ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕ್ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಭದ್ರತಾ ಪಡೆಗಳೊಂದಿಗೆ ಕಾಂಗ್ರೆಸ್ ಪಕ್ಷ ನಿಲ್ಲುವುದಾಗಿ ತಿಳಿಸಿದ್ದಾರೆ. ದೇಶದ ಹಿತಾಸಕ್ತಿ ಕಾಯುವ ಸೈನಿಕರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ. ರಾಯಚೂರಿನಲ್ಲಿ ನಿಗದಿಯಾಗಿದ್ದ ಬೆಲೆ ಏರಿಕೆ ವಿರೋಧಿ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ.

ನವದೆಹಲಿ (ಮೇ 07): ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ‘ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳ ಪರ ನಿಲ್ಲುತ್ತೇವೆ’ ಎಂದು ತಿಳಿಸಿದ್ದಾರೆ.

ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಶಿವಕುಮಾರ್ ಅವರು ಎಕ್ಸ್ ಖಾತೆ ಮೂಲಕ ಸ್ವಾಗತಿಸಿದ್ದಾರೆ. 'ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಹೇಡಿತನದ ಕೃತ್ಯಕ್ಕೆ ಆಪರೇಶನ್ ಸಿಂಧೂರ ಉತ್ತಮ ಪ್ರತ್ಯುತ್ತರವಾಗಿದೆ' ಎಂದು ತಿಳಿಸಿದ್ದಾರೆ. ನವದೆಹಲಿಯಲ್ಲಿ ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ಭದ್ರತಾ ಪಡೆಗಳ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ಅವರು ದೇಶದ ಘನತೆ, ಹಿತಾಸಕ್ತಿಯನ್ನು ಕಾಪಾಡುತ್ತಿದ್ದು, ಅವರಿಗೆ ನಾವೆಲ್ಲರೂ ನಮಿಸೋಣ. ಈ ಸಂದರ್ಭದಲ್ಲಿ ನಾವು ಅವರ ಬೆನ್ನಿಗೆ ನಿಲ್ಲೋಣ. ಕಾಂಗ್ರೆಸ್ ಪಕ್ಷ ದೇಶದ ಹಿತರಕ್ಷಣೆ ವಿಚಾರದಲ್ಲಿ ಸೇನೆ ಬೆನ್ನಿಗೆ ನಿಂತು ಬೆಂಬಲ ನೀಡಲಿದೆ” ಎಂದು ತಿಳಿಸಿದರು.

ಕರ್ನಾಟಕದ ಪ್ರಜೆಗಳು ಪೆಹಲ್ಗಮ್ ದಾಳಿಯಲ್ಲಿ ಮೃತಪಟ್ಟಿದ್ದರ ಬಗ್ಗೆ ಕೇಳಿದಾಗ, 'ನಮ್ಮ ರಾಜ್ಯ ಮಾತ್ರವಲ್ಲ, ದೇಶದ ಇತರೆ ಭಾಗಗಳ ಜನರು ಮೃತರಾಗಿದ್ದರು. ಈ ವಿಚಾರದಲ್ಲಿ ಕೇವಲ ಕರ್ನಾಟಕ ಎಂದು ನೋಡಬಾರದು, ಇಡೀ ದೇಶವೇ ಒಂದು ಎಂದು ನೋಡಬೇಕು. ನಾವೆಲ್ಲರೂ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು, ಅದೇ ರೀತಿ ಒಟ್ಟಾಗಿ ನಿಂತಿದ್ದೇವೆ' ಎಂದರು.

ಪಹಲ್ಗಾಮ್ ದಾಳಿಯಲ್ಲಿ ಮೃತರ ಕುಟುಂಬದವರು ಈ ಆಪರೇಷನ್ ನಿಂದ ನೆಮ್ಮದಿ ಪಡೆಯುವರೇ?, ವಿರೋಧ ಪಕ್ಷ ಕೂಡ ಸರ್ಕಾರದ ಬೆನ್ನಿಗೆ ನಿಂತಿದೆಯಲ್ಲವೇ ಎಂದು ಕೇಳಿದಾಗ, 'ಹೌದು, ನಾವು ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನಿಂತಿದ್ದೇವೆ. ಬೆಲೆ ಏರಿಕೆ ವಿಚಾರವಾಗಿ ಇಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಅದನ್ನು ನಾವು ರದ್ದುಗೊಳಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಹೀಗಾಗಿ ಈ ಪ್ರತಿಭಟನಾ ಸಮಾವೇಶವನ್ನು ಮುಂದೂಡಿದ್ದೇವೆ' ಎಂದು ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಏನು ಪೋಸ್ಟ್ ಮಾಡಿದ್ದಾರೆ ಎಂಬ ಮಾಹಿತಿ, ಇದೆಯೋ ಇಲ್ಲವೋ ಎಂಬುದರ ಬಗ್ಗೆ ಮಾತನಾಡಿಲ್ಲ. ರಾಜ್ಯ ಕಾಂಗ್ರೆಸ್‌ನಿಂದ ಶಾಂತು ಮಂತ್ರವನ್ನು ಪಠಣೆ ಮಾಡಿದರೆ, ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಬೆಂಬಲಿಸಿ ಟ್ವೀಟ್ ಮಾಡಿಕೊಂಡಿದ್ದಾರೆ. ಒಟ್ಟಾರೆ ಡಿ.ಕೆ.ಶಿವಕುಮಾರ್ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಟ್ವಿಟರ್ ಹ್ಯಾಂಡಲ್ ಮಾಡುವವರು, ಪಕ್ಷದ ನಾಯಕರ ಅನುಮತಿ ಪಡೆಯದೇ ಕಾರ್ಯ ನಿರ್ಹಿಸುತ್ತಿದ್ದಾರೆಯೇ? ಅಥವಾ ಕಾಂಗ್ರೆಸ್ ನಾಯಕರೇ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆಯೇ? ಅನುಮಾನಗಳು ಕೂಡ ವ್ಯಕ್ತವಾಗಿವೆ. ಈ ಬಗ್ಗೆ ವಿರೋಧ ಪಕ್ಷದ ಬಿಜೆಪಿ ನಾಯಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕರ್ನಾಟಕ ಕಾಂಗ್ರೆಸ್‌ನಿಂದ 'ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ - ಮಹಾತ್ಮ ಗಾಂಧಿ' ಎಂದು ಟ್ವೀಟ್ ಮಾಡಲಾಗಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಡಿಲೀಟ್ ಮಾಡಲಾಗಿದೆ. 'ಗಾಂಧಿ ಅವರ ಸಂದೇಶ ಅದು. ಆದರೆ, ಪೋಸ್ಟ್ ಮಾಡಿರುವ ಟೈಮ್ ಸರಿಯಲ್ಲ. ನಮ್ಮದು ಶಾಂತಿಯುತ ರಾಷ್ಟ್ರ. ಅಗತ್ಯ ಬಿದ್ದಾಗ ಯುದ್ಧ ಮಾಡಿದ್ದೆವು. ಇನ್ನು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು ಸರಿಯಲ್ಲ' ಎಂದು ಈ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.