ಯಡಿಯೂರಪ್ಪ ಕಾಲಿಟ್ಟ ಕಡೆ ಮಳೆ: ಸಚಿವ ಸೋಮಣ್ಣ ಬಣ್ಣನೆ
ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆ ಶುರುವಾಗಿದೆ. ಯಡಿಯೂರಪ್ಪ ಎಲ್ಲಿಗೆ ಕಾಲಿಡುತ್ತಾರೋ ಅಲ್ಲಿ ಮಳೆ ಬರುತ್ತೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬಣ್ಣಿಸಿದರು.
ಚಾಮರಾಜನಗರ (ಮೇ.03): ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆ ಶುರುವಾಗಿದೆ. ಯಡಿಯೂರಪ್ಪ ಎಲ್ಲಿಗೆ ಕಾಲಿಡುತ್ತಾರೋ ಅಲ್ಲಿ ಮಳೆ ಬರುತ್ತೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬಣ್ಣಿಸಿದರು. ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸೋಮವಾರ ಇದೇ ಜಾಗದಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಆಗ ಮಳೆಯೋ ಮಳೆ. ಆದರೆ ಇಂದು ವರುಣನ ಆಗಮನದ ನಿರೀಕ್ಷೆ ಇದ್ದರೂ ಸಹ ನಮ್ಮ ಸಮಾವೇಶಕ್ಕೆ ಅಡ್ಡಿಪಡಿಸಿಲ್ಲ. ಹೀಗಾಗಿ ಪ್ರಕೃತಿಯೂ ಸಹ ನಮ್ಮ ಪರವಾಗಿದೆ ಎಂಬುದಕ್ಕೆ ಈ ದಿನ ಉತ್ತಮ ನಿದರ್ಶನ.
ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಿದ ಯಡಿಯೂರಪ್ಪ ಕಾಲಿಡುತ್ತಾರೆಂದರೆ ಅಲ್ಲಿಗೆ ವರುಣನ ಆಗಮನವಾಗುತ್ತದೆ ಎಂದು ಯಡಿಯೂರಪ್ಪ ಅವರ ಗುಣಗಾನ ಮಾಡಿದರು. ನಮ್ಮ ಪಕ್ಷದ ನಾಯಕರು ನನಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರದ ಮಾದರಿಯಲ್ಲೇ ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ಗ್ರಾಮೀಣ ಭಾಗವೂ ಅಭಿವೃದ್ಧಿ ಹೊಂದಬೇಕಾದರೆ ಇಲ್ಲಿನ ಮತದಾರರು ನನಗೊಂದು ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಹದಿನೈದು ವರ್ಷಗಳ ಕಾಲ ಅವಕಾಶ ನೀಡಿದ್ದೀರಿ, ನನಗೆ ಐದು ವರ್ಷ ಅವಕಾಶ ಕೊಡಿ, ಅಭಿವೃದ್ಧಿ ಪರ್ವ ಎಂದರೆ ಏನೆಂದು ತೋರಿಸುತ್ತೇನೆ ಎಂದು ಮನವಿ ಮಾಡಿದರು.
ಭ್ರಷ್ಟಾಚಾರ ರಹಿತ ಸರ್ಕಾರ ಕಾಂಗ್ರೆಸ್‌ನ ಗುರಿ: ಡಿ.ಕೆ.ಶಿವಕುಮಾರ್
ಚಾ.ನಗರ, ವರುಣದಲ್ಲಿ ಸೋಮಣ್ಣ ಗೆಲ್ಸಿ ದಾಖಲೆ ನಿರ್ಮಿಸಿ: ಚಾ.ನಗರ, ವರುಣದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ವಸತಿ ಸಚಿವ ಸೋಮಣ್ಣ ಅವರನ್ನು 25ರಿಂದ 30 ಸಾವಿರ ಅಂತರದಿಂದ ಗೆಲ್ಲಿಸುವ ಮೂಲಕ ದಾಖಲೆ ನಿರ್ಮಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದರು. ಚಾಮರಾಜನಗರದಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಮಂಗಳವಾರ ಉದ್ಘಾಟಿಸಿದ ಅವರು ವಿ.ಸೋಮಣ್ಣ ನಮ್ಮ ಹಿರಿಯ ನಾಯಕರು, ನಮ್ಮೆಲ್ಲರ ಒತ್ತಾಯದ ಮೇರೆಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿದರೆ ಗೋವಿಂದರಾಜನಗರ ಮಾದರಿಯಲ್ಲಿ ಚಾಮರಾಜನಗರವನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಹಾಡಿ ಹೊಗಳಿದರು.
ಕಾಂಗ್ರೆಸ್‌ನದ್ದು ಬೋಗಸ್ ಪ್ರಣಾಳಿಕೆ: ಸಿಎಂ ಬೊಮ್ಮಾಯಿ ಲೇವಡಿ
ಜೈಕಾರ ಹಾಕಿಸಿದ ಬಿಎಸ್ವೈ: ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ವಿ. ಸೋಮಣ್ಣಗೆ ಕಾರ್ಯಕರ್ತರಿಂದ ಬಿ.ಎಸ್. ಯಡಿಯೂರಪ್ಪ ಜೈಕಾರ ಹಾಕಿಸಿದರು. ಸೋಮಣ್ಣ ಅವರನ್ನು 25ರಿಂದ 30 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲ ವೇದಿಕೆಯಲ್ಲಿ ಪರಸ್ಪರ ಕೈಹಿಡಿದು ಮೇಲೆತ್ತಿ ನಾವು ಒಂದಾಗಿದ್ದೇವೆ ಎಂದು ಸಾರಿದರು. ಸೋಮಣ್ಣ ಎರಡು ಕಡೆ ಗೆಲ್ಲುವುದರಲ್ಲಿ ಸಂಶಯವಿಲ್ಲ, ವರುಣದಲ್ಲು ಇದೇ ಪ್ರೀತಿ ವಿಶ್ವಾಸ ಜನ ತೋರಿಸುತ್ತಿದ್ದಾರೆ. ಅಲ್ಲಿಯು ಗೆದ್ದು ದಾಖಲೆ ನಿರ್ಮಿಸಲಿದ್ದಾರೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.