ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಣಿಸಲು ಸಾಮ್ರಾಟ್ ಅಶೋಕಾಸ್ತ್ರ ಪ್ರಯೋಗ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸ್ವ ಕ್ಷೇತ್ರದಲ್ಲಿಯೇ ಕಟ್ಟಿಹಾಕುವ ಉದ್ದೇಶದೊಂದಿಗೆ ಬಿಜೆಪಿ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ, ಕನಕಪುರ, ರಾಜ್ಯದಲ್ಲಿಯೇ ಪ್ರತಿಷ್ಠಿತ ಕ್ಷೇತ್ರವಾಗಿ ರೂಪುಗೊಂಡಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಮೇ.08): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸ್ವ ಕ್ಷೇತ್ರದಲ್ಲಿಯೇ ಕಟ್ಟಿಹಾಕುವ ಉದ್ದೇಶದೊಂದಿಗೆ ಬಿಜೆಪಿ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ, ಕನಕಪುರ, ರಾಜ್ಯದಲ್ಲಿಯೇ ಪ್ರತಿಷ್ಠಿತ ಕ್ಷೇತ್ರವಾಗಿ ರೂಪುಗೊಂಡಿದೆ. ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ಸಾಲಿನಲ್ಲಿ ಗುರುತಿಸಿಕೊಂಡಿರುವ ಡಿಕೆಶಿಯವರು ಚುನಾವಣೆಯಲ್ಲಿ ಗೆದ್ದು ಪಕ್ಷದೊಳಗೆ ತಮ್ಮ ಹಕ್ಕು ಪ್ರತಿಪಾದನೆ ಮಾಡುವ ಆಲೋಚನೆಯಲ್ಲಿದ್ದಾರೆ. ಬಿಜೆಪಿಯ ಆರ್.ಅಶೋಕ್ ಅವರು ಪದ್ಮನಾಭನಗರ ಹಾಗೂ ಕನಕಪುರ ಎರಡೂ ಕ್ಷೇತ್ರಗಳಲ್ಲಿ ಆಯ್ಕೆಯಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಉನ್ನತ ಹುದ್ದೆ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.
ಕನಕಪುರ ಕ್ಷೇತ್ರ ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆ. ಆದರೆ, ಇದೇ ಮೊದಲ ಬಾರಿಗೆ ಆಡಳಿತಾರೂಢ ಬಿಜೆಪಿ, ಅವರಿಗೆ ಟಕ್ಕರ್ ನೀಡಲು ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಬಲಿಷ್ಠ ನಾಯಕರಾಗಿ ಬೆಳೆದಿರುವ ಡಿ.ಕೆ.ಶಿವಕುಮಾರ್ ಸತತವಾಗಿ 7 ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದವರು. ಕನಕಪುರಕ್ಕೆ ಬರುವ ಮುನ್ನ ಸಾತನೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದರು. ನಂತರ 2008ರಿಂದ ಕನಕಪುರ ಕ್ಷೇತ್ರ ಪ್ರತಿನಿಧಿಸಿ, ಅಂದಿನಿಂದ ಈವರೆಗೆ ಕಳೆದ 15 ವರ್ಷಗಳಿಂದ ಸೋಲಿಲ್ಲದ ಸರದಾರರಾಗಿ ಒಂದೇ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಪ್ರತಿ ಚುನಾವಣೆಯಲ್ಲೂ ಅವರ ಗೆಲುವಿನ ಅಂತರ ಏರಿಕೆ ಆಗುತ್ತಿರುವುದು ಅವರಿಗಿರುವ ಜನಬೆಂಬಲಕ್ಕೆ ಸಾಕ್ಷಿಯಾಗಿದೆ.
ಲಿಂಗಾಯತ ಸಮಾಜ ಸಮುದ್ರ ಇದ್ದಂತೆ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಡಿಕೆಶಿಗೆ ಡಿಕೆಸು ದೊಡ್ಡ ಶಕ್ತಿ: ಶಿವಕುಮಾರ್ಗೆ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರೇ ದೊಡ್ಡಶಕ್ತಿ. ಈ ಸಹೋದರರು ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದ ಚಿತ್ರಣವನ್ನು ಸಾಕಷ್ಟುಬದಲಿಸಿದ್ದಾರೆ. ತಮ್ಮ ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸರ್ಕಾರಗಳ ಮೇಲೆ ಒತ್ತಡ ಹಾಕಿ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸಾತನೂರು ಮತ್ತು ಕನಕಪುರ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಎದುರಾಳಿಗಳಿಂದ ಶಸ್ತ್ರತ್ಯಾಗ ಮಾಡಿಸಿರುವ ಡಿಕೆಶಿ, ಅವರೆಲ್ಲರನ್ನು ತನ್ನ ಸೈನ್ಯದೊಳಗೆ ಸೇರಿಸಿಕೊಂಡು ಕೋಟೆ ಕಾಯಲು ಬಲಿಷ್ಠ ಕಾವಲು ಪಡೆಯನ್ನೇ ಕಟ್ಟಿದ್ದಾರೆ. ಇದು ಅವರಿಗೆ ವರದಾನವಾಗಲಿದೆ.
ದಳಪತಿ ಸೈನ್ಯ ಸೆಳೆಯುವ ಯತ್ನ: ಅಶೋಕ್, ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರಾದರೂ ಕನಕಪುರಕ್ಕೆ ಅವರ ಕೊಡುಗೆ ಏನೂ ಇಲ್ಲ. ಆದರೆ, ಈ ಚುನಾವಣೆಯನ್ನು ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ದಳಪತಿಗಳಾದ ದೇವೇಗೌಡ ಮತ್ತು ಕುಮಾರಸ್ವಾಮಿ, ಕನಕಪುರದತ್ತ ತಲೆ ಹಾಕುವುದಿಲ್ಲ. ಅದಕ್ಕೆ ಪ್ರತಿಯಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಡಿಕೆಶಿ ಕಾಲಿಡುವುದಿಲ್ಲ. ಇವರಿಬ್ಬರದು ಹೊಂದಾಣಿಕೆ ರಾಜಕಾರಣ ಎಂಬ ಅಸ್ತ್ರವನ್ನು ಹೂಡುತ್ತಿರುವ ಅಶೋಕ್, ಜೆಡಿಎಸ್ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಕೇವಲ 6,273 ಮತಗಳನ್ನು ಪಡೆದು, ಠೇವಣಿ ಕಳೆದುಕೊಂಡಿದ್ದರು. ಈ ಬಾರಿ ಕಮಲ ಅರಳಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ರಾಷ್ಟ್ರೀಯ ನಾಯಕರನ್ನು ಕ್ಷೇತ್ರಕ್ಕೆ ಕರೆ ತಂದು ಪಕ್ಷದ ಶಕ್ತಿ ವೃದ್ಧಿಸುವ ಪ್ರಯತ್ನದಲ್ಲಿದೆ. ಈ ಕ್ಷೇತ್ರದಲ್ಲಿ 40 ರಿಂದ 50 ಸಾವಿರದಷ್ಟುಸಾಂಪ್ರದಾಯಿಕ ಮತಗಳು ಜೆಡಿಎಸ್ ಬುಟ್ಟಿಯಲ್ಲಿವೆ. ಈ ಮತಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಜೆಡಿಎಸ್, ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜು ಅವರನ್ನು ಕಣಕ್ಕಿಳಿಸಿದೆ. ಕನಕಪುರ ಪುರಸಭೆ ಇದ್ದಾಗ ಅಧ್ಯಕ್ಷರಾಗಿದ್ದ ಅವರು, ನಂತರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
2018ರ ಫಲಿತಾಂಶ
ಡಿ.ಕೆ.ಶಿವಕುಮಾರ್ (ಕಾಂಗ್ರೆಸ್) - 1,27,552.
ನಾರಾಯಣಗೌಡ (ಜೆಡಿಎಸ್) - 47,643.
ನಂದಿನಿಗೌಡ (ಬಿಜೆಪಿ) - 6,273.
ಬಿಎಂಟಿಸಿ ಬಸ್ನಲ್ಲಿ ರಾಹುಲ್ ಗಾಂಧಿ ಪ್ರಯಾಣ: ಆಶ್ಚರ್ಯಗೊಂಡ ಪ್ರಯಾಣಿಕರು
ಜಾತಿ ಲೆಕ್ಕಾಚಾರ
ಒಟ್ಟು ಮತದಾರರು-2,24,956.
ಒಕ್ಕಲಿಗರು-98,000.
ಪ.ಜಾತಿ/ಪ.ಪಂ- 46,000.
ಲಿಂಗಾಯತರು -24,000.
ಅಲ್ಪಸಂಖ್ಯಾತರು-19,000.
ಇತರ ಹಿಂದುಳಿದ ಸಮುದಾಯ-37,956 .