Asianet Suvarna News Asianet Suvarna News

ರಾಜ್ಯದ ಸಾಲ 5.4ಲಕ್ಷ ಕೋಟಿಗೆ ಹೆಚ್ಚಳ: ಕೃಷ್ಣ ಬೈರೇಗೌಡ ಆತಂಕ

ರಾಜ್ಯದ ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದ ರಾಜ್ಯದ ಒಟ್ಟು ಆದಾಯದ ಶೇ.26.6 ರಷ್ಟು ಹಣವನ್ನು ಕೇವಲ ಬಡ್ಡಿ ಹಾಗೂ ಸಾಲ ಮರುಪಾವತಿಗೆ ವೆಚ್ಚಿಸಬೇಕಾಗಿದೆ. ಪ್ರಸ್ತುತ ಸಾಲ 5.40 ಲಕ್ಷ ಕೋಟಿ ಮುಟ್ಟಿದ್ದು, ಇದನ್ನು ನಿಯಂತ್ರಿಸದಿದ್ದರೆ ರಾಜ್ಯದ ಭವಿಷ್ಯದ ಹಣಕಾಸಿನ ಸ್ಥಿತಿ ಮತ್ತಷ್ಟುಬಿಗಡಾಯಿಸಲಿದೆ ಎಂದು ಕಾಂಗ್ರೆಸ್‌ ಸದಸ್ಯ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. 

karnataka debt to increase to 5 4 lakh crore Krishna Byre Gowda worried gvd
Author
First Published Dec 30, 2022, 8:54 PM IST

ವಿಧಾನಸಭೆ (ಡಿ.30): ರಾಜ್ಯದ ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದ ರಾಜ್ಯದ ಒಟ್ಟು ಆದಾಯದ ಶೇ.26.6 ರಷ್ಟು ಹಣವನ್ನು ಕೇವಲ ಬಡ್ಡಿ ಹಾಗೂ ಸಾಲ ಮರುಪಾವತಿಗೆ ವೆಚ್ಚಿಸಬೇಕಾಗಿದೆ. ಪ್ರಸ್ತುತ ಸಾಲ 5.40 ಲಕ್ಷ ಕೋಟಿ ಮುಟ್ಟಿದ್ದು, ಇದನ್ನು ನಿಯಂತ್ರಿಸದಿದ್ದರೆ ರಾಜ್ಯದ ಭವಿಷ್ಯದ ಹಣಕಾಸಿನ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಕಾಂಗ್ರೆಸ್‌ ಸದಸ್ಯ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಪೂರಕ ಅಂದಾಜುಗಳ ಮೇಲಿನ ಚರ್ಚೆ ವೇಳೆ ರಾಜ್ಯದ ಹಣಕಾಸು ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ಆರ್‌ಬಿಐ ಹಾಗೂ ಸಿಎಜಿ ಪ್ರಕಾರವೇ ರಾಜ್ಯದ ಒಟ್ಟು ಆದಾಯದ ಶೇ.26.6ರಷ್ಟು ಕೇವಲ ಬಡ್ಡಿ ಹಾಗೂ ಸಾಲ ಮರು ಪಾವತಿಗೆ ವೆಚ್ಚಾಗುತ್ತಿದೆ. 

2023-24ಕ್ಕೆ .35,091 ಕೋಟಿ ಬಡ್ಡಿ ಮರು ಪಾವತಿ ಮಾಡಬೇಕಿದೆ. ಪ್ರತಿ ವರ್ಷ ಸಾಲ ಹೆಚ್ಚಾದಂತೆ 2025-26ರ ವೇಳೆಗೆ .75 ಸಾವಿರ ಕೋಟಿ ಸಾಲ ಮತ್ತು ಬಡ್ಡಿ ಮರು ಪಾವತಿಗೆ ಹೋಗುತ್ತದೆ. ಇದಕ್ಕೆ ಕೇಂದ್ರದಿಂದ ಅನುದಾನ, ತೆರಿಗೆ ಪಾಲಿನಲ್ಲಿ ಆಗುತ್ತಿರುವ ತಾರತಮ್ಯವೇ ಕಾರಣ ಎಂದು ದೂರಿದರು. 2ನೇ ಅತಿ ಹೆಚ್ಚು ತೆರಿಗೆ ನೀಡುವ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ತೀವ್ರ ಅನ್ಯಾಯ ಮಾಡುತ್ತಿದೆ. ನಮ್ಮಿಂದ ಕಸಿದ ತೆರಿಗೆಯನ್ನು ಬೇರೆಯವರಿಗೆ ಹಂಚುತ್ತಿದೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಅನುದಾನ ನೀಡಲು ನಮ್ಮ ಆಕ್ಷೇಪವಿಲ್ಲ. ಆದರೆ ದೇಶಕ್ಕೆ ಹೆಚ್ಚು ತೆರಿಗೆ ನೀಡುವ ಚಿನ್ನದ ಮೊಟ್ಟೆಕೊಡುವ ಕೋಳಿಯಂಥ ನಮ್ಮ ರಾಜ್ಯವನ್ನು ಉಳಿಸುವ ಪ್ರಯತ್ನವನ್ನಾದರೂ ಮಾಡಬೇಕು. ದುಂಬಿ ರಸ ಹೀರುವಾಗ ಹೂವು ಸಾಯಬಾರದು ಎಂದು ಸೂಚ್ಯವಾಗಿ ಹೇಳಿದರು.

ಜೈಲಿನಲ್ಲಿ ಅಕ್ರಮ ಚಟುವಟಿಕೆ ಸಹಿಸಲ್ಲ: ಗೃಹಸಚಿವ ಆರಗ ಜ್ಞಾನೇಂದ್ರ

5 ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಹೆಚ್ಚಳ: 2018ರಲ್ಲಿ 2.41 ಲಕ್ಷ ಕೋಟಿಗಳಿದ್ದ ಸಾಲದ ಪ್ರಮಾಣ ಪ್ರಸ್ತುತ .5.40 ಲಕ್ಷ ಕೋಟಿ ಆಗಿದೆ. 5 ವರ್ಷದಲ್ಲಿ .3 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಕಳೆದ ವರ್ಷ .63 ಸಾವಿರ ಕೋಟಿಗಿಂತ ಹೆಚ್ಚು ಸಾಲ ಮಾಡಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು. ಅಧಿಕಾರಿಗಳ ಪ್ರಕಾರ .80,633 ಕೋಟಿ ಸಾಲ ಮಾಡಲಾಗಿದೆ. ಒಂದೊಮ್ಮೆ ಕೇಂದ್ರದ ಜಿಎಸ್‌ಟಿ ಪರಿಹಾರವನ್ನೂ ಸಾಲದಲ್ಲಿ ಸೇರಿಸಿದ್ದರೂ ಅಂಕಿ-ಅಂಶಗಳು ಹೊಂದಾಣಿಕೆ ಆಗುವುದಿಲ್ಲ ಎಂದು ಹೇಳಿದರು. ಕೇಂದ್ರವು ರಾಜ್ಯದಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಶೇ.41 ರಷ್ಟನ್ನು ರಾಜ್ಯಗಳಿಗೆ ನಡಬೇಕು. ಆದರೆ, ಶೇ.27-28 ರಷ್ಟುಮಾತ್ರ ನೀಡುತ್ತಿದೆ. ಉಳಿದ ಮೊತ್ತವನ್ನು ಕೇಂದ್ರವೇ ಇಟ್ಟುಕೊಳ್ಳುತ್ತಿದೆ. 

ಜತೆಗೆ ಸೆಸ್‌, ಸರ್‌ಚಾರ್ಜನ್ನು ಪೂರ್ಣ ಪ್ರಮಾಣದಲ್ಲಿ ಕೇಂದ್ರವೇ ಇಟ್ಟುಕೊಳ್ಳುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗಿ ರಾಜ್ಯದ ಮೇಲೆ ಹೊರೆ ಹೆಚ್ಚಾಗುತ್ತಿದೆ. ಪರಿಣಾಮ ಸಾಲ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯದ ಒಟ್ಟು ಆದಾಯದ ಶೇ.14.3 ರಷ್ಟುಬಡ್ಡಿ ಪಾವವತಿಗೆ ಹೋಗುತ್ತಿದೆ. ಛತ್ತೀಸ್‌ಗಡದಲ್ಲಿ ಈಪ್ರಮಾಣ ಶೇ.8, ಮಹಾರಾಷ್ಟ್ರದಲ್ಲಿ ಶೇ.11.4, ಒರಿಸ್ಸಾದಲ್ಲಿ ಶೇ.4.3 ರಷ್ಟುಮಾತ್ರ ಇದೆ. ಅನಿವಾರ್ಯ ಸಂದರ್ಭದಲ್ಲಿ ಸಾಲ ಮಾಡಿರಬಹುದು. ಆದರೆ ಇದರ ನಿರ್ವಹಣೆ ಸರಿಯಾಗಿ ಆಗಲಿಲ್ಲ. ಇದರಿಂದ ರಾಜ್ಯದ ಭವಿಷ್ಯದ ಹಣಕಾಸಿನ ಸ್ಥಿತಿ ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರದಿಂದ ಅನ್ಯಾಯ: ಕೇಂದ್ರದ ತೆರಿಗೆ ಹಂಚಿಕೆ ವೇಳೆ ಶೇ.1.3 ರಷ್ಟುಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ನಮಗಿಂತ ಕಡಿಮೆ ತೆರಿಗೆಪಾವತಿಸುವ ಬಿಹಾರಕ್ಕೆ ಶೇ.9.6 ರಷ್ಟುಪಾಲು ನೀಡಲಾಗುತ್ತಿದೆ. ತನ್ಮೂಲಕ ನಮಗಿಂತ ಎಂಟು ಪಟ್ಟು ಹೆಚ್ಚು ಪ್ರಮಾಣದ ತೆರಿಗೆ ನೀಡಲಾಗುತ್ತಿದೆ. ನಮಗಿಂತ ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುವ ಬಗ್ಗೆ ಆಕ್ಷೇಪವಿಲ್ಲ. ಆದರೆ, ನಮ್ಮನ್ನು ಹಾಳು ಮಾಡಿ ಕೊಡಬೇಕಾಗಿಲ್ಲ ಎಂದು ಕಿಡಿ ಕಾರಿದರು.

ಬಿಜೆಪಿ ಅ​ಧಿಕಾರ ಬಂದ ಮೇಲೆ ಹೆಚ್ಚಿದ ದಾರಿದ್ರ್ಯ: ಶಾಸಕ ಶರತ್‌ ಬಚ್ಚೇಗೌಡ

ಉ.ಪ್ರ., ಬಿಹಾರಕ್ಕೆ ರಾಜ್ಯದ ತೆರಿಗೆ ಹಂಚಿಕೆ: ನಮ್ಮಂತಹ ಆದಾಯ ಹೊಂದಿರುವ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯನ್ನು ಬಿಹಾರ, ಉತ್ತರ ಪ್ರದೇಶದಂತಹ ಬಡ ರಾಜ್ಯಗಳಿಗೆ ಹಂಚಿಕೆ ಮಾಡುವುದು 60ರ ದಶಕದಿಂದಲೂ ಬಂದಿರುವ ರೂಢಿ. ಇದನ್ನು ನಮ್ಮ ಸರ್ಕಾರ ಪ್ರಾರಂಭಿಸಿರುವುದು ಅಲ್ಲ. ಆದರೆ, 3-4 ದಶಕಗಳಿಂದಲೂ ಲಕ್ಷಾಂತರ ಕೋಟಿ ನೀಡುತ್ತಿದ್ದರೂ ಅವರು ಉದ್ಧಾರ ಆಗಿಲ್ಲ ಎಂದಾರೆ ಕೊಡುವುದರಲ್ಲಿ ಏನರ್ಥವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌ನಲ್ಲೂ ಪ್ರಸ್ತಾಪಿಸಲಾಗಿದೆ ಎಂದರು.

Follow Us:
Download App:
  • android
  • ios