ಗೌಡ್ರ ಹುಡ್ಗ ಸಿಕ್ರೆ ನೋಡಿ, ಮದುವೆ ಆಗುವೆ: ರಮ್ಯಾ
ಹಲವು ವರ್ಷಗಳ ಬಳಿಕ ಮಂಡ್ಯ ರಾಜಕೀಯ ಅಖಾಡಕ್ಕಿಳಿದ ಮಾಜಿ ಸಂಸದೆ, ನಟಿ ರಮ್ಯಾ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರೊಂದಿಗೆ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಸಂಚಲನ ಮೂಡಿಸಿದರು.
ಮಂಡ್ಯ (ಮೇ.03): ಹಲವು ವರ್ಷಗಳ ಬಳಿಕ ಮಂಡ್ಯ ರಾಜಕೀಯ ಅಖಾಡಕ್ಕಿಳಿದ ಮಾಜಿ ಸಂಸದೆ, ನಟಿ ರಮ್ಯಾ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರೊಂದಿಗೆ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಸಂಚಲನ ಮೂಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್ ಗಣಿಗ ಪರ ಪ್ರಚಾರ ನಿಮಿತ್ತ ನಗರಕ್ಕೆ ಆಗಮಿಸಿದ್ದ ರಮ್ಯಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಕ್ರಿಯ ರಾಜಕಾರಣಕ್ಕೆ ಬರು ವುದಾಗಲಿ, ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆಯಾಗಲಿ ನಾನಿನ್ನೂ ಆಲೋಚಿಸಿಲ್ಲ.
ಸದ್ಯಕ್ಕೆ ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ಮಂಡ್ಯಕ್ಕೆ ಬಂದಿದ್ದೇನೆ ಎಂದಷ್ಟೆ ಹೇಳಿದರು. ಇದೇ ವೇಳೆ ತಮ್ಮ ಮದುವೆ ಬಗ್ಗೆ ಮಾತನಾಡಿದ ಅವರು, ಮದುವೆಯಾಗೋಕೆ ನಾನು ರೆಡಿ ಇದ್ದೇನೆ. ನನಗೆ ಮೊದಲು ಹುಡುಗನನ್ನು ಹುಡುಕಿಕೊಡಿ. ಅದರಲ್ಲೂ ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನನಗೂ ಹುಡುಗನನ್ನು ನೋಡಿ ನೋಡಿ ಸಾಕಾಗಿದೆ. ನನ್ನಿಷ್ಟದ ಹುಡುಗ ಎಲ್ಲಿಯೂ ಕಾಣಿಸುತ್ತಲೇ ಇಲ್ಲ. ಅದಕ್ಕಾಗಿ ನೀವೇ ಹುಡುಕಿಕೊಡಿ. ಇಲ್ಲದಿದ್ದರೆ ಮಂಡ್ಯದಲ್ಲಿ ಸ್ವಯಂವರನೇ ಮಾಡಿ ಎಂದು ಹೇಳಿ ರಮ್ಯಾ ನಸುನಕ್ಕರು.
5 ಗ್ಯಾರಂಟಿ ಸೇರಿ 'ಕೈ' 576 ಭರವಸೆ: ‘ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ’ ಪ್ರಣಾಳಿಕೆ ಬಿಡುಗಡೆ
ದುಡಿಮೆಗಾಗಿ ಸಿನಿಮಾ: ಸಿನಿಮಾ, ರಾಜಕೀಯ ಬಿಟ್ಟು ತುಂಬಾ ವರ್ಷಗಳಾಗಿದೆ. ಈಗ ದುಡಿಯಬೇಕು ಎಂಬ ಉದ್ದೇಶದಿಂದ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹೇಳಿದರು. ದುಡಿಮೆ ಮಾಡಬೇಕೆಂಬ ಕಾರಣಕ್ಕೆ ನಾನು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ. ನನ್ನದೇ ಸಿನಿಮಾ ಸಂಸ್ಥೆ ಸ್ಥಾಪಿಸಿ ಚಿತ್ರ ನಿರ್ಮಿಸುತ್ತಿದ್ದೇನೆ. ನಾನೀಗ ಉತ್ತರಕಾಂಡ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿದ್ದೇನೆ. ಸಿನಿಮಾ ರಂಗದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದೇನೆ ಎಂದರು. ನಾನು ಯಾವಾಗಲೂ ಮಂಡ್ಯದವಳೇ. ಗೌಡತಿ ಪಟ್ಟವನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗುವುದಿಲ್ಲ. ನಮ್ಮ ತಾಯಿ ಊರು ಮಂಡ್ಯ. ನಮ್ಮ ತಂದೆ ಸತ್ತಿದ್ದು ಇಲ್ಲೇ.
ನನ್ನನ್ನು ಲೋಕಸಭೆಗೆ ಅಭ್ಯರ್ಥಿ ಮಾಡಿದ್ದು ಮಂಡ್ಯ ಜಿಲ್ಲೆಯ ಜನ. ಇಲ್ಲಿನ ಜನರು ನನ್ನನ್ನು ಬೆಂಬಲಿಸಿದ್ದಾರೆ. ಈ ಅಭಿಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ, ಅದು ಕಮ್ಮಿಯೂ ಆಗುವುದಿಲ್ಲ. ಮಂಡ್ಯ ಜೊತೆ ನನ್ನ ಕೇವಲ ರಾಜಕೀಯವಾಗಷ್ಟೇ ಅಲ್ಲ, ಮಂಡ್ಯ ನನಗೆ ಕುಟುಂಬವಿದ್ದಂತೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಂಡ್ಯದಲ್ಲಿ ತೊಟ್ಟಿಮನೆ ಮಾಡಿ ಇಲ್ಲೇ ಉಳಿಯುತ್ತೇನೆ ಎಂದಿದ್ದೀರಲ್ಲ ಎಂದಾಗ, ಗೋಪಾಲಪುರದಲ್ಲಿ ನನ್ನ ತಾತ ಕಟ್ಟಿಸಿದ ತೊಟ್ಟಿಮನೆ ಇದೆ. ನನಗೂ ಒಂದು ತೊಟ್ಟಿಮನೆ ಮಾಡಬೇಕೆಂಬ ಆಸೆ ಈಗಲೂ ನನಗಿದೆ. ಅದು ಇವತ್ತು, ನಾಳೆ, ಯಾವಾಗ ಆಗುತ್ತೆ ಅಂತಾ ಗೊತ್ತಿಲ್ಲ.
ತೊಟ್ಟಿ ಮನೆ ನಿರ್ಮಿಸಬೇಕೆಂಬ ಆಸೆಯಂತೂ ಉತ್ಕಟವಾಗಿದೆ ಎಂದು ನುಡಿದರು. ಮಂಡ್ಯ ಜಿಲ್ಲೆಯ ಜನರು ತುಂಬಾ ಬುದ್ಧಿವಂತರು. ನನಗಿಂತ ಮುಂಚೆ ಮಂಡ್ಯ ಜನ ರಾಜಕೀಯ ನೋಡಿಕೊಂಡು ಬಂದಿದ್ದಾರೆ. ಯಾರು ಮೋಸ ಮಾಡ್ತಾರೆ, ಯಾರು ಒಳ್ಳೆಯವರಿದ್ದಾರೆ ಎಂದೆಲ್ಲಾ ಮಂಡ್ಯ ಜನರಿಗೆ ಗೊತ್ತು. ನಾನು ಚುನಾವಣೆಯಲ್ಲಿ ಸೋತೆ ಎಂಬ ಕಾರಣಕ್ಕೆ ಮಂಡ್ಯ ಬಿಟ್ಟು ಹೋಗಿಲ್ಲ. ಸೋತ ಮೇಲೂ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ರಾಹುಲ್‌ಗಾಂಧಿ ಬಂದಿದ್ದಾಗ ನಾನೂ ಸಹ ಬಂದಿದ್ದೆ. ಪುಟ್ಟಣ್ಣಯ್ಯ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಸೋತ ಮೇಲೆ ಪುಟ್ಟಣ್ಣಯ್ಯ ಅವರು ಪಾಂಡಪುರದಲ್ಲಿ ಸಭೆ ಮಾಡಿದ್ದರು.
ಬಿಜೆಪಿ ಕಾಲದಲ್ಲಿ ಎಲ್ಲಾ ದುಬಾರಿ, ರೈತರಿಗೆ ಸಂಕಷ್ಟ: ಪ್ರಿಯಾಂಕಾ ಗಾಂಧಿ ಕಿಡಿ
ಅದೇ ಸಮಯದಕ್ಕೆ ನನ್ನನ್ನು ದೆಹಲಿಗೆ ಕರೆದು ಪಕ್ಷದ ಜವಾಬ್ದಾರಿ ಕೊಟ್ಟಾಗ ನಾನು ಹೋಗಲೇಬೇಕಾಗಿತ್ತು. 2017ರಲ್ಲಿ ನಾನು ದೆಹಲಿಗೆ ಹೋದೆ. 2019ರಲ್ಲಿ ನನಗೆ ಹುಷಾರಿರಲಿಲ್ಲ, ಆಗ ನಾನು ಪಕ್ಷ ನೀಡಿದ ಹುದ್ದೆಗೆ ರಾಜೀನಾಮೆ ನೀಡಿದೆ. ಆನಂತರದಲ್ಲಿ ಸಿನಿಮಾ, ರಾಜಕೀಯದಿಂದ ದೂರವಾಗಿದ್ದೆ. ಈಗ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜಕೀಯಕ್ಕೆ ಸ್ಟಾರ್ ಪ್ರಚಾರಕಿಯಾಗಿ ಬರುತ್ತಿದ್ದೇನೆ ಎಂದು ನುಡಿದರು. ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ, ಪತ್ನಿ ಸೌಂದರ್ಯ ಹಾಗೂ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.