ಪ್ರವಾಸಿ ರೀತಿಯ ಹೊರಗಿನ ಅಭ್ಯರ್ಥಿಗಳಿಗೆ ಕೊಡಗಿನ ಜನ ಬೆಂಬಲಿಸಲ್ಲ: ಮಂತರ್ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯ
ಮಡಿಕೇರಿ ಕ್ಷೇತ್ರಕ್ಕೆ ಹೊರಗಿನವರು ಸ್ಪರ್ಧಿಸಿದರೆ ಯಾವುದೇ ಕಾರಣಕ್ಕೂ ಕ್ಷೇತ್ರದ ಜನರು ಬೆಂಬಲಿಸುವುದಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಅವರ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಏ.12): ಮಡಿಕೇರಿ ಕ್ಷೇತ್ರಕ್ಕೆ ಹೊರಗಿನವರು ಸ್ಪರ್ಧಿಸಿದರೆ ಯಾವುದೇ ಕಾರಣಕ್ಕೂ ಕ್ಷೇತ್ರದ ಜನರು ಬೆಂಬಲಿಸುವುದಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ. ತಮಗೆ ಟಿಕೆಟ್ ಸಿಗುತ್ತಿದ್ದಂತೆ ಫುಲ್ ಆ್ಯಕ್ಟೀವ್ ಆಗಿ ಹಳ್ಳಿ ಹಳ್ಳಿಗಳಿಗೂ ತೆರಳಿ ಪ್ರಚಾರ ನಡೆಸುತ್ತಿರುವ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಪ್ಪಚ್ಚು ರಂಜನ್ ಅವರು ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ಮತ್ತೆ ಟಿಕೆಟ್ ದೊರೆತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ನನಗೆ ಈ ಬಾರಿಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯೇ ಇಲ್ಲ. ಹೀಗಾಗಿ ನಾನು 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.
ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರಾಗಿದ್ದು, ಅವರು ಪ್ರವಾಸಿಗರ ರೀತಿ ಬಂದು ಹೋಗುತ್ತಾರೆ. ಅವರಿಗೆ ಜಿಲ್ಲೆಯ ಜನರ ಕಷ್ಟಗೊತ್ತಿಲ್ಲ. ಲಕ್ಷಗಟ್ಟಲೆ ಹಣಕೊಟ್ಟು ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿ ಇದ್ದಾರೆ. ಅವರು ನಮಗೆ ಪ್ರಬಲ ಅಭ್ಯರ್ಥಿಯೇ ಅಲ್ಲ. ಅವರು ನಮ್ಮ ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿಯೇ ಹೊರಗಿನವರಿಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ ಎಂದು ಕಾಂಗ್ರೆಸ್ ನವರೇ ನಿರ್ಧಾರ ಮಾಡುತ್ತಾರೆ. ಜೊತೆಗೆ ಜೆಡಿಎಸ್ ನವರು ಕೂಡ ಇದೇ ರೀತಿಯ ಚಿಂತನೆ ಮಾಡಲಿದ್ದಾರೆ ಎಂದಿದ್ದಾರೆ. ಆದರೆ ಐದು ವರ್ಷಗಳಿಂದ ಜನರಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇಂಜಿನಿಯರ್, ಡಿಪ್ಲೋ ಕಾಲೇಜು, ಯುನಿರ್ಸಿಟಿ ಕೇಂದ್ರ, ಮೆಡಿಕಲ್ ಕಾಲೇಜನ್ನು ತಂದಿದ್ದೇನೆ.
ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್
ಇದರೊಂದಿಗೆ ನನ್ನ ಕ್ಷೇತ್ರದಲ್ಲಿ ಎಲ್ಲಾ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಮಾಡಿದ್ದೇನೆ ಎಂದಿದ್ದಾರೆ. ಚುನಾವಣೆಗಾಗಿ ನಾವು ಈಗ ಸಿದ್ದತೆ ಮಾಡಿಕೊಳ್ಳುತ್ತಿಲ್ಲ. ಪ್ರಧಾನಿ ಮೋದಿಜಿ ಅವರ ಆಶಯ ಸೇವಾಕಿ ಸಂಘಟನೆ ಎನ್ನುವ ರೀತಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಜನರು ನಮ್ಮನ್ನು ಮತ್ತೆ ಬೆಂಬಲಿಸಲಿದ್ದು, ನಮ್ಮ ಮೇಲೆ ನಂಬಿಕೆ ಇಟ್ಟು ಹೈಕಮಾಂಡ್ ಟಿಕೆಟ್ ನೀಡಿರುವ ಭರವಸೆಯನ್ನು ನಾವು ಹುಸಿ ಮಾಡುವುದಿಲ್ಲ. ಎರಡು ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ಮತ್ತೊಮ್ಮೆ ಬಿಜೆಪಿ ಭದ್ರ ಕೋಟೆಯನ್ನು ಉಳಿಸಿಕೊಳ್ಳಲಿದ್ದೇವೆ ಎಂದಿದ್ದಾರೆ. ಇನ್ನು ಟಿಕೆಟ್ ಸಿಕ್ಕಿರುವ ವಿಷಯಕ್ಕೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಕೆ. ಜಿ ಬೋಪಯ್ಯ ಸಕ್ರೀಯವಾಗಿ ಪಕ್ಷದಲ್ಲಿ ತೊಡಗಿಸಿಕೊಳ್ಳುವವರಿಗೆ ಎಲ್ಲರಿಗೂ ಟಿಕೆಟ್ ಕೇಳಲು ಅರ್ಹತೆ ಇರುತ್ತದೆ.
ಆದರೆ ಪಕ್ಷವು ಯಾರಿಗೆ ಟಿಕೆಟ್ ಕೊಡಬೇಕು ಎಂದು ಸಾಕಷ್ಟು ಸರ್ವೆ ವರದಿಗಳನ್ನು ಆಧರಿಸಿ ನಮಗೆ ಟಿಕೆಟ್ ನೀಡಿದೂ. ಹೀಗಾಗಿ ಟಿಕೆಟ್ ನೀಡಿರುವ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಚುನಾವಣೆಗಾಗಿ ಪ್ರತ್ಯೇಕ ಸಿದ್ಧತೆ ಮಾಡುವುದಿಲ್ಲ. ಬದಲಾಗಿ ನಿರಂತರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಹೀಗಾಗಿ ನಮಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ನಮ್ಮ ಮೇಲೆ ಇಟ್ಟಿರುವ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುತ್ತೇವೆ. ಅದಕ್ಕಾಗಿ ನಮ್ಮ ಕಾರ್ಯಕರ್ತರ ಕಾರ್ಯಪಡೆಯೇ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರವಿದೆ.
ನಮ್ಮ ಪಕ್ಷದ ಧ್ವಜವನ್ನು ಪ್ರತಿ ಮನೆ ಮನೆಯಲ್ಲೂ ಹಾರಿಸಿದ್ದೇವೆ ಎಂದು ಕೆ.ಜಿ. ಬೋಪಯ್ಯ ಅವರು ಹೇಳಿದ್ದಾರೆ. ಇನ್ನು ಕೊಡವ ಮತದಾರರು ವಿರಾಜಪೇಟೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಜಾತಿ ಆಧಾರದಲ್ಲಿ ಚುನಾವಣೆ ನಡೆಯುವುದಿಲ್ಲ. ಬದಲಾಗಿ ರಾಷ್ಟ್ರೀಯತೆ ಮತ್ತು ಪಕ್ಷ, ಸಿದ್ದಾಂತರ ಆಧಾರದಲ್ಲಿ ಚುನಾವಣೆ ನಡೆಯುತ್ತದೆ. ಜೊತೆಗೆ ಹಿಂದೂತ್ವ, ಆಚಾರ ವಿಚಾರ ಸಂಸ್ಕೃತಿಯ ಆಧಾರದಲ್ಲಿ ಚುನಾವಣೆ ನಡೆಯುತ್ತದೆ. ಹಾಗೆ ನೋಡಿದರೆ ಮಡಿಕೇರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಸಮುದಾಯದ ಮತಗಳಿದ್ದರೆ, ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವ ಸಮುದಾಯದ ಮತಗಳಿವೆ.
ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್ ಜಾರಕಿಹೊಳಿ ಟಾಂಗ್
ಆದರೂ ನಾನು ವಿರಾಜಪೇಟೆ ಕ್ಷೇತ್ರದಲ್ಲಿ ಹಿಂದಿನಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಹಾಗೆಯೇ ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಅವರು ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.