ನನ್ನನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಒಳಒಪ್ಪಂದ: ಸಿದ್ದರಾಮಯ್ಯ
ಬಿಜೆಪಿ ಕುತಂತ್ರ, ಷಡ್ಯಂತ್ರ ಮಾಡುವುದರಲ್ಲಿ ನಿಸ್ಸೀಮರು. ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ದೃಷ್ಟಿಯಿಂದ ದಲಿತರ ಮತ ವಿಭಜನೆಯಾಗಲಿ ಎಂದು ಮಾಜಿ ಶಾಸಕ ಡಾ.ಭಾರತೀಶಂಕರ್‌ರನ್ನು ಕಣಕ್ಕಿಳಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಂಜನಗೂಡು (ಏ.20): ಬಿಜೆಪಿ ಕುತಂತ್ರ, ಷಡ್ಯಂತ್ರ ಮಾಡುವುದರಲ್ಲಿ ನಿಸ್ಸೀಮರು. ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ದೃಷ್ಟಿಯಿಂದ ದಲಿತರ ಮತ ವಿಭಜನೆಯಾಗಲಿ ಎಂದು ಮಾಜಿ ಶಾಸಕ ಡಾ.ಭಾರತೀಶಂಕರ್‌ರನ್ನು ಕಣಕ್ಕಿಳಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ತಾಲೂಕಿನ ಗೋಳೂರು ಗ್ರಾಮದ ಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವರುಣ ಕ್ಷೇತ್ರದ ಜನ ಇದಕ್ಕೆ ಸೊಪ್ಪು ಹಾಕದೆ ದೊಡ್ಡಮಟ್ಟದ ಅಂತರದಿಂದ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯದ ಜನ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದಾರೆ. ಆದ್ದರಿಂದ ರಾಜ್ಯಾದ್ಯಂತ ಜನ ನಿಮ್ಮ ಸಿದ್ದರಾಮಯ್ಯ ಅವರ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಆದ್ದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಆದ್ದರಿಂದಲೇ ನನ್ನನ್ನು ಸೋಲಿಸಲೇಬೇಕೆಂದು ನಿರ್ಧರಿಸಿ ಬೆಂಗಳೂರಿನ ನಿವಾಸಿ ಸೋಮಣ್ಣರನ್ನು ಕರೆತಂದು ನಿಲ್ಲಿಸಿದ್ದಾರೆ. ಅವರು ಎಷ್ಟೇ ಕುತಂತ್ರ, ಹುನ್ನಾರ ಮಾಡಲಿ, ಹಣದ ಹೊಳೆಯನ್ನೇ ಹರಿಸಲಿ ವರುಣ ಕ್ಷೇತ್ರದ ಜನ ಸ್ವಾಭಿಮಾನಿಗಳಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾತ ಮತ್ತೆ ಸಿಎಂ ಆಗಬೇಕು: ‘ಮರಿ ಹುಲಿಯಾ’: ವರುಣದಲ್ಲಿ ಸಿದ್ದು ಪರ ಧವನ್ ರಾಕೇಶ್ ಪ್ರಚಾರ
ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಮೇಲಾಗಿ ವರುಣ ನಾನು ಹುಟ್ಟಿಬೆಳೆದಿರುವ ಹೋಬಳಿ, ಈ ಕ್ಷೇತ್ರ ನನ್ನ ಸ್ವಂತ ಕ್ಷೇತ್ರ. ನಾನು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ. ಜನ ಬಿಜೆಪಿ, ಜೆಡಿಎಸ್‌ನ ಎಲ್ಲ ಕುತಂತ್ರಗಳನ್ನು ಅರ್ಥಮಾಡಿಕೊಂಡು ಅವರನ್ನು ಕಾಲಕಸದಂತೆ ಕಂಡು ನನ್ನನ್ನು ಒಂದು ಲಕ್ಷ ಮತಗಳಿಂದ ಗೆಲ್ಲಿಸಿಕೊಡಲಿದ್ದಾರೆ ಎಂಬ ಸಂಪೂರ್ಣ ಆತ್ಮವಿಸ್ವಾಸವಿದೆ. ನಾನು ಪ್ರಚಾರಕ್ಕೆ ಎರಡು ದಿನ ಮಾತ್ರ ಬರುತ್ತೇನೆ, ನನ್ನ ಪರ ಯತೀಂದ್ರ ಮತಯಾಚನೆ ಮಾಡಲಿದ್ದಾರೆ.
2013ರಲ್ಲಿ 31 ಸಾವಿರ ಮತದಿಂದ ಗೆಲ್ಲಿಸಿದ್ದೀರಿ. ಕಳೆದ ಬಾರಿ ಯತೀಂದ್ರ ಅವರನ್ನು 59 ಸಾವಿರ ಮತದಿಂದ ಗೆಲ್ಲಿಸಿದ್ದೀರಿ, ಈ ಬಾರಿ ನನ್ನನ್ನು ಒಂದು ಲಕ್ಷ ಮತದ ಅಂತರದಿಂದ ಗೆಲ್ಲಿಸಿ ಶಕ್ತಿ ತುಂಬಿ ವಿಧಾನಸಭೆಗೆ ಕಳಿಸಿಕೊಡಿ ಎಂದರು. ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಪುಟ್ಟರಂಗಶೆಟ್ಟಿ, ಜಮೀರ್ ಅಹಮದ್, ಶಾಸಕರಾದ ಅನಿಲ್ ಚಿಕ್ಕಮಾದು, ಯತೀಂದ್ರ ಸಿದ್ದರಾಮಯ್ಯ ಇತರರು ಇದ್ದರು.
ಯಡಿಯೂರಪ್ಪ ನಿವಾಸಕ್ಕೆ ಶಾಸಕ ಬಸನಗೌಡ ಯತ್ನಾಳ್ ಭೇಟಿ
ನನ್ನದು ಕೊನೇ ಚುನಾವಣೆ: ಇದು ನನ್ನ ಕೊನೇ ಚುನಾವಣೆ. ನನ್ನ ಜೊತೆ ಯತೀಂದ್ರ, ಮೊಮ್ಮಗ ಧವನ್ ರಾಕೇಶ್ ಬಂದಿದ್ದಾರೆ. ರಾಕೇಶ್ ಮೇಲಿದ್ದ ಪ್ರೀತಿ, ಅಭಿಮಾನವನ್ನು ಅವರ ಮಗ ಧವನ್‌ರಾಕೇಶ್ ಮೇಲೆ ತೋರುತ್ತಿದ್ದೀರಿ. ಅವನಿಗೆ 17 ವರ್ಷ. ಇನ್ನೂ ಅವನ ಓದು ಮುಗಿದಿಲ್ಲ, ಅವನು ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬಾಕಿ ಇದೆ. ನನ್ನ ನಂತರ ಯತೀಂದ್ರ, ಧವನ್ ರಾಕೇಶ್ ಇರುತ್ತಾರೆ. ಧವನ್ ರಾಕೇಶ್‌ಗೆ ನಿಮ್ಮ ಆಶೀರ್ವಾದ ಮಾಡಿ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.