ಯಶವಂತಪುರ ಟಿಕೆಟ್ ಕೈತಪ್ಪಿದ ಹಿನ್ನಲೆ: ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ನಟಿ ಭಾವನಾ

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಚುನಾವಣೆಯ ದಿನಾಂಕ ನಿಗದಿಯಾದ ಮೇಲೆ ಎಲ್ಲಾ ಪಕ್ಷಗಳಿಂದಲೂ ಅಬ್ಬರದ ಪ್ರಚಾರ ನಡೆಯುತ್ತಿದೆ. ಟಿಕೆಟ್ ಪಕ್ಕಾ ಆಗಿರುವ ಅಭ್ಯರ್ಥಿಗಳು ಮತದಾರರ ಓಲೈಕೆಯಲ್ಲಿ ತೊಡಗಿದ್ದರೆ, ಟಿಕೆಟ್‌ಗಾಗಿ ಪಕ್ಷದ ನಾಯಕರ ಮೊರೆ ಹೋಗುತ್ತಿದ್ದಾರೆ.

Karnataka Election 2023 Actress Bhavana visited Siddaramaiahs residence gvd

ಬೆಂಗಳೂರು (ಏ.07): ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಚುನಾವಣೆಯ ದಿನಾಂಕ ನಿಗದಿಯಾದ ಮೇಲೆ ಎಲ್ಲಾ ಪಕ್ಷಗಳಿಂದಲೂ ಅಬ್ಬರದ ಪ್ರಚಾರ ನಡೆಯುತ್ತಿದೆ. ಟಿಕೆಟ್ ಪಕ್ಕಾ ಆಗಿರುವ ಅಭ್ಯರ್ಥಿಗಳು ಮತದಾರರ ಓಲೈಕೆಯಲ್ಲಿ ತೊಡಗಿದ್ದರೆ, ಟಿಕೆಟ್‌ಗಾಗಿ ಪಕ್ಷದ ನಾಯಕರ ಮೊರೆ ಹೋಗುತ್ತಿದ್ದಾರೆ. ಹೌದು! ನಿನ್ನೆಯಷ್ಟೇ (ಗುರುವಾರ) ಕಾಂಗ್ರೆಸ್‌ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಶವಂತಪುರ ಕ್ಷೇತ್ರದಲ್ಲಿ ಬಾಲರಾಜ್ ಗೌಡಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ನಟಿ ಭಾವನಾ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ. ಯಶವಂತಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾವನಾ, ಶಿವಾನಂದ ವೃತ್ತದ ಸರ್ಕಾರಿ ನಿವಾಸಕ್ಕೆ ಆಗಮಿಸಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಟಿಕೆಟ್ ಕೈ ತಪ್ಪಲು ಕಾರಣವೆನೆಂದು ಕೇಳಿದ್ದಾರೆಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಮೊರೆ ಹೋದ ಅಖಂಡ ಶ್ರೀನಿವಾಸ ಮೂರ್ತಿ: ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲೂ ಅಖಂಡ ಶ್ರೀನಿವಾಸ ಮೂರ್ತಿಗೆ ಇನ್ನೂ ಟಿಕೆಟ್ ಘೋಷಣೆಯಾಗದ ಬೆನ್ನಲೇ ಅವರು ಸಿದ್ದರಾಮಯ್ಯ ಮೊರೆ ಹೋಗಿದ್ದು, ಇಂದು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ನಿಮ್ಮನ್ನೇ ನಂಬಿ ಪಕ್ಷಕ್ಕೆ ಬಂದು ಅತಿ ಹೆಚ್ಚು ಅಂತರದಿಂದ ಗೆದ್ದವನು. ಅಲ್ಪ ಸಂಖ್ಯಾತರು ಯಾರೂ ನನ್ನ ಮೇಲೆ ಮುನಿಸಿಕೊಂಡಿಲ್ಲ.ಬೇಕಿದ್ದರೆ ಮನೆ ಮನೆಗೆ ಹೋಗಿ ಅಭಿಪ್ರಾಯ ಸಂಗ್ರಹಿಸಿ ನೀವೇ ನಿರ್ಧರಿಸಿ, ಸ್ಥಳೀಯರು ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯಗೆ ಅಖಂಡ ಶ್ರೀನಿವಾಸ ಮೂರ್ತಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಾಂಗ್ರೆಸ್‌ ಪಟ್ಟಿಯಲ್ಲಿ ಪ್ರಭಾವಿಗಳ ಮಕ್ಕಳಿಗೆ ಮಣೆ: ಧರಂಸಿಂಗ್‌, ಮಂಜುಪುತ್ರನಿಗೆ ಟಿಕೆಟ್‌

ಭುಗಿಲೆದ್ದ ಕಾಂಗ್ರೆಸ್‌ ಬಂಡಾಯ: ಕಾಂಗ್ರೆಸ್‌ನ ಎರಡನೇ ಪಟ್ಟಿಬಿಡುಗಡೆಯಾದ ಬೆನ್ನಲ್ಲಿಯೇ ರಾಜ್ಯದ ಹಲವೆಡೆ ಅಸಮಾಧಾನ ಭುಗಿಲೆದ್ದಿದ್ದು, ಕಿತ್ತೂರು, ಮಂಡ್ಯ, ಚನ್ನಗಿರಿ, ಗೋಕಾಕ್‌ಗಳಲ್ಲಿ ಟಿಕೆಟ್‌ ವಂಚಿತರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಚಿತ್ರದುರ್ಗದಲ್ಲಿ ರಘು ಆಚಾರ್‌, ಗಂಗಾವತಿಯಲ್ಲಿ ಎಚ್‌.ಆರ್‌.ಶ್ರೀನಾಥ್‌, ನಿಪ್ಪಾಣಿಯಲ್ಲಿ ಉತ್ತಮ ಪಾಟೀಲ್‌, ಮೊಳಕಾಲ್ಮೂರಿನಲ್ಲಿ ಯೋಗೀಶ್‌ ಬಾಬು ಅವರು ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಚಿತ್ರದುರ್ಗದಲ್ಲಿ ಟಿಕೆಟ್‌ ತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌, ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ಸಿಗೆ ಮತ ಹಾಕದಂತೆ ವಿಶ್ವಕರ್ಮ ಸಮಾಜದಿಂದ ಹೋರಾಟ ನಡೆಸುತ್ತೇನೆ. 

ಏ.17 ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿಗೆ ಟಿಕೆಟ್‌ ನೀಡಿದ್ದಕ್ಕೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಹಾಗೂ ವಿಪ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸುಳಿವು ನೀಡಿದ್ದಾರೆ. ನಿಪ್ಪಾಣಿಯಲ್ಲಿ ಕಾಕಾಸಾಹೇಬ್‌ ಪಾಟೀಲ್‌ಗೆ ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಜಾರಕಿಹೊಳಿ ಕುಟುಂಬದ ಆಪ್ತರಾಗಿರುವ ಉತ್ತಮ ಪಾಟೀಲ್‌ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ. 

ಶಾಸಕಿ ಸೌಮ್ಯಾ ರೆಡ್ಡಿ ಕಾರಿನಲ್ಲಿ 20 ಸೀರೆ, 14 ಮೊಬೈಲ್‌ಗಳು ಪತ್ತೆ: ದೂರು ದಾಖಲು

ಇದೇ ವೇಳೆ, ಮೊಳಕಾಲ್ಮೂರು ಕ್ಷೇತ್ರದ ’ಕೈ’ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ಟಿಕೆಟ್‌ ಆಕಾಂಕ್ಷಿ ಡಾ.ಯೋಗೀಶ್‌ ಬಾಬು ಅವರ ಆಕ್ರೋಶ ಹೊರಬಿದ್ದಿದ್ದು, ಪಕ್ಷೇತರರಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.  ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios