ಭಾನುವಾರದ ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಹೆಸರಿನ ಬೃಹತ್‌ ರೋಡ್‌ ಶೋ ಕಾರ್ಯಕ್ರಮದಲ್ಲಿ ಒಂದಿಷ್ಟು ಮಾರ್ಪಾಟು ಮಾಡಲಾಗಿದೆ.

ಬೆಂಗಳೂರು (ಮೇ.06): ಭಾನುವಾರದ ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಹೆಸರಿನ ಬೃಹತ್‌ ರೋಡ್‌ ಶೋ ಕಾರ್ಯಕ್ರಮದಲ್ಲಿ ಒಂದಿಷ್ಟು ಮಾರ್ಪಾಟು ಮಾಡಲಾಗಿದೆ. ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಈ ವಿಷಯ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾನುವಾರ ನೀಟ್‌ ಪರೀಕ್ಷೆ ಇರುವುದರಿಂದ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. 

ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ವಿಶೇಷ ಕಳಕಳಿ ಹೊಂದಿರುವ ಪ್ರಧಾನಿ ಮೋದಿ ಅವರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲು ಸೂಚಿಸಿದ್ದಾರೆ. ಭಾನುವಾರ ಯಾವುದೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದಲ್ಲಿ ಅಂತಹ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿದರೆ ಪೊಲೀಸರು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಬಿಡುತ್ತಾರೆ. ಈ ಕುರಿತಂತೆ ಪೊಲೀಸರೊಂದಿಗೆ, ಎಸ್‌ಪಿಜಿಯವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಬೆಂಗ್ಳೂರು ಮೆಗಾ ರೋಡ್‌ ಶೋಗೆ ಹೈಕೋರ್ಟ್‌ ಅಸ್ತು

ಮೋದಿ ಅವರು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್‌ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಕೆರೆವರೆಗೆ 26.5 ಕಿ.ಮೀ ರೋಡ್‌ ಶೋ ನಡೆಸುತ್ತಾರೆ. ಭಾನುವಾರ ಬೆಳಿಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದವರೆಗೆ 8 ಕಿ.ಮೀ ರೋಡ್‌ ಶೋ ನಡೆಯಲಿದೆ ಎಂದು ವಿವರಿಸಿದರು.

ರಾಜಧಾನಿಯ ಎಲ್ಲ ಜನರನ್ನೂ ನೋಡಬೇಕು, ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಪ್ರಧಾನಿಗಳು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್‌ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್‌ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿ ಮೋದಿ ಅವರು ಎರಡು ದಿನ ರೋಡ್‌ ಶೋ ನಡೆಸುತ್ತಿದ್ದಾರೆ. ಅವರನ್ನು ಜನರು ಹೂ ಮಳೆಯೊಂದಿಗೆ ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ರೋಡ್‌ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್‌ ಷಡ್ಯಂತ್ರ: ಪ್ರಧಾನಿ ಮೋದಿ ಅವರ ರೋಡ್‌ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್‌ ಪಕ್ಷ ಷಡ್ಯಂತ್ರ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪಾದಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಆ್ಯಂಬುಲೆನ್ಸ್‌ಗಳನ್ನು ರೋಡ್‌ ಶೋ ಮಾರ್ಗದಲ್ಲಿ ಓಡಿಸುವುದಾಗಿ ಗೊತ್ತಾಗಿದೆ. ಈ ನಿಟ್ಟಿನಲ್ಲಿ ರೋಗಿಗಳಿರುವ ಆ್ಯಂಬುಲೆನ್ಸ್‌ಗಳನ್ನು ಪೊಲೀಸರು ಖುದ್ದು ಆಸ್ಪತ್ರೆಗಳವರೆಗೆ ಬಿಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ರೋಡ್‌ ಶೋ ನಿಮಿತ್ತ ಸಂಚಾರ ಬದಲಾವಣೆ: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಶನಿವಾರ ಪ್ರಧಾನ ಮಂತ್ರಿಗಳ ರೋಡ್‌ ಶೋ ಹಿನ್ನೆಲೆಯಲ್ಲಿ ನಗರದ ಕೆಲವು ಭಾಗಗಳಲ್ಲಿ ಶನಿವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟವೆರೆಗೆ ಪೊಲೀಸರು ಬದಲಾವಣೆ ಮಾಡಿದ್ದಾರೆ. ಈ ರಸ್ತೆಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ನಾಗರಿಕರಿಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಸಂಚಾರ ಬದಲಾವಣೆ ರಸ್ತೆಗಳು ಹೀಗಿವೆ: ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್‌ಬಿಐ ಲೇಔಟ್‌ ಜೆ.ಪಿ.ನಗರ, ಶಿರ್ಸಿ ವೃತ್ತ, ಜೆ.ಜೆ.ನಗರ, ಬಿನ್ನಿಮಿಲ್‌ ರಸ್ತೆ, ಶಾಲಿನಿ ಮೈದಾನ, ಸೌತ್‌ ಎಂಡ್‌ ಸರ್ಕಲ್‌, ಆರ್ಮುಗಂ ವೃತ್ತ, ಬುಲ್‌ ಟೆಂಪಲ್‌ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್‌, ಟಿ.ಆರ್‌.ಮಿಲ್‌, ಚಾಮರಾಜಪೇಟೆ ಮುಖ್ಯರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ.ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಚೋಳೂರು ಪಾಳ್ಯ, ಎಂ.ಸಿ.ವೃತ್ತ, ಪಶ್ಚಿಮ ಕಾರ್ಡ್‌ ರಸ್ತೆ, ಹಾವನೂರು ವೃತ್ತ, 8ನೇ ಮುಖ್ಯರಸ್ತೆ ಬಸವೇಶ್ವರ ನಗರ, ಶಂಕರಮಠ, ಮೋದಿ ಆಸ್ಪತ್ರೆ, ಎಂಕೆಕೆ ರಸ್ತೆ, ಮಲ್ಲೇಶ್ವರ ವೃತ್ತ, ಸಂಪಿಗೆ ವೃತ್ತ ಹಾಗೂ ಸ್ಯಾಂಕಿ ವೃತ್ತ.

ನಾಗರಿಕರಿಗೆ ಸೂಚನೆಗಳು
* ರೋಡ್‌ ಶೋ ಸಾಗುವ ದಾರಿಯ ಪಕ್ಕಪಕ್ಕದ ಕಟ್ಟಡಗಳು ಹಾಗೂ ಮನೆಗಳ ಮಹಡಿ ಮೇಲೆ ನಿಲ್ಲಲು ಅವಕಾಶವಿಲ್ಲ
* ರೋಡ್‌ ಶೋ ಸಾಗುವ ದಾರಿಯಲ್ಲಿ ಹೋಟೆಲ್‌ಗಳು ಸೇಪಿದಂತೆ ಅಂಗಡಿ ಮುಂಗಟ್ಟುಗಳ ವಹಿವಾಟು ಬಂದ್‌
* ಕಟ್ಟಡಗಳ ಬಳಿ ಅಪರಿಚಿತರು ಒಳ ಪ್ರವೇಶಿಸದಂತೆ ನಿರ್ಬಂಧಿಸಿ
* ನಿಗದಿತ ಸ್ಥಳದಲ್ಲಿ ನಿಂತು ರೋಡ್‌ ಶೋ ವೀಕ್ಷಿಸಬೇಕು
* ಕಟ್ಟಡಗಳ ಒಳ ಹಾಗೂ ಹೊರಗೆ ಅಡ್ಡಾಡಲು ಅವಕಾಶವಿಲ್ಲ

ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿಯಂತಹ ಭ್ರಷ್ಟಸರ್ಕಾರ ನೋಡಿಲ್ಲ: ಸಿದ್ದರಾಮಯ್ಯ

ಮೋದಿ ರೋಡ್‌ ಶೋ ಸಂಚರಿಸುವ ಮಾರ್ಗ, ಸಮಯ
ಬೆಳಗ್ಗೆ 10- ಶ್ರೀ ಸೋಮೇಶ್ವರ ಸಭಾ ಭವನ
10.10- ಜೆ.ಪಿ.ನಗರ 5ನೇ ಹಂತ
10.20- ಜಯನಗರ 5ನೇ ಬ್ಲಾಕ್‌
10.30- ಜಯನಗರ 4ನೇ ಬ್ಲಾಕ್‌
10.40- ಸೌತ್‌ ಎಂಡ್‌ ವೃತ್ತ
10.45- ಮಾಧವರಾವ್‌ ವೃತ್ತ
11- ರಾಮಕೃಷ್ಣ ಆಶ್ರಮ
11.05- ಉಮಾ ಥಿಯೇಟರ್‌ ಸಿಗ್ನಲ್‌
11.15- ಮೈಸೂರು ಸಿಗ್ನಲ್‌
11.25- ಟೋಲ್‌ ಗೇಟ್‌ ಸಿಗ್ನಲ್‌
11.35- ಗೋವಿಂದರಾಜನಗರ
11.45- ಮಾಗಡಿ ರೋಡ್‌ ಜಂಕ್ಷನ್‌
ಮಧ್ಯಾಹ್ನ 12- ಶಂಕರಮಠ ವೃತ್ತ
12.20- ಮಲ್ಲೇಶ್ವರ ವೃತ್ತ
12.30- ಮಲ್ಲೇಶ್ವರ 18ನೇ ರಸ್ತೆ ಜಂಕ್ಷನ್‌