ಕಾಂಗ್ರೆಸ್ ಗೆದ್ರೆ ಬಿಜೆಪಿ ಜಾರಿ ಮಾಡಿದ ಕಾಯ್ದೆಗಳು ರದ್ದು: ಕಾಂಗ್ರೆಸ್ ಪ್ರಣಾಳಿಕೆ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಪಿಎಂಸಿ ಸೇರಿದಂತೆ ಕೃಷಿ ತಿದ್ದುಪಡಿ ಕಾಯಿದೆ, ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಒಂದು ವರ್ಷದೊಳಗೆ ರದ್ದುಗೊಳಿಸಲಾಗುವುದು.
ಬೆಂಗಳೂರು (ಮೇ.03): ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಪಿಎಂಸಿ ಸೇರಿದಂತೆ ಕೃಷಿ ತಿದ್ದುಪಡಿ ಕಾಯಿದೆ, ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಒಂದು ವರ್ಷದೊಳಗೆ ರದ್ದುಗೊಳಿಸಲಾಗುವುದು. ಜತೆಗೆ ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಿಗೆ ರಾಜ್ಯದಲ್ಲೇ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದೆ. ತನ್ಮೂಲಕ ರಾಜ್ಯದಲ್ಲಿ ಈಗಾಗಲೇ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ- 2020 ಬದಲಿಸುವ ವಾಗ್ದಾನ ನೀಡಿದೆ.
ಕರ್ನಾಟಕ ಸರ್ಕಾರವು 2021ರ ಆಗಸ್ಟ್‌ನಲ್ಲಿ ಈ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ಮೂಲಕ ಎನ್‌ಇಪಿ ಜಾರಿಗೊಳಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅದರ ಅಡಿಯಲ್ಲಿ ಅಧ್ಯಯನ ನಡೆಸಿದ ಎರಡು ಬ್ಯಾಚ್‌ಗಳ ವಿದ್ಯಾರ್ಥಿಗಳು ಈಗಾಗಲೇ ಪಾಸ್‌ಔಟ್ ಆಗಿದ್ದಾರೆ. ಈಗ ಈ ಶಿಕ್ಷಣ ಪದ್ಧತಿಯನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿರುವುದು ಕುತೂಹಲ ಮೂಡಿಸಿದೆ. ಇನ್ನು ಬಿಜೆಪಿ ಹಾಳು ಮಾಡಿರುವ ಪಠ್ಯವನ್ನೂ ಸರಿಪಡಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಗೌಡ್ರ ಹುಡ್ಗ ಸಿಕ್ರೆ ನೋಡಿ, ಮದುವೆ ಆಗುವೆ: ರಮ್ಯಾ
ರೈತ, ಕಾರ್ಮಿಕ ವಿರೋಧಿ ಕಾನೂನು ರದ್ದು: ಬಿಜೆಪಿ ಜಾರಿಗೆ ತಂದಿರುವ ಎಲ್ಲಾ ಜನ ವಿರೋಧಿ ಕಾನೂನುಗಳನ್ನು ಒಂದು ವರ್ಷದಲ್ಲಿ ರದ್ದುಗೊಳಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಕಾರ್ಮಿಕ, ರೈತರಿಗೆ ಸಮಸ್ಯೆಯಾಗುವ ಕಾಯಿದೆಗಳನ್ನು ಬದಲಿಸುವುದಾಗಿ ಹೇಳಿದೆ. ಕನಿಷ್ಠ ಕೂಲಿ ಕಾಯಿದೆ ಜಾರಿ ಮಾಡದಿರುವುದು, ಗುತ್ತಿಗೆ ನೌಕರಿ, ದಿನಗೂಲಿ ನೌಕರಿಗೆ ಅನುಮತಿ ನೀಡುವ ಕಾಯಿದೆಗಳನ್ನು ಕಾಂಗ್ರೆಸ್ ವಿರೋಧದ ನಡುವೆಯೂ ಬಿಜೆಪಿ ಜಾರಿಗೆ ತಂದಿತ್ತು. ಇದೀಗ ಇವುಗಳನ್ನು ಬದಲು ಮಾಡುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಜತೆಗೆ ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಎಲ್ಲಾ ಪ್ರಕರಣ ಹಿಂಪಡೆಯಲಾಗುವುದು ಎಂದು ಘೋಷಿಸಿದೆ.
ಭ್ರಷ್ಟಾಚಾರ ರಹಿತ ಸರ್ಕಾರ ಕಾಂಗ್ರೆಸ್‌ನ ಗುರಿ: ಡಿ.ಕೆ.ಶಿವಕುಮಾರ್
ಹಳೆ ಪಿಂಚಣಿ ಯೋಜನೆ ಜಾರಿ: 2006 ರಿಂದ ನೇಮಕವಾದ ಪಿಂಚಣಿಗೆ ಅನರ್ಹತೆಯುಳ್ಳ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಲು ಸಹಾನುಭೂತಿ ನಿರ್ಧಾರ ಕೈಗೊಳ್ಳುವುದಾಗಿಯೂ ಕಾಂಗ್ರೆಸ್ ಹೇಳಿದೆ. ತನ್ಮೂಲಕ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಪರೋಕ್ಷ ಆಶ್ವಾಸನೆ ನೀಡಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.