ವಿಷದ ಹಾವು ಎಂದಿದ್ದು ಮೋದಿಯನ್ನಲ್ಲ, ಬಿಜೆಪಿಯನ್ನು: ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ‘ವಿಷದ ಹಾವು’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಟೀಕಾ ಪ್ರಹಾರ ನಡೆಸಿದ್ದಾರೆ. ಅವರ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕನ ಮೇಲೆ ಬಿಜೆಪಿ ಮುಗಿಬಿದ್ದು ವಾಗ್ದಾಳಿ ನಡೆಸಿದೆ.
ಗದಗ (ಏ.28): ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ‘ವಿಷದ ಹಾವು’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಟೀಕಾ ಪ್ರಹಾರ ನಡೆಸಿದ್ದಾರೆ. ಅವರ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕನ ಮೇಲೆ ಬಿಜೆಪಿ ಮುಗಿಬಿದ್ದು ವಾಗ್ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಉಲ್ಟಾಹೊಡೆದಿರುವ ಖರ್ಗೆ, ನಾನು ವಿಷದ ಹಾವು ಎಂದು ಹೇಳಿದ್ದು ಬಿಜೆಪಿ ಬಗ್ಗೆ. ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸಿಲ್ಲ. ವ್ಯಕ್ತಿ ಆಧರಿಸಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಳಿಕ ಇನ್ನೊಮ್ಮೆ ಸ್ಪಷ್ಟನೆ ನೀಡಿರುವ ಅವರು ಯಾರನ್ನೇ ಆಗಲಿ ನೋಯಿಸುವ ಉದ್ದೇಶದಿಂದ ತಾವು ಆ ರೀತಿ ಹೇಳಿಕೆ ನೀಡಿರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಖೇದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ ಖರ್ಗೆ, ‘ಮೋದಿ ಎಂದರೆ ವಿಷದ ಹಾವು ಇದ್ದ ಹಾಗೆ. ನೀವೇನಾದರೂ ವಿಷ ಇದೆಯೋ, ಇಲ್ಲವೋ ಎಂದು ನೆಕ್ಕಲು ಹೋದರೆ ಸತ್ತ ಹಾಗೆ. ಮೋದಿ ಎಲ್ಲವನ್ನೂ ಕೊಟ್ಟಿದ್ದಾರೆ. ಅವರು ಒಳ್ಳೆಯ ಮನುಷ್ಯ. ಪ್ರಧಾನ ಮಂತ್ರಿ ಏನೋ ಕೊಡುತ್ತಾರೆ ಎಂದು ನೆಕ್ಕಿ ನೋಡಲು ಹೋದರೆ, ನೀವು ಅಲ್ಲೇ ಮಲಗಿ ಬಿಡುತ್ತೀರಿ...’ ಎಂದು ಹೇಳಿದರು. ‘ನಾನು 56 ಇಂಚಿನ ಎದೆ ಹೊಂದಿದ ಮನುಷ್ಯ ಎಂದು ಮೋದಿ ಹೇಳುತ್ತಾರೆ. ಅದನ್ನು ನಾವು ಅಳತೆ ಮಾಡಲು ಸಾಧ್ಯವೇ? ಅವರ ಎದೆಯನ್ನು ಯಾರು ಅಳೆಯುತ್ತಾರೆ? ಅವರು ಮಾಡಿದ ಜನಪರ ಕೆಲಸವನ್ನು ಅಳೆಯಬಹುದು’ ಎಂದರು. ಜೊತೆಗೆ, ಬಿಜೆಪಿ ಸಿದ್ಧಾಂತವನ್ನೂ ಟೀಕಿಸಿದರು. ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಯಿತು.
ಶಿವಮೊಗ್ಗ ಏರ್ಪೋರ್ಟ್ನಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಗಳಿಗೆ ಶುಭ ಕೋರಿದ ರಾಹುಲ್ ಗಾಂಧಿ
ತಮ್ಮ ಮಾತಿನ ಈ ವಿಡಿಯೋ ಮತ್ತು ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಖರ್ಗೆ, ರೋಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ‘ಮೋದಿ ಅವರು ಹಾವು ಇದ್ದಂತೆ ಎಂದಿಲ್ಲ. ಅದನ್ನು ತಿರುಚುವುದು ಬೇಡ. ಬಿಜೆಪಿ ಎಂಬುದು ಹಾವು ಇದ್ದ ಹಾಗೆ, ಸ್ವಲ್ಪ ನೆಕ್ಕಿ ನೋಡ್ತೀವಿ ಎಂದರೆ ಕೊನೆಗೆ ಸಾವೇ ಗತಿ ಎಂದು ಹೇಳಿದ್ದೇನೆ. ಬಿಜೆಪಿ ಸಿದ್ಧಾಂತ ಒಂದು ವಿಷದಂತಿದೆ. ಆ ಸಿದ್ಧಾಂತವನ್ನು ನೀವು ಬೆಂಬಲಿಸಿದರೆ (ನೀವು ನೆಕ್ಕಿ ನೋಡಿದರೆ ) ಸಾವು ಖಚಿತ ಎಂದು ಹೇಳಿದ್ದೇನೆಯೇ ಹೊರತು ಮೋದಿಯವರ ಬಗ್ಗೆ ಹೇಳಿಲ್ಲ. ವೈಯಕ್ತಿಕವಾಗಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ ಎಂದಿದ್ದೇನೆ’ ಎಂದು ಸ್ಪಷ್ಟೀಕರಣ ನೀಡಿದರು.
ಬಿಜೆಪಿಯ ಹುಸಿ ಭರವಸೆಗಳನ್ನು ಜನ ನಂಬಬಾರದು: ಈಶ್ವರ ಖಂಡ್ರೆ
ಬಳಿಕ, ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಮಾತನಾಡಿ, ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಚಾರಧಾರೆಗಳು ವಿಷಕಾರಿಯಾಗಿವೆ ಎಂದು ಹೇಳಿಕೆ ನೀಡಿದ್ದೇನೆ. ನಾನು ಯಾವುದೇ ವ್ಯಕ್ತಿ ಆಧರಿಸಿ ಹೇಳಿಕೆ ನೀಡಿಲ್ಲ. ಯಾವುದೇ ವ್ಯಕ್ತಿಗೆ ನೋವು ಉಂಟು ಮಾಡುವ ಮಾತನ್ನು ಆಡಿಲ್ಲ. ಬಿಜೆಪಿಯವರು ಇದನ್ನು ತಿರುಚಿ, ಮುರುಚಿ ದೂರದರ್ಶನದಲ್ಲಿ ಬಿತ್ತರಿಸಿ, ನಮ್ಮ ಪಕ್ಷಕ್ಕೆ ಕೆಟ್ಟಹೆಸರು ತರಲು ಮುಂದಾಗುತ್ತಿರುವುದು ಬೇಸರದ ಸಂಗತಿ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಖೇದ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.