ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರೂ ನಾಮಪತ್ರ ಸಲ್ಲಿಸಿರುವುದು ನನಗೆ ಅಚ್ಚರಿ ತಂದಿದೆ. ನಾನು ಫೈಟರ್‌. ಇಬ್ಬರಲ್ಲಿ ಯಾರು ನಿಂತರೂ ಫೈಟ್‌ ಮಾಡುವೆ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ಹೇಳಿದ್ದಾರೆ. 

ಬೆಂಗಳೂರು (ಏ.21): ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರೂ ನಾಮಪತ್ರ ಸಲ್ಲಿಸಿರುವುದು ನನಗೆ ಅಚ್ಚರಿ ತಂದಿದೆ. ನಾನು ಫೈಟರ್‌. ಇಬ್ಬರಲ್ಲಿ ಯಾರು ನಿಂತರೂ ಫೈಟ್‌ ಮಾಡುವೆ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಸಹೋದರರ ನಾಮಪತ್ರ ಸಲ್ಲಿಕೆ ಕಾಂಗ್ರೆಸ್‌ ಪಕ್ಷದ ಸ್ಟ್ರಾಟೆಜಿ ಇರಬಹುದು. ಇದು ಅಂಗಡಿಯಲ್ಲಿ ಒಂದು ಖರೀದಿಸಿದರೆ ಮತ್ತೊಂದು ಉಚಿತ ಎನ್ನುವ ರೀತಿಯ ಸ್ಟ್ರಾಟೆಜಿ. ಇದು ಕಾಂಗ್ರೆಸ್ಸಿಗರಿಗೆ ಅರ್ಥವಾಗಬೇಕು. ಸಹೋದರರು ಸೋಲುವ ಭೀತಿಯಲ್ಲಿ ದೊಂಬರಾಟವಾಡುತ್ತಿದ್ದಾರೆ.

ಕನಕಪುರದ ಜನತೆ ಈ ನಾಟಕ ನೋಡುತ್ತಿದ್ದಾರೆ. ಚುನಾವಣೆಯಲ್ಲಿ ಎದುರಿಸಲು ಅಣ್ಣ ಆದರೇನು ಅಥವಾ ತಮ್ಮ ಆದರೇನು? ಇಬ್ಬರನ್ನೂ ಎದುರಿಸಲು ಸಿದ್ಧನಾಗಿದ್ದೇನೆ ಎಂದರು. ‘ನನ್ನ ಸ್ಪರ್ಧೆಯಿಂದ ಕನಕಪುರ ಕ್ಷೇತ್ರ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿದೆ. ಡಿಕೆ ಸಹೋದರರಲ್ಲಿ ಚಡಪಡಿಕೆ ಶುರುವಾಗಿದೆ. ಹೀಗಾಗಿ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ. ಕನಕಪುರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಕರೆದಿಲ್ಲ. ನೀವು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಡಿಕೆ ಸಹೋದರರು ಕಾರ್ಯಕರ್ತರ ಸಭೆ ಕರೆದಿದ್ದಾರೆ. ನಿಮ್ಮಿಂದ ನಮಗೆ ಬೆಲೆ ಬಂದು ಸಾರ್‌ ಎಂದು ಕನಕಪುರದ ಕಾಂಗ್ರೆಸ್‌ ಕಾರ್ಯಕರ್ತರೇ ನನಗೆ ಹೇಳಿದ್ದಾರೆ. ಸಹೋದರರಲ್ಲಿ ಭಯ, ಭೀತಿ, ಅತಂತ್ರ ಕಾಡುತ್ತಿದೆ’ ಎಂದರು.

ಉಪ ತಹಸೀಲ್ದಾರ್‌ ಆಗಿದ್ದ ಗವಿಸಿದ್ದಪ್ಪ ಈಗ ಚುನಾವಣಾ ಕಣಕ್ಕೆ: ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಅಶೋಕ್‌ ವಿರುದ್ಧ ಡಿಕೆಸು ಕಣಕ್ಕೆ?: ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಸಚಿವ ಆರ್‌. ಅಶೋಕ್‌ ಸ್ಪರ್ಧಿಸಿರುವ ಪದ್ಮನಾಭನಗರಕ್ಕೆ ಈಗಾಗಲೇ ಅಧಿಕೃತ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್‌, ಇದೀಗ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸುವ ಹೊಸ ಚೆಕ್‌ ಇಟ್ಟಿರುವುದು ತೀವ್ರ ಕುತೂಹಲ ಕೆರಳಿಸಿದೆ. ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ. ಇದರಿಂದಾಗಿ ಬುಧವಾರ ಬಿ ಫಾರಂ ಸಹಿತವಾಗಿ ಬುಧವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ರಘುನಾಥ ನಾಯ್ಡು ಹೈಕಮಾಂಡ್‌ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಿದರೆ ತಾವು ಹಿಂದೆ ಸರಿಯುವುದಾಗಿಯೂ ಹೇಳಿದ್ದಾರೆ. 

ಇದರಿಂದ ಬಿಜೆಪಿ ಅಭ್ಯರ್ಥಿ ಕಂದಾಯ ಸಚಿವ ಆರ್‌.ಅಶೋಕ್‌ ಪ್ರತಿನಿಧಿಸುವ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಇಬ್ಬರಲ್ಲಿ ಯಾರನ್ನು ಅಂತಿಮವಾಗಿ ಕಣಕ್ಕಿಳಿಸಲಿದೆ ಎಂಬ ಕುತೂಹಲ ಹುಟ್ಟುಹಾಕಲಾಗಿದೆ. ಈ ಸಂಬಂಧ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿಜೆಪಿ, ಜೆಡಿಎಸ್‌ನವರು ಚೆಸ್‌ ಆಡುತ್ತಿದ್ದಾರೆ ನಾವು ಆಡೋದು ಬೇಡವಾ? ಹಾಗಾಗಿಯೇ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಘುನಾಥ ನಾಯ್ಡು ಅವರ ಜತೆಗೆ ಸಂಸದ ಡಿ.ಕೆ.ಸುರೇಶ್‌ ಅವರೂ ನಾಮಪತ್ರ ಸಲ್ಲಿಸಲಿದ್ದಾರೆ. 

ಕಾಂಗ್ರೆಸ್‌ದು ಗ್ಯಾರಂಟಿ ಕಾರ್ಡಲ್ಲ, ವಿಸಿಟಿಂಗ್‌ ಕಾರ್ಡ್‌: ಸಿಎಂ ಬೊಮ್ಮಾಯಿ ವ್ಯಂಗ್ಯ

ಹೈಕಮಾಂಡ್‌ ನಿರ್ಧಾರದ ಬಳಿಕ ಅಂತಿಮವಾಗಿ ಯಾರು ಕಣದಲ್ಲಿ ಉಳಿಯಬೇಕು ಎಂಬುದು ತೀರ್ಮಾನವಾಗುತ್ತದೆ. ನಾವೂ ಚೆಸ್‌ ಆಡುತ್ತಿದ್ದೇವೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.