ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್ ಕಣ್ಣೀರಧಾರೆ!
ಕನಕಪುರ ಕ್ಷೇತ್ರದಲ್ಲಿರುವ ಸ್ವ ಗ್ರಾಮ ದೊಡ್ಡಾಲಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಪರ ಚುನಾವಣಾ ಪ್ರಚಾರದ ವೇಳೆ ಸಂಸದ ಡಿ.ಕೆ.ಸುರೇಶ್ ಭಾವುಕರಾಗಿ ಕಣ್ಣೀರಿಟ್ಟರು.
ಕನಕಪುರ (ಮೇ.07): ಕನಕಪುರ ಕ್ಷೇತ್ರದಲ್ಲಿರುವ ಸ್ವ ಗ್ರಾಮ ದೊಡ್ಡಾಲಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಪರ ಚುನಾವಣಾ ಪ್ರಚಾರದ ವೇಳೆ ಸಂಸದ ಡಿ.ಕೆ.ಸುರೇಶ್ ಭಾವುಕರಾಗಿ ಕಣ್ಣೀರಿಟ್ಟರು. ಈ ತಾಲೂಕಿನ ರೈತರ, ಯುವಕರ, ಮಹಿಳೆಯರ ಜನ ಸಾಮಾನ್ಯರ ಅಭಿವೃದ್ಧಿಗಾಗಿ ಚಿಂತನೆ ನಡೆಸುತ್ತಾ ನಿದ್ದೆ, ಊಟ ಇಲ್ಲದೆ ಡಿ.ಕೆ.ಶಿವಕುಮಾರ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವಂತಹ ಕೆಲಸವನ್ನು ನಮ್ಮ ತಾಲೂಕಿನ ಜನತೆ ಮಾಡಬೇಕಾಗಿದೆ ಎಂದು ಸುರೇಶ್ ಭಾವುಕರಾಗಿ ನುಡಿದರು. ಕಳೆದ ಮೂವತೈದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿಮೀರಿ ಕೆಲಸ ಮಾಡಿರುವ ಡಿ.ಕೆ. ಶಿವಕುಮಾರ್ ಅವರನ್ನು ಈ ಬಾರಿ ಕ್ಷೇತ್ರದ ಜನತೆ ಭಾರೀ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ರಾಜ್ಯದ ಅಭಿವೃದ್ಧಿಗಾಗಿ ಕನಸನ್ನು ಇಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ಬಿಜೆಪಿ ಪಕ್ಷದವರು ಏನೆಲ್ಲಾ ತೊಂದರೆ ಕೊಟ್ಟರು ಸಹಿಸಿಕೊಂಡು ಕೇವಲ ಎರಡು ಗಂಟೆಗಳ ಕಾಲ ನಿದ್ರೆ ಮಾಡುತ್ತಾ ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿರುವ ಡಿ.ಕೆ.ಶಿವಕುಮಾರ್ ಅವರ ಗೌರವ, ಘನತೆ ಉಳಿಸುವುದು ಈ ಕ್ಷೇತ್ರದ ಜನರ ಕೈಯಲ್ಲಿದೆ ಎಂದರು. ರಾಜ್ಯದಲ್ಲಿ ಭ್ರಷ್ಟ,ಭಂಡ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯುವ ಕಾಲ ಬಂದಿದೆ. ರೈತರ, ಯುವಕರ,ಮಹಿಳೆಯರ ಪರವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಛಲದಿಂದ ಡಿಕೆಶಿಯವರು ಗಡ್ಡ ಬಿಟ್ಟಿರುವುದನ್ನು ಅಣಕಿಸುವ ಬಿಜೆಪಿ ನಾಯಕರಿಗೆ ಮೇ 10ರಂದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಈ ಕ್ಷೇತ್ರದ ಜನ ಉತ್ತರ ನೀಡುವಂತೆ ಬಾವುಕರಾಗಿ ನುಡಿದರು.
ನನ್ನನ್ನು ಸೋಲಿಸಲು ಇದೇನು ಗುಜರಾತ್ ಅಲ್ಲ: ಜಗದೀಶ್ ಶೆಟ್ಟರ್ ಕಿಡಿ
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ತಾಲ್ಲೂಕಿನ ಪ್ರತಿಯೊಬ್ಬ ಜನತೆ ತಮ್ಮ ಬಂಧು-ಬಳಗ ಸೇರಿದಂತೆ ನಿಮ್ಮ ಮನೆಯ ಮಗನ ಚುನಾವಣೆ ಎಂದು ಭಾವಿಸಿ ಮತಹಾಕಿಸುವ ಮೂಲಕ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಬಹುಮತದಿಂದ ಜಯ ಗಳಿಸಿ ವಿರೋದಿಗಳಿಗೆ ತಕ್ಕ ಉತ್ತರ ನೀಡುವಂತೆ ಸುರೇಶ್ ಮನವಿ ಮಾಡಿದರು. ಪ್ರಚಾರದ ವೇಳೆ ಪಕ್ಷದ ಮುಖಂಡರು ಹಾಗು ನೂರಾರು ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್ ಪಕ್ಷ ಹಾಗೂ ಶಿವಕುಮಾರ್ ರವರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಶ್ರೀರಾಮ ಸೇನೆಯನ್ನು ಏಕೆ ಬ್ಯಾನ್ ಮಾಡಲಾಗಿದೆ: ಬಿಜೆಪಿ ಆಡಳಿತ ಇರುವ ಮೂರು ರಾಜ್ಯಗಳಲ್ಲಿ ಯಾವ ಕಾರಣಕ್ಕಾಗಿ ಶ್ರೀ ರಾಮ ಸೇನೆ ಬ್ಯಾನ್ ಮಾಡಲಾಗಿದೆ ಎಂಬುದನ್ನು ಹೇಳಲಿ ಎಂದು ಬಿಜೆಪಿ ನಾಯಕರಿಗೆ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಸೇರಿ ಮೂರು ರಾಜ್ಯಗಳಲ್ಲಿ ಶ್ರೀ ರಾಮಸೇನೆ ಬ್ಯಾನ್ ಮಾಡಿದ್ದಾರೆ. ಯಾವ ಕಾರಣಕ್ಕೆ ಬ್ಯಾನ್ ಮಾಡಿದ್ದಾರೆಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳಬೇಕು. ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎಂಬ ಕಾರಣಕ್ಕೆ ಧರ್ಮದ ಹೆಸರಿನಲ್ಲಿ ಅಡ್ಡ ಬರುವುದು ಒಳ್ಳೆಯದಲ್ಲ. ನಾವು ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಿಲ್ಲ. ನಾವೂ ಕೂಡಾ ದೇವಸ್ಥಾನಕ್ಕೆ ಹೋಗಿ ದೇವರು ಮಾಡುತ್ತೀವಿ. ಆದರೆ, ಪ್ರಚಾರ ಮಾಡಿಕೊಂಡು ರಾಮ - ಹನುಮನ ಪೂಜೆ ಮಾಡುವುದಿಲ್ಲ. ವೋಟಿಗಾಗಿ ಪೂಜೆ ಮಾಡುವವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಬಿಜೆಪಿಯಿಂದ ಜಾತಿ ಎತ್ತಿ ಕಟ್ಟುವ ಕೆಲಸ, ದ್ವೇಷದ ವಾತಾವರಣ ಸೃಷ್ಟಿ: ಸಿದ್ದು
ಕನಕಪುರದಲ್ಲಿ ಭಯದ ವಾತಾವರಣವಿದೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ಸಂತೋಷ್‌ಗೆ ನಾನೇ ಎಲ್ಲ ರೀತಿಯ ರಕ್ಷಣೆ ಕೊಡುತ್ತೇನೆ. ಅವರೇ ಮನೆ ಮನೆಗೆ ಬಂದು ಮತ ಕೇಳಲಿ. ಅದಕ್ಕೆ ಬಿಎಸ್‌ಎಫ್‌ನ ರಕ್ಷಣೆ ಅವಶ್ಯಕತೆ ಇಲ್ಲ. ನಾನು ಒಂದು ಮಾತು ಹೇಳಿದರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷ ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ. ಅದು ಕಾಂಗ್ರೆಸ್ ಅನ್ನು ಸುಡುತ್ತದೆ ಎಂದು ಅಶೋಕ್ ನೀಡಿರುವ ಹೇಳಿಕೆಗೆ ಆರ್.ಅಶೋಕ್ 40 ಪರ್ಸೆಂಟ್ ಸರ್ಕಾರದ ಭ್ರಷ್ಟಸಚಿವ ಎಂದು ಸುರೇಶ್ ಕಟುವಾಗಿ ಟೀಕಿಸಿದರು.