ಈಶ್ವರಪ್ಪರಿಂದ ಬಿಜೆಪಿ ಭೀಷ್ಮರಂತೆ ಮಾರ್ಗದರ್ಶನ: ಅಣ್ಣಾಮಲೈ

40 ವರ್ಷಗಳಿಂದ ಪಕ್ಷವನ್ನು ಅರ್ಜುನನಂತೆ ಕಟ್ಟಿಬೆಳೆಸಿದ್ದ ಈಶ್ವರಪ್ಪನವರು ಈಗ ಭೀಷ್ಮರಂತೆ ಚುನಾವಣೆ ರಾಜಕಾರಣದಿಂದ ಹಿಂದೆ ಸರಿದು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.

Karnataka Election 2023 K Annamalai Talks Over KS Eshwarappa gvd

ಶಿವಮೊಗ್ಗ (ಏ.28): 40 ವರ್ಷಗಳಿಂದ ಪಕ್ಷವನ್ನು ಅರ್ಜುನನಂತೆ ಕಟ್ಟಿಬೆಳೆಸಿದ್ದ ಈಶ್ವರಪ್ಪನವರು ಈಗ ಭೀಷ್ಮರಂತೆ ಚುನಾವಣೆ ರಾಜಕಾರಣದಿಂದ ಹಿಂದೆ ಸರಿದು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿದರು.

ನಗರದ ಎನ್‌ಇಎಸ್‌ ಮೈದಾನದಲ್ಲಿ ಬಿಜೆಪಿ ನಗರ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಮಿಳು ಬಾಂಧವರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಶ್ವರಪ್ಪ ರಾಜ್ಯದಲ್ಲೇ ಪ್ರಭಾವಿ ನಾಯಕರಾಗಿ ಬೆಳೆದರೂ, ಶಿವಮೊಗ್ಗ ನಗರದ ಒಬ್ಬ ನಿಷ್ಠಾವಂತ ಬಿಜೆಪಿ ಕಾರ್ಯರ್ತನಾಗಿರುವ ಚನ್ನಬಸಪ್ಪ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈಗ ನೀವು ಚನ್ನಬಸಪ್ಪನವರಿಗೆ ಕೊಡುವ ಮತ ಈಶ್ವರಪ್ಪನವರಿಗೆ ಮತ್ತು ಯಡಿಯೂರಪ್ಪನವರಿಗೆ ನೀಡುವ ಮತವಾಗಿದೆ ಎಂದರು.

ಶಿವಮೊಗ್ಗ ಏರ್‌​ಪೋ​ರ್ಟ್‌ನಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಗಳಿಗೆ ಶುಭ ಕೋರಿದ ರಾಹುಲ್‌ ಗಾಂಧಿ

ಈಶ್ವರಪ್ಪಗೆ ರಾಷ್ಟ್ರಮಟ್ಟದ ಸ್ಥಾನಮಾನ: ಇಡೀ ದೇಶಕ್ಕೆ ಈಶ್ವರಪ್ಪನವರು ರೋಲ್‌ ಮಾಡೆಲ್‌ ಆಗಿದ್ದಾರೆ. ಮೋದಿಯವರು ವಿಶ್ವಗುರುವಾಗಿ ದೇಶದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಕಾಂಗ್ರೆಸ್‌ನವರು ಎಲ್ಲವನ್ನೂ ಉಚಿತ ಕೊಡುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಅವರು ನೀಡಿದ ಗ್ಯಾರಂಟಿಯ ಬಣ್ಣ ಬಯಲಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿಯನ್ನು ಮತ್ತು ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಾ ರಿವರ್ಸ್‌ ಗೇರ್‌ನಲ್ಲಿ ಹೋಗುತ್ತಿದ್ದಾರೆ. ಆದರೆ, ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಒಳ್ಳೆಯ ಅಭಿವೃದ್ಧಿ ಮಾಡುತ್ತಾ ಡಬಲ್‌ ಇಂಜಿನ್‌ ಸರ್ಕಾರ ಡಬಲ್‌ ವೇಗವಾಗಿ ಹೋಗುತ್ತಿದೆ. ಈಶ್ವರಪ್ಪನವರಿಗೆ ಬಿಜೆಪಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಸ್ಥಾನಮಾನ ನೀಡಿ ಉನ್ನತ ಹುದ್ದೆಯನ್ನು ನೀಡಲಿದೆ ಎಂದು ಭವಿಷ್ಯ ನುಡಿದರು.

ತಮಿಳುನಾಡಿನಲ್ಲಿ ಖಾತೆ ತೆರೆದ ಸಿಂಗಂ ಅಧಿಕಾರಿ ಅಣ್ಣಾಮಲೈ: ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಒಬ್ಬ ನಿವೃತ್ತ ಐಎಸ್‌ ಐಪಿಎಸ್‌ ಅಧಿಕಾರಿ ಸಿಂಗಂ ಎಂದೇ ಖ್ಯಾತರಾದ ಅಣ್ಣಾಮಲೈ ಅವರು ಮೋದಿಯವರ ನಾಯಕತ್ವ ಮತ್ತು ಅವರ ದೂರದೃಷ್ಟಿನೋಡಿ ಒಂದು ಸ್ಥಾನವೂ ಇಲ್ಲದ ತಮಿಳುನಾಡಿನಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಾಲ್ಕು ಎಂಎಲ್‌ಎಗಳನ್ನು ಗೆಲ್ಲಿಸಿ ಈಗ ತಮಿಳುನಾಡಿನಲ್ಲಿ ಪಕ್ಷವನ್ನು ಭದ್ರವಾಗಿ ಕಟ್ಟುತ್ತಿದ್ದಾರೆ ಎಂದರು. ಶಾಸಕನಾಗಿ ನಾನು ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದೇನೆ. 

ಬಿಜೆಪಿ ಸರ್ಕಾರ ಬಂದಾಗ ಮೊಟ್ಟಮೊದಲು ತಿರುವಳ್ಳವರ್‌ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಿ ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ, ಎರಡೂ ರಾಜ್ಯಗಳ ಜನರು ಸಹೋದರರಂತೆ ಶಾಂತಿಯಿಂದ ಬಾಳಲು ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಕ್ರಮ ಕೈಗೊಂಡಿತ್ತು. ತಮಿಳು -ಕನ್ನಡಿಗರ ಸಂಗಮಕ್ಕೆ ಇದು ದಾರಿಯಾಯಿತು ಎಂದು ಹೇಳಿದರು. ಚನ್ನಬಸಪ್ಪನವರು ಶಿವಮೊಗ್ಗದ ನಗರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ದೇಶ ಮತ್ತು ಹಿಂದು ಧರ್ಮದ ಕಟ್ಟಾಳುವಾದ ಅವರನ್ನು ಬೆಂಬಲಿಸಿ ನನಗಿಂತ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಬೇಕು. ಅವರು ಗೆದ್ದರೆ ನಾನೇ ಗೆದ್ದ ಹಾಗೆ ಎಂದರು.

ಅಭ್ಯರ್ಥಿ ಚನ್ನಬಸಪ್ಪ ಮಾತನಾಡಿ, ದೇಶ ಸುಭಿಕ್ಷವಾಗಿರಬೇಕು. ನಮ್ಮ ಸಂಸ್ಕೃತಿ ಉಳಿಯಬೇಕು ಎಂದು ಜನಸಂಘ ಹುಟ್ಟಿಕೊಂಡಿತು. ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಾರಂಭವಾದ ಜನಸಂಘ ಬಿಜೆಪಿಯಾಗಿ ನಮ್ಮ ದೇಶದ ಕಾಶ್ಮೀರವನ್ನು ಉಳಿಸಲು ಬಲಿದಾನ ನೀಡಿದೆ. ಅಭಿವೃದ್ಧಿಗ ಮತ್ತೊಂದು ಹೆಸರೇ ಬಿಜೆಪಿ. ಬಿಜೆಪಿ ಗೆಲ್ಲಲು ಎಲ್ಲರೂ ಶಕ್ತಿ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್‌, ಪ್ರಮುಖರಾದ ನಾಗರಾಜ್‌, ಜ್ಞಾನೇಶ್ವರ್‌, ಮೇಯರ್‌ ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಕುಲದೀಪ್‌ ಸಿಂಗ್‌, ತಮಿಳು ಮುಖಂಡರಾದ ಏಳುಮಲೈ, ಭೂಪಾಲ್‌ ರಾಜೇಂದ್ರ, ಅರುಣಗಿರಿ, ಬೇಲೂರು ರವಿ, ಶಿವಕುಮಾರ್‌, ದೊರೆಚಿನ್ನಪ್ಪ, ಮಂಜುನಾಥ್‌ ಮೊದಲಾದವರಿದ್ದರು.

ತಮಿಳು ನಾಡಗೀತೆ ನಿಲ್ಲಿಸಿ ಕನ್ನಡ ನಾಡಗೀತೆ ಹಾಕಿಸಿದ ಈಶ್ವರಪ್ಪ: ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ಗುರುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ಕನ್ನಡ ನಾಡಗೀತೆಗೆ ಬದಲಾಗಿ ಆಕಸ್ಮಿಕವಾಗಿ ತಮಿಳುನಾಡು ನಾಡಗೀತೆ ಹಾಕಲಾಯಿತು. ತಕ್ಷಣವೇ ಜಾಗೃತರಾದ ಶಾಸಕ ಕೆ.ಎಸ್‌.ಈಶ್ವರಪ್ಪ ಅದನ್ನು ಅರ್ಧಕ್ಕೆ ತಡೆದು ಕರ್ನಾಟಕದ ನಾಡಗೀತೆ ಹಾಕಿಸಿದ ಘಟನೆ ನಡೆಯಿತು. ವಿಧಾನಸಭೆ ಚುನಾವಣೆ ಸಹ ಉಸ್ತುವಾರಿಯಾಗಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಕಾರ್ಯಕ್ರಮದಲ್ಲಿ ತಮಿಳುನಾಡು ನಾಡಗೀತೆ ಹಾಕಲಾಗಿತ್ತು. ಈ ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌.ಚನ್ನಬಸಪ್ಪ ಪಾಲ್ಗೊಂಡಿದ್ದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ಬಡವರಿಗೆ ಲಾಭ: ಕೇಂದ್ರ ಸಚಿವ ಭಗವಂತ ಖೂಬಾ

ಸಮಾವೇಶ ಆರಂಭವಾಗುತ್ತಿದ್ದಂತೆಯೇ ಸಂಘಟಕರು ಈಗ ನಾಡಗೀತೆ ಆರಂಭವಾಗಲಿದೆ. ಎಲ್ಲರೂ ಎದ್ದು ನಿಂತುಕೊಳ್ಳಿ ಎಂದು ಮನವಿ ಮಾಡಿದರು. ಆಗ ಸಮಾವೇಶದಲ್ಲಿ ನೆರೆದವರ ಜೊತೆ ವೇದಿಕೆಯಲ್ಲಿದ್ದ ಈಶ್ವರಪ್ಪ ಸೇರಿದಂತೆ ಎಲ್ಲರೂ ಎದ್ದು ನಿಂತರು. ಬಳಿಕ ತಮಿಳುನಾಡು ನಾಡಗೀತೆ ಹಾಕಲಾಯಿತು. ಈ ವೇಳೆ ಇದ್ದಕ್ಕಿದ್ದಂತೆ ಆಸನದ ಬಳಿಯಿಂದ ಡಯಾಸ್‌ನತ್ತ ಬಂದ ಈಶ್ವರಪ್ಪ, ನಾಡಗೀತೆ ನಿಲ್ಲಿಸುವಂತೆ ಸಂಘಟಕರಿಗೆ ಸೂಚಿಸಿದರು. ಕರ್ನಾಟಕದ ನಾಡಗೀತೆ ಹಾಕಿಸಿದರು. ಅನಂತರ ವೇದಿಕೆಯಲ್ಲಿದ್ದ ಗಣ್ಯರು ಕನ್ನಡದ ನಾಡಗೀತೆಗೆ ಗೌರವ ಸಲ್ಲಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios