ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ. ಹೀಗಂತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ. 

ಬೆಂಗಳೂರು (ಏ.04): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ. ಹೀಗಂತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿದೆ. ತನಗೆ ನೀಡಿದ ವಿಶೇಷ ಸಂದರ್ಶನದಲ್ಲಿ ‘ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ಆಕಾಂಕ್ಷಿ. ಆದರೆ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವರದಿ ಮಾಡಿದೆ.

ಅಲ್ಲದೆ, ಯುವ ಪೀಳಿಗೆಯ ನಾಯಕರಿಗೆ ಏಕೆ ಅವಕಾಶ ನೀಡಬಾರದು ಎಂಬ ಪ್ರಶ್ನೆಗೆ, ಇದು ನನ್ನ ಕಡೆಯ ಚುನಾವಣೆಯಾಗಿದೆ ಎಂದು 75 ವರ್ಷ ವಯಸ್ಸಿನ ಸಿದ್ದರಾಮಯ್ಯ ಹೇಳಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜತೆ ಸೇರಿ ಸರ್ಕಾರ ರಚಿಸುವುದಿಲ್ಲ. ಅದರ ಅಗತ್ಯವೂ ಇರುವುದಿಲ್ಲ. ಏಕೆಂದರೆ, ಕಾಂಗ್ರೆಸ್‌ ಸಂಪೂರ್ಣ ಸ್ವ ಸಾಮರ್ಥ್ಯದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಶಿವಮೊಗ್ಗ ಬಿಟ್ಟು ಹೋಗಲಾರದಷ್ಟು ಪ್ರಭಾವಿ ಈಶ್ವರಪ್ಪ: ಆಯನೂರು ಮಂಜುನಾಥ್‌

ಅಲ್ಲದೆ, ತಮ್ಮ ಕೋಲಾರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ ಒಪ್ಪಿದರೆ ಮಾತ್ರ ಕೋಲಾರದಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ತಮಗೆ ಈಗಾಗಲೇ ವರುಣದಿಂದ ಟಿಕೆಟ್‌ ದೊರಕಿದ್ದು, ವರುಣದಿಂದಲೇ ಸ್ಪರ್ಧಿಸಲಿದ್ದೇನೆ. ಆದರೆ, ಕೋಲಾರದಲ್ಲಿ ಸ್ಪರ್ಧಿಸಿದರೆ ಸುತ್ತಲಿನ 20 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಸ್ಥಳೀಯ ನಾಯಕರಿಂದ ಒತ್ತಾಯವಿದೆ. ಹೀಗಾಗಿ, ಈ ವಿಚಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹೈಕಮಾಂಡ್‌ ಒಪ್ಪಿದರೆ ಮಾತ್ರ ಕೋಲಾರದಿಂದ ಸ್ಪರ್ಧಿಸುವೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಿದ್ದರಾಮಯ್ಯ ಸಿಎಂ ಆಗಲೆಂದು ಹರಕೆ ಹೊತ್ತ ಅಭಿಮಾನಿಗಳು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿ, ಕಾಂಗ್ರೆಸ್‌ ಪಕ್ಷದ ಶರಣ ಬಸಪ್ಪಗೌಡ ದರ್ಶನಾಪೂರ್‌ ಅವರು ಚುನಾವಣೆಯಲ್ಲಿ ಶಾಸಕರಾಗಿ ಗೆಲುವು ಸಾಧಿಸಿ ಸಚಿವರಾಗಲಿ, ಸಿದ್ರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಲೆಂದು ಹರಕೆ ಹೊತ್ತ ಅವರ ಅಭಿಮಾನಿ ಬಳಗ ಶಹಾಪುರ ಶಬರಿಮಲೆಗೆ ಕಾಲ್ನಡಿಗೆ ಮೂಲಕ ತೆರಳಿದ್ದಾರೆ. 

ಶಹಾಪುರ ನಗರದ ಯುವ ಉದ್ಯಮಿ ಗುರು ಮಣಿಕಂಠ ಮತ್ತು ಬಸನಗೌಡ ಅವರು ದರ್ಶನಾಪೂರ್‌ ಮತ್ತು ಸಿದ್ದರಾಮಯ್ಯನವರ ಕಟ್ಟಾಭಿಮಾನಿಗಳಾಗಿದ್ದು, ಅವರ ಐದು ಜನರ ತಂಡ ಸಿದ್ದರಾಮಯ್ಯ ಹಾಗೂ ದರ್ಶನಾಪೂರ್‌ ಅವರಿದ್ದ ಭಾವಚಿತ್ರ ಕೈಯಲ್ಲಿಡಿದು ಶಬರಿಮಲೆ ಬೆಟ್ಟವನ್ನು ಸುಮಾರು 14 ಕಿ. ಮೀ. ಕಾಲ್ನಡಿಗೆ ಮೂಲಕ ಪಾದಯಾತ್ರೆ ನಡೆಸಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದು ಅಯ್ಯಪ್ಪ ಸ್ವಾಮಿಯ ಕೃಪಾಶಿರ್ವಾದದಿಂದ ನಮ್ಮೆಲ್ಲಾ ಕೋರಿಕೆಗಳು ಈಡೇರಿಸುವಂತೆ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿನೆ ಸಲ್ಲಿಸಿದ್ದಾರೆ ಎಂದು ಅಭಿಮಾನಿ ಬಳಗದವರು ತಿಳಿಸಿದ್ದಾರೆ. 

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

ಸಿದ್ರಾಮಯ್ಯನವರು ಸಿಎಂ ಆಗಬೇಕು ಮತ್ತು ಅವರ ಸಂಪುಟದಲ್ಲಿಯೇ ನಮ್ಮ ಶಾಸಕರಾದ ದರ್ಶನಾಪೂರ್‌ ಸಚಿವರಾಗಬೇಕೆಂಬುದು ನಮ್ಮ ಐದು ಜನರ ತಂಡ ಹರಕೆ ಹೊತ್ತಿದ್ದು, ಅವರ ಭಾವಚಿತ್ರದೊಂದಿಗೆ ಶಬರಿಮಲೆ ಬೆಟ್ಟಹತ್ತಿದ್ದು, ಅಯ್ಯಪ್ಪ ಸ್ವಾಮಿ ದೇಗುಲದ ಪವಿತ್ರ 18 ಮೆಟ್ಟಿಲನ್ನು ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ದರ್ಶನಾಪೂರ್‌ ಅಭಿಮಾನಿ ಬಳಗದ ಯುವ ಉದ್ಯಮಿ ಗುರು ಮಣಿಕಂಠ, ಸಿದ್ದು ದರ್ಶನಾಪೂರ್‌ ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.