ನಳಿನ್ ಕಟೀಲ್‌ಗೆ ಸಾಮಾನ್ಯ ಜ್ಞಾನ ಇಲ್ಲ: ಪ್ರಿಯಾಂಕ್ ಖರ್ಗೆ ಕಿಡಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ. ಅವರು ಬೇರೆಯವರಿಗೆ ಉಪದೇಶ ನೀಡುವ ಬದಲು ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲಿ ಬಿಜೆಪಿಯವರು ದಲಿತರಿಗೆ ಟಿಕೆಟ್ ಕೊಡಲಿ.
ಬೆಂಗಳೂರು (ಏ.14): ‘ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ. ಅವರು ಬೇರೆಯವರಿಗೆ ಉಪದೇಶ ನೀಡುವ ಬದಲು ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲಿ ಬಿಜೆಪಿಯವರು ದಲಿತರಿಗೆ ಟಿಕೆಟ್ ಕೊಡಲಿ. ಆರ್‌ಎಸ್‌ಎಸ್‌ನ ಪ್ರಮುಖ ಹುದ್ದೆಗಳನ್ನು ದಲಿತರಿಗೆ ಬಿಟ್ಟುಕೊಡಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಕಟೀಲ್ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಟೀಲ್‌ಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲ. ಧರ್ಮ ಧರ್ಮಗಳ ನಡುವೆ ಹಾಗೂ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವುದು ಹೊರತುಪಡಿಸಿ ಬೇರೇನೂ ಅವರಿಗೆ ಗೊತ್ತಿಲ್ಲ.
ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್
ಅಭಿವೃದ್ಧಿ ವಿಚಾರ ಬಿಟ್ಟು ಹಿಜಾಬ್ ಬಗ್ಗೆ ಮಾತನಾಡಿ ಎಂದು ಕರೆ ನೀಡಿದವರು ಅವರು. ಅವರಿಗೆ ಏನು ಮಾತನಾಡಬೇಕು, ಏನು ಮಾತನಾಡುತ್ತಿದ್ದೇನೆ ಎಂಬ ಕನಿಷ್ಠ ತಿಳುವಳಿಕೆಯೂ ಇಲ್ಲ ಎಂದು ಕಿಡಿ ಕಾರಿದರು. ಶಿವಕುಮಾರ್ ಅವರು ಖರ್ಗೆ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕು ಎಂದು ಉಪದೇಶ ನೀಡುವ ಮೊದಲು ಅವರು ದಲಿತರಿಗೆ ಬಿಜೆಪಿಯು ಸಾಮಾನ್ಯ ವರ್ಗದ ಮೀಸಲಾತಿಯ ಕ್ಷೇತ್ರದಲ್ಲಿ ಸೀಟು ಬಿಟ್ಟುಕೊಡಲಿ. ಆರ್‌ಎಸ್‌ಎಸ್ ಪ್ರಮುಖ ಹುದ್ದೆಗಳನ್ನು ದಲಿತರಿಗೆ ಕೊಡಲಿ. ಬಳಿಕ ಬೇರೆಯವರಿಗೆ ಉಪದೇಶ ನೀಡಲಿ ಎಂದರು.
ಬಿಜೆಪಿಯಲ್ಲಿ ರೌಡಿಗಳ ಸಹಾಯ ಬೇಡುವ ಸ್ಥಿತಿ: ಬಿಜೆಪಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರಿಗೆ ರೌಡಿ ಶೀಟರ್ ಅವರಿಂದ ಸಹಾಯ ಬೇಡುವ ಪರಿಸ್ಥಿತಿ ಬಂದಿದೆ. ಸೋಲಿನ ಹತಾಶೆಯಿಂದ ಬಿಜೆಪಿಯವರು ರೌಡಿ ಮೋರ್ಚಾವನ್ನೇ ತೆರೆದಿದ್ದಾರೆ ಎಂದು ಟೀಕಿಸಿದರು. ಬಿಜೆಪಿಯವರಿಗೆ ಈಗಾಗಲೇ ಸೋಲು ಖಚಿತವಾಗಿದೆ. ಹೀಗಾಗಿ ಹತಾಶೆಯಿಂದಾಗಿ ಸೋಲಿನಿಂದ ಪಾರಾಗಲು ರೌಡಿಗಳ ಮೊರೆ ಹೋಗಿದ್ದಾರೆ. ಚಿತ್ತಾಪುರದಲ್ಲಿ ರೌಡಿ ಶೀಟರ್‌ಗೆ ಟಿಕೆಟ್ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಭಾಸ್ಕರ್ ರಾವ್ ಅವರು ರೌಡಿ ಶೀಟರ್ ಸೈಲೆಂಟ್ ಸುನಿಲ್ ಬೆಂಬಲ ಕೇಳಲು ಹೊರಟಿದ್ದಾರೆ.
ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ತಲೆಬಿಸಿ: ಶಾಸಕ ಶರತ್ ಬಚ್ಚೇಗೌಡ
ಭಾಸ್ಕರ್‌ರಾವ್ ಪೋಲಿಸ್ ಅಧಿಕಾರಿಯಾಗಿದ್ದಾಗ ರೌಡಿಗಳು ನಡಗುತ್ತಿದ್ದರು. ಈಗ ಭಾಸ್ಕರ್ ರಾವ್ ಅವರೇ ರೌಡಿಗಳ ಬೆಂಬಲ ಕೇಳುತ್ತಿದ್ದಾರೆ. ಸೋಲಿನ ಹತಾಶೆಯಿಂದ ಬಿಜೆಪಿಯವರು ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧರಾಗಿದ್ದಾರೆ ಎಂದು ಕಿಡಿ ಕಾರಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.