ಬ್ರಿಟಿಷರಂತೆ ಕಾಂಗ್ರೆಸ್‌ನಿಂದ ಒಡೆದು ಆಳುವ ನೀತಿ: ಸಚಿವ ಸುಧಾಕರ್
ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಮುಂದುವರಿಸುತ್ತಿದ್ದು, ಬಿಜೆಪಿ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ (ಏ.30): ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಮುಂದುವರಿಸುತ್ತಿದ್ದು, ಬಿಜೆಪಿ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು. ದಲಿತ ಸಮುದಾಯಗಳ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರೆಲ್ಲ ಒಂದೇ ಆಗಬೇಕು ಎಂಬುದು ನಮ್ಮ ಇಚ್ಛೆಯಾಗಿದೆ, ಎಡ, ಬಲ, ಸ್ಪೃಶ್ಯ, ಅಸ್ಪೃಶ್ಯ ಹೀಗೆ ಎಲ್ಲ ಸಮುದಾಯಗಳಿಗೆ ಬಿಜೆಪಿ ನ್ಯಾಯ ಕೊಟ್ಟಿದೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯವಾಗಿದ್ದು, ದಲಿತ ಸಮುದಾಯದ ಪರವಾಗಿ ಸರ್ಕಾರ ಮತ್ತು ನಾವು ಇರುವುದಾಗಿ ಸಚಿವರು ಭರವಸೆ ನೀಡಿದರು. ದಲಿತರಲ್ಲಿ ವಿಭಜನೆಯಾಗುವುದು ಬೇಡ, ರಾಜಕೀಯವಾಗಿ ಒಡೆಯಲು ಕೆಲವರು ಪ್ರಯತ್ನ ಮಾಡುತ್ತಾರೆ, ಇದು ಬ್ರಿಟಿಷ್ ಸಂಸ್ಕೃತಿ, ಇದನ್ನು ಕಾಂಗ್ರೆಸ್ ಮೊದಲಿಂದಲೂ ಮಾಡಿಕೊಂಡು ಬಂದಿದೆ ಎಂದರು. ಒಟ್ಟು ಮಾಡುವ ಕೆಲಸ ಬಿಜೆಪಿ ಮಾಡುತ್ತಿದ್ದರೆ, ದಲಿತರ ಮಧ್ಯೆ ಗೋಡೆ ಕಟ್ಟುವ ಕೆಲಸ ಕಾಂಗ್ರೆಸ್ ಮಾಡಿದೆ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ, ಒಳ ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ, ಹಾಗಾಗಿ ಬಿಜೆಪಿ ಪರ ಈ ಸಮುದಾಯ ಗುರ್ತಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಅವರು ಕೋರಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ನನ್ನ ಪರ ಇದ್ದಾರೆ: ಸಚಿವ ಸುಧಾಕರ್
ಈ ಸಂದರ್ಭದಲ್ಲಿ ಛಲವಾದಿ ನಾರಾಯಣಸ್ವಾಮಿ, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ಸಿ.ಎಸ್.ಎನ್.ರಮೇಶ್.ರಾಮಾಚಾರಿ, ಮುರಳಿ, ರಾಮಕೃಷ್ಟ.ಜಿ.ಪಂ.ಮಾಜಿ ಅದ್ಯಕ್ಷ ಪುರದಗಡ್ಡೆ ಮುನೇಗೌಡ, ಟಿಎಪಿಸಿಎಂಎಸ್ ಮಾಜಿ ಅದ್ಯಕ್ಷ ಮರಳು ಕುಂಟೆ ಕೃಷ್ಣಮೂರ್ತಿ,ಮಂಚನಬಲೆ ಶ್ರೀಧರ್, ಸೇರಿದಂತೆ ಮತ್ತಿತರ ಬಿಜೆಪಿ ಮುಖಂಡರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಮಂಚೇನಹಳ್ಳಿ ಪಪಂ ಮಾಡುವುದಾಗಿ ಭರವಸೆ: ಪ್ರಸ್ತುತ ಚುನಾವಣೆಗಳು ಮುಗಿದ ಕೂಡಲೇ ಮಂಚೇನಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು. ಮಂಚೇನಹಳ್ಳಿ ಪಟ್ಟಣದಲ್ಲಿ ಪ್ರಚಾರ ನಡೆಸಿದ ಅವರು, ಕೇವಲ ಪಟ್ಟಣ ಪಂಚಾಯಿತಿ ಮಾಡುವುದು ಮಾತ್ರವಲ್ಲದೆ, ಹತ್ತಾರು ಕೋಟಿ ಅನುದಾನ ತಂದು ಮಂಚೇನಹಳ್ಳಿ ಪಟ್ಟಣವನ್ನು ಮಾದರಿ ತಾಲೂಕಾಗಿ ಮಾಡಲಾಗುವುದು. ಮುಂದಿನ ಎರಡು ವರ್ಷದಲ್ಲಿ ಮಿನಿ ವಿಧಾನಸೌಧ ಉದ್ಘಾಟನೆ ಮಾಡಿ, ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತರಲಾಗುವುದು ಎಂದರು.
ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್
ಎಲ್ಲ ಕಚೇರಿಗಳು ಒಂದೇ ಸೂರಿನಡಿ: ಒಂದೇ ಸೂರಿನಡಿ ಎಲ್ಲ ಇಲಾಖೆಗಳೂ ಕಾರ್ಯನಿರ್ವಹಿಸುವುದರಿಂದ ರೈತರಿಗೆ ಅನುಕೂಲವಾಗಿ, ಅಲೆದಾಟ ತಪ್ಪಲಿದೆ. ಮಂಚೇನಹಳ್ಳಿ ತಾಲೂಕು ಆದ ಎರಡೇ ವರ್ಷದಲ್ಲಿ ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಗುವಿನ ಆಸ್ಪತ್ರೆ ತರಲಾಗಿದೆ. ಜಾತಿ, ಧರ್ಮವನ್ನು ವಿಭಜನೆ ಮಾಡಿ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ದೇಶ ಒಡೆಯುವ ಕೆಲಸವನ್ನು ಕಳೆದ 60 ವರ್ಷದಿಂದ ನಿರಂತರವಾಗಿ ಕಾಂಗ್ರೆಸ್ ಮಾಡಿಕೊಂಡು ಬಂದಿದೆ ಎಂದು ಕಿಡಿ ಕಾರಿದರು. ಆದರೆ ಇಂತಹ ಒಡೆದು ಆಳುವ ನೀತಿಗೆ ಪ್ರಧಾನಿ ನರೇಂದ್ರ ಮೋದಿಯವರು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ನವರು ಮೋದಿ ಅವರನ್ನು ಕಳ್ಳ ಎಂದು ಕರೆದಿದ್ದಾರೆ. ಕಾಂಗ್ರೆಸ್ ನವರಿಗೆ ಸೋಲು ಗ್ಯಾರೆಂಟಿಯಾದರೆ ಮೋದಿ ಅವರನ್ನು ನಿಂದಿಸಲು ಆರಂಭಿಸುತ್ತಾರೆ, ಖರ್ಗೆಯವರು ಮಾಡಿದ ಆರೋಪದ ಹಿಂದೆಯೂ ಕಾಂಗ್ರೆಸ್ ಸೋಲಲಿದೆ ಮತ್ತು ಬಿಜೆಪಿ ಗೆಲ್ಲಲಿದೆ ಎಂಬ ಸಂದೇಶ ಇದೆ ಎಂದು ಅವರು ಛೇಡಿಸಿದರು.