರು, 4 ಮಾಜಿ ಎಂಎಲ್‌ಸಿ, ಒಬ್ಬರು ಮಾಜಿ ಸಂಸದರು ಕಾಂಗ್ರೆಸ್ ಪಕ್ಷ ಸೇರಿದ್ದು, ಬೇರೆ ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದು ನಂಬಿರುವುದಕ್ಕೆ ಇದು ಸಾಕ್ಷಿ ಎಂದು ಹೇಳಿದರು. ಮೋದಿ ಅವರ ಬಂಡಿಪುರ ಪ್ರವಾಸದ ಬಗ್ಗೆ ಕೇಳಿದಾಗ, ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮ ಆರಂಭಿಸಿದ್ದು ಇಂದಿರಾಗಾಂಧಿ ಅವರು. ಇದು ಎಲ್ಲರಿಗೂ ತಿಳಿದಿರುವ ಸತ್ಯ. ಇದೀಗ ಚುನಾವಣೆ ಸಮಯದಲ್ಲಿ ಮೋದಿ ಅವರು ಹುಲಿ ಸಂರಕ್ಷಣೆ ವಿಚಾರವಾಗಿ ಬಂಡೀಪುರ ಪ್ರವಾಸ ಮಾಡುತ್ತಿದ್ದಾರೆ. ಅವರು ಕನ್ನಡಿಗರ ಹಿತಾಸಕ್ತಿಯ ಬಗ್ಗೆಯೂ ಆಲೋಚನೆ ಮಾಡಿದರೆ ಉತ್ತಮ ಎಂದು ವ್ಯಂಗ್ಯವಾಡಿದರು.
ಗೆದ್ದ ಮೇಲೆ ಸಿಎಂ ಬಗ್ಗೆ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿ ತರೂರ್, ‘ಖರ್ಗೆ ಅವರು ನನ್ನ ಅಧ್ಯಕ್ಷರು. ನಾವೆಲ್ಲರೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಇದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಮೊದಲು ಚುನಾವಣೆ ಗೆಲ್ಲಬೇಕು, ನಂತರ ಈ ವಿಚಾರವಾಗಿ ಚರ್ಚೆ ಮಾಡಬಹುದು’ ಎಂದರು.
ಸಚಿವ ಹಾಲಪ್ಪ ಆಚಾರ್ ಸಮ್ಮುಖದಲ್ಲಿ 600ಕ್ಕೂ ಹೆಚ್ಚು ಕಾಂಗ್ರೆಸಿಗರು ಬಿಜೆಪಿಗೆ ಸೇರ್ಪಡೆ
ನಂದಿನಿಯನ್ನು ಕಾಪಾಡಿಕೊಳ್ಳೋಣ: ನಾವೆಲ್ಲರೂ ಪ್ರೀತಿಯಿಂದ ಬೆಳೆಸಿರುವ ನಂದಿನಿಯನ್ನು ಕಾಪಾಡಿಕೊಳ್ಳಬೇಕು. ರಾಜ್ಯದ ಜನರು ನಂದಿನಿ ವಿಚಾರದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯವನ್ನು ಎಲ್ಲರೂ ಆಲಿಸಬೇಕು. ಈಗಾಗಲೇ ಕರ್ನಾಟಕದ ಬ್ಯಾಂಕ್‌ಗಳನ್ನು ಬ್ಯಾಂಕ್ ವಿಲೀನ ಹೆಸರಿನಲ್ಲಿ ನಾಶ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಂದಿನಿ, ಕೆಎಂಎಫ್ ಅಪಾಯಕ್ಕೆ ಸಿಲುಕಿದ್ದು, ಎಲ್ಲರೂ ಸೇರಿ ಕಾಪಾಡಿಕೊಳ್ಳೋಣ ಎಂದು ಶಶಿ ತರೂರ್ ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.