Ticket fight: ಮಾನ್ವಿ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಆಕ್ರೋಶ ಸ್ಪೋಟ!
ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಟಿಕೆಟ್ ಘೋಷಣೆಗೂ ಮುನ್ನವೇ ಟಿಕೆಟ್ ಆಕಾಂಕ್ಷಿ ನಮಗೆ ಬೇಡ ಎನ್ನುವ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ. ಮಾನ್ವಿ ವಿಧಾನಸಭಾ ಕ್ಷೇತಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಆಕಾಂಕ್ಷಿ ವಿರುದ್ಧವೇ ಆಕ್ರೋಶ ಸ್ಪೋಟಗೊಂಡಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಏ.9) : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರ ಪರಿಣಾಮವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸ್ವಪಕ್ಷೀಯರು ಬಂಡಾಯದ ಬಿರುಗಾಳಿಯನ್ನು ಎಬ್ಬಿಸಿರುವ ಸಮಯದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಟಿಕೆಟ್ ಘೋಷಣೆಗೂ ಮುನ್ನವೇ ಟಿಕೆಟ್ ಆಕಾಂಕ್ಷಿ ನಮಗೆ ಬೇಡ ಎನ್ನುವ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ.
ಜಿಲ್ಲೆ ಮಾನ್ವಿ ವಿಧಾನಸಭಾ ಕ್ಷೇತ(Manvi assembly constituency)ಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಆಕಾಂಕ್ಷಿ ವಿರುದ್ಧವೇ ಆಕ್ರೋಶ ಸ್ಪೋಟಗೊಂಡಿದೆ. ಮಾನ್ವಿ ಪಟ್ಟಣ ಹಾಗೂ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿರವಾರ ತಾಲೂಕಿನ ಜಾಲಾಪೂರು ಕ್ಯಾಂಪಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು. ಈ ವೇಳೆ ಕಾರ್ಯಕರ್ತರೇ ಡಿಸಿಸಿ ಅಧ್ಯಕ್ಷ, ಸೇವಾಕಾಂಕ್ಷಿ ಬಿ.ವಿ. ನಾಯಕ(BV Nayak) ವಿರುದ್ಧ ತಿರುಗಿಬಿದ್ದ ಘಟನೆಗಳು ನಡೆದಿವೆ. ಇದು ಡಿಸಿಸಿ ಅಧ್ಯಕ್ಷ ಬಿ.ವಿ. ನಾಯಕ ಅವರಿಗೆ ತೀವ್ರ ಮುಜುಗರನ್ನುಂಟು ಮಾಡಿದೆ.
Viral Audio: ನಮ್ಮ ಜಿಲ್ಲೆಗೆ ನಾನೇ ಮೋದಿ, ನಾನೇ ಟ್ರಂಪ್..' ಪ್ರಧಾನಿಯನ್ನೇ ಟೀಕಿಸಿದ ಬಿಜೆಪಿ ಶಾಸಕ?!
ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕಾಗಿ ಮಾಜಿ ಸಂಸದ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ನಾಯಕ ಅವರು ಅರ್ಜಿ ಸಲ್ಲಿಸಿದ್ದು, ಇವರ ಜೊತೆಗೆ ಮಾಜಿ ಶಾಸಕ ಹಂಪಯ್ಯ ಸಾಹುಕಾರ(Hampayya sahukar), ಶರಣಯ್ಯ ನಾಯಕ ಗುಡದಿನ್ನಿ(Sharanayya nayak gududinni), ರಾಜಾ ವಸಂತ ನಾಯಕ(Raja Vasanta nayak), ಲಕ್ಷ್ಮೇದೇವಿ ನಾಯಕ ಅವರು ಸಹ ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಬಿ.ವಿ. ನಾಯಕ ಅವರಿಗೆ ಟಿಕೆಟ್ ಖಚಿತ ಎನ್ನುವ ಮಾಹಿತಿ ಕ್ಷೇತ್ರದಾದ್ಯಂತ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಮಗೆ ಅನ್ಯ ತಾಲೂಕಿನವರು ಬೇಡವೆಂದು ಆಗ್ರಹಿಸಿ ಬಿ.ವಿ. ನಾಯಕ ವಿರುದ್ಧ ನೇರವಾಗಿಯೇ ಕೆಂಡ ಕಾರುತ್ತಿದ್ದಾರೆ.
ರಾಯಚೂರು: ಚುನಾವಣೆ ಘೋಷಣೆಯಾದ್ರೂ, 7 ಕ್ಷೇತ್ರಗಳಲ್ಲಿ ಮುಗಿಯದ ಅಭ್ಯರ್ಥಿಗಳ ಆಯ್ಕೆ ಗೊಂದಲ!
ಮಾಜಿ ಸಂಸದ, ಡಿಸಿಸಿ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ ಅವರು ಮೂಲತಃ ದೇವದುರ್ಗ ತಾಲೂಕಿನವರಾಗಿದ್ದಾರೆ. ಮಾಜಿ ಸಂಸದ ಎ. ವೆಂಕಟೇಶ ನಾಯಕ ಅವರ ಹಿರಿಯ ಸುಪುತ್ರರಾಗಿರುವ ಬಿ.ವಿ. ನಾಯಕ ಪ್ರಸಕ್ತ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ ಕ್ಷೇತ್ರಗಳಿಂದ ಸ್ಪರ್ಧಿಸಲು ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಟಿಕೆಟ್ ಹಂಚಿಕೆ ಕೊನೆಘಟ್ಟತಲುಪಿದ್ದು, ಬಿ.ವಿ. ನಾಯಕ ಅವರಿಗೆ ಮಾನ್ವಿಯಿಂದ ಟಿಕೆಟ್ ಖಚಿತ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುವುದರಿಂದ ಪಕ್ಷದ ಕಾರ್ಯಕರ್ತರು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಹಂಪಯ್ಯ ನಾಯಕ ಸಾಹುಕಾರ, ಶರಣಪ್ಪ ನಾಯಕ ಗುಡದಿನ್ನಿ, ರಾಜಾ ವಸಂತ ನಾಯಕ, ಲಕ್ಷ್ಮೇದೇವಿ ನಾಯಕ ಅವರಲ್ಲಿ ಯಾರಿಗಾದರು ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.