ಮತ ಹಾಕಿಸಲು 5000+ ಬಸ್, ಮಿನಿಬಸ್ ಬುಕಿಂಗ್: ಮೇ 9ರಂದು ರಾಜ್ಯದಲ್ಲಿ ದುಪ್ಪಟ್ಟು ಬಸ್ ಸಂಚಾರ
ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮ ಚಿಗಿತುಕೊಂಡಿದ್ದು, ಮತದಾನದ ದಿನದಂದು ಮತದಾರರನ್ನು ಕರೆತರಲು ರಾಜಕೀಯ ಪಕ್ಷ, ಮುಖಂಡರಿಂದ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.
ಗಿರೀಶ್ ಗರಗ
ಬೆಂಗಳೂರು (ಮೇ.04): ಚುನಾವಣೆ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮ ಚಿಗಿತುಕೊಂಡಿದ್ದು, ಮತದಾನದ ದಿನದಂದು ಮತದಾರರನ್ನು ಕರೆತರಲು ರಾಜಕೀಯ ಪಕ್ಷ, ಮುಖಂಡರಿಂದ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದೆ. ಮತದಾರರ ಮನವೊಲಿಕೆಗೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.
ಅದರ ಜತೆಗೆ ಬೇರೆ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮತದಾರರನ್ನು ಮತ ಚಲಾವಣೆಗೆ ಕರೆತರಲು ಈಗಲೇ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಮತದಾರರನ್ನು ಈಗಾಗಲೇ ಸಂಪರ್ಕಸಿ ಮತದಾನ ಮಾಡಲು ತಾವೇ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹೀಗಾಗಿಯೇ ಬಸ್ ಹಾಗೂ ಮಿನಿ ಬಸ್ ಸೇರಿ ಇನ್ನಿತರ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದು, 6 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ಮುಂಗಡ ಬುಕಿಂಗ್ ಮಾಡಲಾಗಿದೆ.
ಬಿಜೆಪಿ ವರ್ಸಸ್ ಕಾಂಗ್ರೆಸ್ ಬಜರಂಗಿ ಸಂಘರ್ಷ: ನಿಷೇಧ ಪ್ರಸ್ತಾವಕ್ಕೆ ಪ್ರಧಾನಿ ತಿರುಗೇಟು
ಹಿಂದಿನ ದಿನ ಪ್ರಯಾಣ: ಮತದಾನದ ದಿನವಾದ ಮೇ 10ರಂದು ಮತದಾರರು ಮತಗಟ್ಟೆಯಲ್ಲಿರುವಂತೆ ಮಾಡಲು ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ. ಮೇ 9ರಂದು ಮತದಾರರನ್ನು ಬಸ್ ಹಾಗೂ ಮಿನಿ ಬಸ್‌ಗಳ ಮೂಲಕ ಕರೆದುಕೊಂಡು ಹೋಗಲಾಗುತ್ತದೆ. ಒಂದು ಕ್ಷೇತ್ರದ ಮತದಾರರನ್ನು ಒಂದೆಡೆ ಸೇರಿಸಿ ಅಲ್ಲಿಂದ ಬಸ್‌ಗಳ ಮೂಲಕ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶೇ.100 ಹೆಚ್ಚುವರಿ ಬಸ್ ಪ್ರಯಾಣ: ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರತಿದಿನ 2 ಸಾವಿರದಿಂದ 2,500 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಅದರಲ್ಲೂ ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗಗಳಿಗೆ ಹೆಚ್ಚಿನ ಬಸ್‌ಗಳು ತೆರಳುತ್ತವೆ. ಆದರೆ, ಮೇ 9ರಂದು 5 ಸಾವಿರಕ್ಕೂ ಹೆಚ್ಚಿನ ಬಸ್‌ಗಳು ಬೆಂಗಳೂರಿನಿಂದ ತೆರಳಲಿವೆ. ಅದಕ್ಕಾಗಿ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಬಸ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಒಪ್ಪಂದದ ಮೇರೆಗೆ ಸೇವೆಗೆ ನೀಡುವುದರಿಂದ ಸಾರಿಗೆ ಇಲಾಖೆಯಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗುವುದಿಲ್ಲ. ಹೀಗಾಗಿ ಪ್ರತಿನಿತ್ಯ ಪ್ರಯಾಣಿಕ ಸೇವೆ ನೀಡುವ ಬಸ್‌ಗಳು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಒಪ್ಪಂದದ ಮೇರೆಗೆ ಸೇವೆ ನೀಡಲು ನಿರ್ಧರಿಸಿವೆ.
ಸಣ್ಣ ವಾಹನಗಳಿಗೂ ಬೇಡಿಕೆ ಹೆಚ್ಚು: ಬಸ್‌ಗಳ ಜತೆಗೆ, ಮಿನಿ ಬಸ್, ಟೆಂಪೋ ಟ್ರಾವೆಲರ್, ಕಾರುಗಳಿಗೂ ಬೇಡಿಕೆ ಹೆಚ್ಚಾಗಿದೆ. ನಗರದಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ ಸೇವೆ ನೀಡುವ ವಾಹನಗಳಿವೆ. ಶಾಲೆಗಳಿಗೆ ರಜೆ ಇರುವ ಕಾರಣ ಆ ವಾಹನಗಳು ಪ್ರವಾಸಿ ಸೇವೆ ನೀಡುತ್ತವೆ. ಆದರೆ, ಈ ಬಾರಿ ಚುನಾವಣೆ ಇರುವ ಕಾರಣ ಶೇ. 40ಕ್ಕೂ ಹೆಚ್ಚಿನ ವಾಹನಗಳನ್ನು ಚುನಾವಣಾ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ವಾಹನಗಳನ್ನು ಮೇ 9 ಮತ್ತು 10ನೇ ತಾರೀಖಿನಂದು ಮತದಾರರನ್ನು ಕರೆದುಕೊಂಡು ಹೋಗುವ ಕೆಲಸಕ್ಕೆ ರಾಜಕೀಯ ಮುಖಂಡರು ಬಳಸಿಕೊಳ್ಳುತ್ತಿದ್ದಾರೆ.
ಚುನಾವಣಾ ಕೆಲಸಕ್ಕೆ ಸರ್ಕಾರಿ ಬಸ್‌ಗಳು: ಖಾಸಗಿ ವಾಹನಗಳನ್ನು ಹೊರತುಪಡಿಸಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 8 ಸಾವಿರಕ್ಕೂ ಹೆಚ್ಚಿನ ಮತಗಟ್ಟೆಗಳಿದ್ದು, ಅವುಗಳಿಗೆ ಮೇ 9ರಂದೇ ಮತಗಟ್ಟೆಸಿಬ್ಬಂದಿಗಳು ತೆರಳಲಿದ್ದಾರೆ. ಅವರು ವಿವಿಪ್ಯಾಟ್, ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಮತಗಟ್ಟೆಗಳಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಅವರನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗಲು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳನ್ನು ಬೆಂಗಳೂರು ಚುನಾವಣಾ ವಿಭಾಗ ತೆಗೆದುಕೊಳ್ಳಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಮೇ 9 ಮತ್ತು 10ರಂದು ಬಳಸಿಕೊಳ್ಳಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್ ಸುರ್ಜೇವಾಲಾ ಕಿಡಿ
ಮಲೆನಾಡು, ಕರಾವಳಿ ಕ್ಷೇತ್ರಗಳಿಂದ ಬೇಡಿಕೆ
- ಅತಿ ಹೆಚ್ಚು ಬಸ್‌ಗಳಿಗೆ ಬೇಡಿಕೆ ಬಂದಿರುವುದು ಮಲೆನಾಡು, ಕರಾವಳಿ ಜಿಲ್ಲೆಗಳಿಂದ
- ಬೆಂಗಳೂರಿನಲ್ಲಿ ಆ ಭಾಗದ ಜನರಿರುವುದು ಹೆಚ್ಚು, ಅವರ ಕರೆದೊಯ್ಯಲು ಕಸರತ್ತು
- ಈಗಾಗಲೇ ತಮ್ಮ ಕ್ಷೇತ್ರದ ಬೆಂಗಳೂರು ವಾಸಿಗಳ ಸಭೆ ನಡೆಸಿರುವ ಅಭ್ಯರ್ಥಿಗಳು
- ಮತದಾನದ ಹಿಂದಿನ ರಾತ್ರಿ ಕರೆದೊಯ್ದು, ಮತದಾನದ ದಿನ ಮರಳಿ ಕಳಿಸಲು ಸಿದ್ಧತೆ
- ಮತದಾರರಿಗೆ ಉಚಿತವಾಗಿ ಊರಿಗೆ ಹೋಗಿ ಮತದಾನ ಮಾಡಿ ಬರುವ ಸೌಕರ್ಯ
ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಮತದಾನದ ಹಿಂದಿನ ದಿನ ಮತದಾರರು ಬೇರೆ ಜಿಲ್ಲೆಗಳಿಗೆ ತೆರಳಲು ವಾಹನಗಳಿಗಾಗಿ ಬುಕ್ಕಿಂಗ್ ಮಾಡಲಾಗುತ್ತಿದೆ.
-ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ