ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಮಾಡಿದ ಮೋಸ, ಭ್ರಷ್ಟಾಚಾರಗಳನ್ನು ಜನರ ಮುಂದಿಟ್ಟು ಈ ಬಾರಿ ಚುನಾವಣೆಯಲ್ಲಿ ಮತ ಕೇಳಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. 

ಚಿಕ್ಕಮಗಳೂರು (ಏ.19): ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಮಾಡಿದ ಮೋಸ, ಭ್ರಷ್ಟಾಚಾರಗಳನ್ನು ಜನರ ಮುಂದಿಟ್ಟು ಈ ಬಾರಿ ಚುನಾವಣೆಯಲ್ಲಿ ಮತ ಕೇಳಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ಮಂಗಳವಾರ ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಮೀಸಲಾತಿ ಹೆಚ್ಚಳ ಮಾಡಲಿಕ್ಕೆ ಕಾಂಗ್ರೆಸ್ಸಿಗರು ಮೀನ ಮೇಷ ಎಣಿಸಿದರು. ಒಳಮೀಸಲಾತಿ ನಂಬಿಕೆ ಹುಟ್ಟಿಸಿ ದೋಖಾ ಮಾಡಿದರು. ನಾವು ನಂಬಿಕೆಗೆ ತಕ್ಕಂತೆ ನಡೆದುಕೊಂಡಿದ್ದೇವೆ. ಶೇ.15ರಷ್ಟಿದ್ದ ಪರಿ​ಶಿಷ್ಟ ಜಾತಿ ಒಳ​ಮೀ​ಸ​ಲಾ​ತಿ​ಯ​ನ್ನು ಶೇ.17ಕ್ಕೆ ಹೆಚ್ಚಳ ಮಾಡಿದ್ದೇವೆ. 

ಪರಿ​ಶಿಷ್ಟ ಪಂಗ​ಡ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದರು. ಒಳ ಮೀಸಲಾತಿ ಒಂದು ಸವಾಲಿನ ಸಂಗತಿ, ಮುಖ್ಯಮಂತ್ರಿಗಳು ಕಡೇ ಓವರ್‌ನ ಕಡೇ ಬಾಲ್‌ನಲ್ಲಿ ಸಿಕ್ಸರ್‌ ಹೊಡೆಯುವ ರೀತಿ ಐತಿಹಾಸಿಕ ಕ್ರಮ ಕೈಗೊಂಡರು. ಒಳ ಮೀಸಲಾತಿ ಕೂಗು ಎರಡೂವರೆ ದಶಕಗಳ ಬೇಡಿಕೆಯಾಗಿತ್ತು ಅದನ್ನು ಈಡೇರಿಸುವ ಕೆಲಸ ಮಾಡಿದ್ದಾರೆ. ಇದನ್ನು ಜನರ ಮುಂದಿಡುತ್ತೇವೆ ಎಂದರು. ಇದಲ್ಲದೆ ಕರ್ನಾಟಕವನ್ನು ಕಾಂಗ್ರೆಸ್ಸಿಗರು ಹೇಗೆ ಎಟಿಎಂ ಮಾಡಿಕೊಂಡಿದ್ದರು. ಅರ್ಕಾವತಿ ಹಗರಣದಲ್ಲಿ 8000 ಕೋಟಿ ರು. ಸರ್ಕಾರಕ್ಕೆ ನಷ್ಟವಾಗಿದೆ ಎಂದು ಕಾಂಗ್ರೆಸ್‌ ಸರ್ಕಾರವೇ ನೇಮಿಸಿದ್ದ ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ. 

ಮೀಸಲಾತಿ ವಿಚಾರದಲ್ಲಿ ಜನರಿಗೆ ಲಾಲಿಪಾಪ್‌ ನೀಡಿದ ಬಿಜೆಪಿ ಸರ್ಕಾರ: ಗೌರವ್‌ ವಲ್ಲಭ್‌

ಈ ನಷ್ಟಕ್ಕೆ ಹೊಣೆ ಯಾರು, ಹೀಗೆ ಹಾಸಿಗೆ, ದಿಂಬಿನಲ್ಲಿ, ಮರಳಿನಲ್ಲಿ, ಸಣ್ಣ ನೀರಾವರಿ, ಭಾರೀ ನೀರಾವರಿ ಇಲಾಖೆ ಹಗರಣಗಳಲ್ಲಿ ಹೇಗೆ ಭ್ರಷ್ಟಾಚಾರ ನಡೆಸಿದರು, ಎಂಎಲ್ಸಿ ಗೋವಿಂದ ರಾಜು ಡೈರಿ ಕತೆ ಏನು, ಕರ್ನಾಟಕಕ್ಕೆ ಹೇಗೆ ಮೋಸ ಮಾಡಿದರು ಎನ್ನುವುದನ್ನು ಜನರಿಗೆ ತಿಳಿಸುತ್ತೇವೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆ​ಸಿ​ದ​ರು. ಇದರ ಜೊತೆಗೆ ಕಾಂಗ್ರೆಸಿಗರು ಎಸ್‌ಡಿಪಿಐ, ಪಿಎಫ್‌ಐ ಜೊತೆ ಮಾಡಿಕೊಂಡಿದ್ದ ಮೈತ್ರಿಯಿಂದಾಗಿ ದೇಶದ ಕಾನೂನು ಮತ್ತು ಸಮಗ್ರತೆಗೆ ಹೇಗೆ ಹಾನಿಯುಂಟು ಮಾಡಿದೆ. ಕಾಂಗ್ರೆಸ್‌ ಮತ್ತು ಕೋಮುವಾದಿ ಸಂಘಟನೆಗಳ ನಡುವಿನ ನಂಟು ರಾಷ್ಟ್ರೀಯ ಹಿತಾಸಕ್ತಿಗೂ ವಿರುದ್ಧವಾದದ್ದು ಎಂಬುದನ್ನು ಜನರಿಗೆ ತಿಳಿಸುವವರಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ನನಗೆ ಲೆಕ್ಕಕ್ಕಿಲ್ಲ: ಶಾಸಕ ಎಂ.ಸತೀಶ್‌ ರೆಡ್ಡಿ

ಡಬಲ್‌ ಇಂಜಿನ್‌ ಸರ್ಕಾರದ ಲಾಭ ಕರ್ನಾಟಕದ ಜನತೆಗೆ ಹೇಗೆ ಆಗಿದೆ ಎನ್ನುವುದನ್ನ ಸ್ಪಷ್ಟ ಅಂಕಿ-ಅಂಶಗಳ ಸಮೇತ ಇಡುತ್ತೇವೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ 5300 ಕೋಟಿ ರು. ಹೆದ್ದಾರಿ, ರೈಲು ಯೋಜನೆಗಳು, ಮಹದಾಯಿ ಯೋಜನೆಗೆ ಅಂಗೀಕಾರ ದೊರಕಿಸಿದ್ದು ಇದೆಲ್ಲವೂ ಡಬಲ್‌ ಇಂಜಿನ್‌ ಸರ್ಕಾರದ ಸಮನ್ವಯದಿಂದ ಸಾಧ್ಯವಾಗಿರುವುದು ಜನರಿಗೂ ಗೊತ್ತಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ಮುಖಂಡರುಗಳಾದ ಈಶ್ವರಹಳ್ಳಿ ಮಹೇಶ್‌, ಕೆ.ಪಿ.ವೆಂಕಟೇಶ್‌, ಬೀಕನಹಳ್ಳಿ ಸೋಮಶೇಖರ್‌, ವರಸಿದ್ದಿ ವೇಣುಗೋಪಾಲ್‌, ಟಿ.ರಾಜಶೇಖರ್‌, ಕವಿತಾ ಶೇಖರ್‌ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.