ಗ್ಯಾರಂಟಿ ಈಡೇರಿಸದಿದ್ದರೆ ಓಟು ಕೇಳಲು ಬರಲ್ಲ: ಡಿ.ಕೆ.ಶಿವಕುಮಾರ್‌ ಶಪಥ

'ರಾಜ್ಯದ ಜನರಿಗೆ ಕಾಂಗ್ರೆಸ್‌ ಪಕ್ಷ ನೀಡಿದ ಗ್ಯಾರಂಟಿ ಚೆಕ್‌ಗೆ ನಾನು ಮತ್ತು ಸಿದ್ದರಾಮಯ್ಯ ಸಹಿ ಹಾಕಿ ಆಗಿದೆ. ನಾವು ಈ ವಿಚಾರದಲ್ಲಿ ನುಡಿದಂತೆ ನಡೆಯದಿದ್ದರೆ ಇನ್ನು ಮುಂದಕ್ಕೆ ಓಟು ಕೇಳಲು ಬರಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶಪಥ ಮಾಡಿದ್ದಾರೆ. 

Karnataka Election 2023 KPCC President DK Shivakumar Slams On BJP gvd

ಮಂಗಳೂರು (ಏ.28): 'ರಾಜ್ಯದ ಜನರಿಗೆ ಕಾಂಗ್ರೆಸ್‌ ಪಕ್ಷ ನೀಡಿದ ಗ್ಯಾರಂಟಿ ಚೆಕ್‌ಗೆ ನಾನು ಮತ್ತು ಸಿದ್ದರಾಮಯ್ಯ ಸಹಿ ಹಾಕಿ ಆಗಿದೆ. ನಾವು ಈ ವಿಚಾರದಲ್ಲಿ ನುಡಿದಂತೆ ನಡೆಯದಿದ್ದರೆ ಇನ್ನು ಮುಂದಕ್ಕೆ ಓಟು ಕೇಳಲು ಬರಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶಪಥ ಮಾಡಿದ್ದಾರೆ. ಮಂಗಳೂರಿನ ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇತ್ತು. ಜನರ ಬದುಕಿನಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ಹಾಗಾಗಿ 40 ಪರ್ಸೆಂಟ್‌ ಸರ್ಕಾರವನ್ನು ಕಿತ್ತೊಗೆಯೋ ಸಂಕಲ್ಪ ಮಾಡಿ. ಮೇ 10 ರಾಜ್ಯದ ಜನರ ಜೀವನ ಬದಲಿಸೋ ದಿನ, ಭ್ರಷ್ಟಾಚಾರವನ್ನು ಬಡಿದೋಡಿಸೋ ದಿನ. ಎಲ್ಲರಿಗೆ ಬೆಳಕಿ ಕೊಡುವ ದಿನ ಎಂದು ಹೇಳಿದರು.

ಬಿಜೆಪಿ ಡ್ಯಾಂ ಒಡೆದಿದೆ: ರಾಜ್ಯಾದ್ಯಂತ, ಅದರಲ್ಲೂ ಕರಾವಳಿಯ ಬೈಂದೂರಿನಲ್ಲಿ 3 ಸಾವಿರ ಮಂದಿ ಕಾಂಗ್ರೆಸ್‌ ಸೇರಿದ್ದಾರೆ. ಉಡುಪಿ, ಬೆಳ್ತಂಗಡಿಯಲ್ಲೂ ನೂರಾರು ಜನ ಕಾಂಗ್ರೆಸ್‌ಗೆ ಬಂದರು. ಹಿಂಡುಹಿಂಡಾಗಿ ಬರತೊಡಗಿದ್ದಾರೆ. ಸಿಎಂ ಆಗಿದ್ದ ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ದೊಡ್ಡ ನಾಯಕರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂದರೆ ಅವರೇನು ದಡ್ಡರಾ? ಬಿಜೆಪಿಯ ಅಣೆಕಟ್ಟು ಒಡೆದು ಹೋಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಬಿಜೆಪಿಗೆ ಬೆಂಬಲ ನೀಡಿದೋರಿಗೆ ಯಾರಿಗೂ ಬೆಂಬಲವಾಗಿ ನಿಲ್ಲಲು ಈ ಸರ್ಕಾರದಿಂದ ಆಗಿಲ್ಲ. ಮೀನುಗಾರರಿಗೆ ಸೀಮೆಎಣ್ಣೆ ಕೊಟ್ಟಿಲ್ಲ. ಅವರ ಆದಾಯ ಡಬಲ್‌ ಆಗಿಲ್ಲ. ಕ ನಿಷ್ಠ ಪಕ್ಷ ಬಿಜೆಪಿ ಸರ್ಕಾರ ಮೀನುಗಾರರ ದುಃಖ ದುಮ್ಮಾನಗಳನ್ನೂ ಕೇಳಿಲ್ಲ ಎಂದ ಅವರು, ಈ ಸರ್ಕಾರ ನುಡಿದಂತೆ ನಡೆದಿಲ್ಲ. ಅವರು ನೀಡಿದ 600 ಭರವಸೆಗಳ ಪೈಕಿ 550 ಭರವಸೆಗಳನ್ನೂ ಈಡೇರಿಸಿಲ್ಲ. ಯಾಕೆ ಈಡೇರಿಸಿಲ್ಲ ಎಂದರೆ ಯಾವುದಕ್ಕೂ ಉತ್ತರ ನೀಡೋ ಸ್ಥಿತಿಯಲ್ಲೂ ಇಲ್ಲ ಎಂದು ಟೀಕಿಸಿದರು.

ವಿಷದ ಹಾವು ಎಂದಿದ್ದು ಮೋದಿಯನ್ನಲ್ಲ, ಬಿಜೆಪಿಯನ್ನು: ಮಲ್ಲಿಕಾರ್ಜುನ ಖರ್ಗೆ

500 ಕೋಟಿ ಹೂಡಿಕೆಯೂ ಆಗಿಲ್ಲ: ಕರಾವಳಿ, ಮಲೆನಾಡು ಭಾಗದಲ್ಲಿ 30 ಸೀಟ್‌ಗಳ ಪೈಕಿ ಮೂರನ್ನು ಬಿಟ್ಟು ಎಲ್ಲದರಲ್ಲೂ ಬಿಜೆಪಿ ಗೆದ್ದಿದೆ. ಆದರೆ ಈ ಭಾಗದಲ್ಲಿ ಕೇವಲ 500 ಕೋಟಿ ರು. ಹೂಡಿಕೆ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಬಿಜೆಪಿಯವರಿಂದಾಗಿ ಈ ಭಾಗದಲ್ಲಿ ಯಾರೂ ಹೂಡಿಕೆ ಮಾಡಲು ಮುಂದೆ ಬಂದಿಲ್ಲ ಎಂದು ಡಿಕೆಶಿ ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಎಐಸಿಸಿ ವಕ್ತಾರ ಚರಣ್‌ ಸಿಂಗ್‌, ಮುಖಂಡರಾದ ರೋಜಿ ಜಾನ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರಾದ ಮೊಹಮ್ಮದ್‌ ಮಸೂದ್‌, ಐವನ್‌ ಡಿಸೋಜ, ಮಂಜುನಾಥ ಭಂಡಾರಿ, ಲುಕ್ಮಾನ್‌ ಬಂಟ್ವಾಳ, ಶಾಲೆಟ್‌ ಪಿಂಟೊ ಮತ್ತಿತರರಿದ್ದರು.

ಈಶ್ವರಪ್ಪರಿಂದ ಬಿಜೆಪಿ ಭೀಷ್ಮರಂತೆ ಮಾರ್ಗದರ್ಶನ: ಅಣ್ಣಾಮಲೈ

ಬಿಜೆಪಿ ನೆಲಕಚ್ಚುವ 19ನೇ ರಾಜ್ಯವಾಗಲಿದೆ: ರಾಜ್ಯಕ್ಕೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಆಗಾಗ ಬರತೊಡಗಿದ್ದಾರೆ. ದೇಶದಲ್ಲಿ ಮೋದಿ ಮತ್ತು ಶಾ ಸುತ್ತಾಡಿದ 18 ರಾಜ್ಯಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಆದರೆ ಆಪರೇಶನ್‌ ಕಮಲದ ಮೂಲಕ ಕೆಲವು ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿದ್ದಾರೆ. ಈಗ ಕರ್ನಾಟಕಕ್ಕೂ ಬಂದಿರುವುದರಿಂದ ಬಿಜೆಪಿ ನೆಲಕಚ್ಚುವ 19ನೇ ರಾಜ್ಯವಾಗಲಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಬಿಜೆಪಿ ಸರ್ಕಾರದ ದುರಾಡಳಿತದಿಂದ 17 ಕೋಟಿ ಕಡುಬಡವರು ದೇಶದಲ್ಲಿದ್ದಾರೆ. ಜಗತ್ತಿನಲ್ಲಿ ಕಡುಬಡವರು ಹೆಚ್ಚಿರುವ ದೇಶವಾಗಿದೆ. ನರೇಂದ್ರ ಮೋದಿ ಶ್ರೀಮಂತರನ್ನಷ್ಟೇ ಶ್ರೀಮಂತರನ್ನಾಗಿ ಮಾಡುತ್ತಿದ್ದರೆ ಬಡವರನ್ನು ಬಡವರನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿಯನ್ನು ಓಡಿಸುವ ರಣಕಹಳೆಯನ್ನು ಜನರು ಊದಬೇಕಾಗಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios