ಕಾಂಗ್ರೆಸ್ಸಿಗೆ 60 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: ಆಕಾಂಕ್ಷಿ ಸಂಖ್ಯೆ 2ಕ್ಕೆ ಇಳಿಸಲು ರಾಹುಲ್‌ ತಾಕೀತು

ಸಾಕಷ್ಟು ಪೂರ್ವಭಾವಿ ಕಸರತ್ತಿನ ನಂತರವೂ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಆಗಲಿಲ್ಲ. ದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಅಪೂರ್ಣಗೊಂಡಿದ್ದು, ಬುಧವಾರಕ್ಕೆ ಮುಂದೂಡಿಕೆ ಕಂಡಿದೆ. 

Karnataka Election 2023 Candidate selection for 60 constituencies is difficult for Congress gvd

ಬೆಂಗಳೂರು (ಏ.05): ಸಾಕಷ್ಟು ಪೂರ್ವಭಾವಿ ಕಸರತ್ತಿನ ನಂತರವೂ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಆಗಲಿಲ್ಲ. ದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಅಪೂರ್ಣಗೊಂಡಿದ್ದು, ಬುಧವಾರಕ್ಕೆ ಮುಂದೂಡಿಕೆ ಕಂಡಿದೆ. ರಾಜ್ಯ ನಾಯಕರು ‘ಪ್ಯಾನೆಲ್‌’ (ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಪಟ್ಟಿ) ಕುರಿತು ಚರ್ಚೆಗೆ ಮುಂದಾಗಿದ್ದರಿಂದ ಇಡೀ ಪ್ರಕ್ರಿಯೆಯನ್ನು ಮತ್ತೊಮ್ಮೆ ನಡೆಸುವಂತೆ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ. 

ಹೀಗಾಗಿ ಪಟ್ಟಿಪ್ರಕಟಣೆ ವಿಳಂಬಗೊಂಡಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ದೆಹಲಿಯಲ್ಲೇ ಸ್ಕ್ರೀನಿಂಗ್‌ ಕಮಿಟಿ ಸಭೆ ಮಂಗಳವಾರ ತಡರಾತ್ರಿಯವರೆಗೂ ನಡೆದಿದ್ದು, ‘ಪ್ಯಾನೆಲ್‌’ ಇದ್ದ ಕ್ಷೇತ್ರಗಳಿಗೆ ಎರಡು ಹೆಸರನ್ನು ಅಂತಿಮಗೊಳಿಸಲು ತೀವ್ರ ಕಸರತ್ತು ನಡೆಯಿತು. ಇದರ ಪರಿಣಾಮ ಕಾಂಗ್ರೆಸ್‌ ಎರಡನೇ ಪಟ್ಟಿಪ್ರಕಟ ತುಸು ತಡವಾಗುವ (ಏ.7 ಅಥವಾ ಅನಂತರ) ಸಾಧ್ಯತೆಯಿದೆ.

ಕಾಂಗ್ರೆಸ್‌ ಗೆದ್ದರೂ ಹೈಕಮಾಂಡ್‌ ಡಿಕೆಶಿಯನ್ನು ಸಿಎಂ ಮಾಡಲ್ಲ: ಸಿದ್ದರಾಮಯ್ಯ

ರಾಹುಲ್‌ ಗರಂ: ಮಂಗಳವಾರ ಬೆಳಗ್ಗೆ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಚುನಾವಣಾ ಸಮಿತಿ ಸಭೆಯಲ್ಲಿ ಒಂಟಿ ಹೆಸರುಗಳಿದ್ದ ಸುಮಾರು 39 ಕ್ಷೇತ್ರಗಳಿಗೆ ಒಪ್ಪಿಗೆ ನೀಡಲಾಯಿತು. ಆದರೆ, ಅನಂತರದ ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರಿನ ಪ್ಯಾನೆಲ್‌ ಅನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಇದನ್ನು ಗಮನಿಸಿದ ಮುಖಂಡ ರಾಹುಲ್‌ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ‘ಪಕ್ಷ ಇನ್ನೂ 100 ಕ್ಷೇತ್ರಗಳಿಗೆ ಅಭ್ಯರ್ಥಿ ಆಖೈರುಗೊಳಿಸಬೇಕಿದೆ. ಈ ಪೈಕಿ ಶೇ. 50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ‘ಪ್ಯಾನೆಲ್‌’ ಇದೆ. 

ಸಾಮಾನ್ಯವಾಗಿ ಸಿಇಸಿ ಸಭೆಗೆ ಪ್ರತಿ ಕ್ಷೇತ್ರಕ್ಕೆ ಒಂದು ಅಥವಾ ಎರಡು ಹೆಸರುಗಳ ಪಟ್ಟಿಬರಬೇಕು. ಆಗ ಚರ್ಚೆ ನಡೆಸಲು ಸಾಧ್ಯ. ಈಗಲೂ ಎರಡಕ್ಕಿಂತ ಹೆಚ್ಚು ಹೆಸರುಗಳೊಂದಿಗೆ ಸಭೆಗೆ ಬಂದರೆ ಸ್ಕ್ರೀನಿಂಗ್‌ ಕಮಿಟಿಯು ಇದುವರೆಗೂ ನಡೆಸಿದ ಪ್ರಕ್ರಿಯೆಗೆ ಏನರ್ಥ?’ ಎಂದು ಅವರು ಪ್ರಶ್ನಿಸಿದರು ಎನ್ನಲಾಗಿದೆ. ಅಲ್ಲದೆ, ‘ಮತ್ತೊಮ್ಮೆ ಪ್ರಕ್ರಿಯೆ ನಡೆಸಿ ಪ್ರತಿ ಕ್ಷೇತ್ರಕ್ಕೆ ಎರಡು ಹೆಸರುಗಳೊಂದಿಗೆ ಚುನಾವಣಾ ಸಮಿತಿಗೆ ಬನ್ನಿ’ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಸಭೆ ಬುಧವಾರ ಸಂಜೆ 4 ಗಂಟೆಗೆ ಮುಂದೂಡಿಕೆ ಕಂಡಿದೆ.

2ಕ್ಕೆ ಇಳಿಸುವ ಕಸರತ್ತು: ಇದಾದ ನಂತರ ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಸ್ಕ್ರೀನಿಂಗ್‌ ಕಮಿಟಿ ಸದಸ್ಯರು ಪ್ರತ್ಯೇಕವಾಗಿ ಸಭೆ ಸೇರಿ ಪ್ಯಾನೆಲ್‌ ಇದ್ದ ಕ್ಷೇತ್ರಗಳಿಗೆ ಹೆಸರನ್ನು ಎರಡಕ್ಕೆ ಇಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ವಿವಾದವಿರುವ ಕ್ಷೇತ್ರಗಳ ಬಗ್ಗೆ ಮತ್ತೊಮ್ಮೆ ಕಾರ್ಯಾಧ್ಯಕ್ಷರು ಹಾಗೂ ಸಂಬಂಧಪಟ್ಟಜಿಲ್ಲೆಯ ಸ್ಥಳೀಯ ನಾಯಕರು ಹಾಗೂ ಜಿಲ್ಲಾಧ್ಯಕ್ಷರ ಅಭಿಪ್ರಾಯವನ್ನು ಮತ್ತೊಮ್ಮೆ ದೂರವಾಣಿ ಮೂಲಕ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದು, ಇದು ತಡರಾತ್ರಿಯವರೆಗೂ ಮುಂದುವರೆಯಿತು ಎಂದು ಮೂಲಗಳು ಹೇಳಿವೆ.

ಎಸ್ಸಾರ್ಪಿ ಬಗ್ಗೆ ಡಿಕೆಶಿ-ಎಂಬಿಪಾ ಚಕಮಕಿ: ಹಿರಿಯ ನಾಯಕ ಎಸ್‌.ಆರ್‌. ಪಾಟೀಲ್‌ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕು ಎಂಬ ವಿಚಾರದ ಬಗ್ಗೆ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಹಿರಿಯ ನಾಯಕ ಎಂ.ಬಿ. ಪಾಟೀಲ್‌ ನಡುವೆ ತುಸು ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ಹೇಳಿವೆ. ಎಸ್‌.ಆರ್‌. ಪಾಟೀಲ್‌ ಅವರು ಬಾಗಲಕೋಟೆಯ ಬೀಳಗಿ ಕ್ಷೇತ್ರದ ಟಿಕೆಟ್‌ ಬಯಸಿದ್ದರು. ಆದರೆ, ಮಾಜಿ ಶಾಸಕ ಜಿ.ಟಿ. ಪಾಟೀಲ್‌ ಅವರ ಪ್ರಬಲ ಲಾಬಿ ಹಿನ್ನೆಲೆಯಲ್ಲಿ ಈ ಕ್ಷೇತ್ರ ಎಸ್‌.ಆರ್‌. ಪಾಟೀಲ್‌ ಅವರಿಗೆ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಮೂಡಿಬಂದಿತ್ತು. 

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

ಈ ಹಿನ್ನೆಲೆಯಲ್ಲಿ ವಿಜಯಪುರದ ದೇವರಹಿಪ್ಪರಗಿ ಕ್ಷೇತ್ರಕ್ಕೆ ಎಸ್‌. ಆರ್‌. ಪಾಟೀಲ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆ ಬಂದಿದೆ. ಇದಕ್ಕೆ ಎಂ.ಬಿ.ಪಾಟೀಲ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಶಿವಕುಮಾರ್‌ ಹಾಗೂ ಪಾಟೀಲ್‌ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios