ಬಿಜೆಪಿ, ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಆದರೆ ಜನರ ಆಶೀರ್ವಾದ ಇರುವವರೆಗೆ ಯಾರೂ ನನ್ನನ್ನು ರಾಜಕೀಯವಾಗಿ ಮುಗಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಮೈಸೂರು (ಏ.14): ಬಿಜೆಪಿ, ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಆದರೆ ಜನರ ಆಶೀರ್ವಾದ ಇರುವವರೆಗೆ ಯಾರೂ ನನ್ನನ್ನು ರಾಜಕೀಯವಾಗಿ ಮುಗಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಕೇರ್ಗಳ್ಳಿಯಲ್ಲಿರುವ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್‌ ಸಭೆಯಲ್ಲಿ ಅವರು ಮಾತನಾಡಿ, ಈಗ ಎರಡು ಪಕ್ಷದವರೂ ಸೇರಿಕೊಂಡು ನನ್ನನ್ನೇ ರಾಜಕೀಯವಾಗಿ ಮುಗಿಸಬೇಕೆಂದು ಹೊರಟಿದ್ದಾರೆ. ನಾನು ಈ ನಾಡಿಗೆ ಮಾಡಿರುವ ಅನ್ಯಾಯವಾದರೂ ಏನು? ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಧರ್ಮ ಧರ್ಮಗಳನ್ನು ಎತ್ತಿಕಟ್ಟಿಸಮಾಜ ಒಡೆಯುವ ಅಶಾಂತಿ ಸೃಷ್ಟಿಸುವ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು. 

ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದರೂ ಸಹ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೊಬ್ಬರ ಹೆಗಲ ಮೇಲೆ ಕೂತು ಅಧಿಕಾರ ಮಾಡಬೇಕು ಎಂದು ಬಯಸುವವರು ಎಂದ ಟೀಕಿಸಿದರು. ಬಿಜೆಪಿಯವರು ಎರಡೇ ವರ್ಷದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದರು. ಮಗ ವಿಜಯೇಂದ್ರನನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಂತ್ರಿಮಂಡಲ ವಿಸ್ತರಣೆ ಮಾಡಲೇ ಇಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್‌

ಕಾಂಗ್ರೆಸ್‌ ಗೆಲ್ಲಿಸಿ: ಈ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಬಹಳ ಪ್ರಾಮುಖ್ಯವಾಗಿದ್ದು ಯಾರೂ ಕೂಡಾ ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬೇಡಿ. ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್‌ ಅಭ್ಯರ್ಥಿ ಸಿದ್ದೇಗೌಡರನ್ನು ಗೆಲ್ಲಿಸಬೇಕು. ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳಿಂದಾಗಿ ನಾನು ಸೋತಿದ್ದೇನೆ. ಈ ಬಾರಿ ಅಂತಹ ಬೆಳವಣಿಗೆಗಳು ಆಗಿಲ್ಲ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಸಾಕಷ್ಟುಒಳ್ಳೆಯ ಕೆಲಸಗಳನ್ನು ಮಾಡಿದ್ದರೂ ಸಹ ಚಾಮುಂಡೇಶ್ವರಿಯ ಜನ ನನ್ನನ್ನು ಸೋಲಿಸಿದರು ಎಂದರು. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಅವಕಾಶವಾದಿ ಜಿ.ಟಿ. ದೇವೇಗೌಡ ಅವರನ್ನು ಸೋಲಿಸುವ ಮೂಲಕ ಸಿದ್ದೇಗೌಡರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸೋನಿಯಾ, ರಾಹುಲ್‌ ಬಿಟ್ಟ ಮುರುಕಲು ಕುರ್ಚಿಗೆ ಖರ್ಗೆ ಅಧ್ಯಕ್ಷ: ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

ಕಾಂಗ್ರೆಸ್‌ ಅಭ್ಯರ್ಥಿ ಸಿದ್ದೇಗೌಡ, ವಿಧಾನ ಪರಿಷತ್‌ ಸದಸ್ಯ ಡಾ. ತಿಮ್ಮಯ್ಯ, ಜಿಪಂ ಮಾಜಿ ಅಧ್ಯಕ್ಷರಾದ ಕೆ. ಮರೀಗೌಡ, ಕಡಕೊಳ ನಾಗರಾಜು, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್‌, ಜಿಪಂ ಮಾಜಿ ಸದಸ್ಯರಾದ ರಾಕೇಶ್‌ ಪಾಪಣ್ಣ, ಬೀರಿಹುಂಡಿ ಬಸವಣ್ಣ, ಎಸ್‌. ಅರುಣ್‌ಕುಮಾರ್‌, , ಲೇಖಾ ವೆಂಕಟೇಶ್‌, ಎಸ್‌. ಮಾದೇಗೌಡ, ಸೇವಾದಳ ಮಾಜಿ ಅಧ್ಯಕ್ಷ ಜಯರಾಮೇಗೌಡ, ಮುಖಂಡರಾದ ಕೃಷ್ಣಕುಮಾರ್‌ ಸಾಗರ್‌, ನರಸೇಗೌಡ, ಪುಷ್ಪಲತಾ ಚಿಕ್ಕಣ್ಣ, ಜಿ.ವಿ. ಸೀತಾರಾಂ, ಕುಮಾರ್‌, ಜೆ.ಜೆ. ಆನಂದ, ಕೆಂಪನಾಯಕ, ರಘು, ಬಸವರಾಜು, ಪಟೇಲ್‌ ಜವರೇಗೌಡ ಇತರರು ಇದ್ದರು. ನೂರಾರು ಕಾರ್ಯಕರ್ತರು ಜೆಡಿಎಸ್‌, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.