ನಾಲ್ಕು ದಿನಗಳ ಕಾಲ ಆಂಧ್ರದಲ್ಲಿ ನಡೆಯಲಿರುವ ಯಾತ್ರೆಯ ಖರ್ಚು-ವೆಚ್ಚ ಭರಿಸಲಿರುವ ಕರ್ನಾಟಕ ಕಾಂಗ್ರೆಸ್‌ 

ಬೆಂಗಳೂರು(ಅ.16): ರಾಜ್ಯದಲ್ಲಿ ಸೆ.30ರಂದು ಪ್ರಾರಂಭವಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಯು ಇಂದು(ಭಾನುವಾರ) ಆಂಧ್ರಪ್ರದೇಶ ಪ್ರವೇಶಿಸಲಿದ್ದು, ನಾಲ್ಕು ದಿನಗಳ ಕಾಲ ಆಂಧ್ರದಲ್ಲಿ ನಡೆಯಲಿರುವ ಯಾತ್ರೆಯ ಖರ್ಚು-ವೆಚ್ಚಗಳನ್ನೂ ರಾಜ್ಯ ಕಾಂಗ್ರೆಸ್‌ ಭರಿಸಲಿದೆ.

ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಯು ಅ.20ರಂದು ರಾಯಚೂರಿಗೆ ಪ್ರವೇಶಿಸುವ ಮೊದಲು ಭಾನುವಾರದಿಂದ ನಾಲ್ಕು ದಿನಗಳ ಕಾಲ ಆಂಧ್ರದಲ್ಲಿ ಸಂಚರಿಸಲಿದೆ. ಆದರೆ, ನಾಲ್ಕು ದಿನಗಳ ಪಾದಯಾತ್ರೆಗೆ ಅಗತ್ಯ ಆರ್ಥಿಕ ಸಂಪನ್ಮೂಲ ನಮ್ಮ ಬಳಿ ಇಲ್ಲ. ಹೀಗಾಗಿ ಪಕ್ಷವೇ ನೆರವು ನೀಡಬೇಕು ಎಂದು ಆಂಧ್ರಪದೇಶ ಕಾಂಗ್ರೆಸ್‌ ಸಮಿತಿ ಹೇಳಿದ್ದು, ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಕಾಂಗ್ರೆಸ್‌ ಆಂಧ್ರ ಪಾದಯಾತ್ರೆಯ ಖರ್ಚು- ವೆಚ್ಚಗಳನ್ನೂ ಭರಿಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಳ್ಳಾರೀಲಿ ಕಾಂಗ್ರೆಸ್‌ ಅಬ್ಬರ: 'ಕೈ' ಪಾಳೆಯಕ್ಕೆ ಹುಮ್ಮಸ್ಸು

ರಾಜ್ಯದಲ್ಲಿ ಸೆ.30ರಿಂದ ಅ.21ರ ನಡುವೆ 19 ದಿನಗಳ ಕಾಲ ಹಮ್ಮಿಕೊಂಡಿದ್ದ ಯಾತ್ರೆಯಲ್ಲಿ ಬದಲಾವಣೆ ಮಾಡಿ ಹದಿನೈದು ದಿನಗಳಿಗೆ ಸೀಮಿತಗೊಳಿಸಲಾಗಿತ್ತು. ಅ.19ರಂದು ಬಳ್ಳಾರಿಯಲ್ಲಿ ನಡೆಯಬೇಕಿದ್ದ ರಾಜ್ಯಮಟ್ಟದ ಸಮಾವೇಶ ಶನಿವಾರ ಮುಕ್ತಾಯಗೊಂಡಿದೆ. ಪರಿಣಾಮ ಆಂಧ್ರಪ್ರದೇಶದಲ್ಲಿ ಕೇವಲ ಎರಡು ದಿನಗಳಿಗೆ ಮೊಟಕಾಗಿದ್ದ ಪಾದಯಾತ್ರೆ ನಾಲ್ಕು ದಿನಗಳಿಗೆ ವಿಸ್ತರಣೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 13 ದಿನಗಳ ಪಾದಯಾತ್ರೆ ಮುಗಿಸಿರುವ ರಾಹುಲ್‌ ಗಾಂಧಿ ನೇತೃತ್ವದ ತಂಡ ಅ.20 ಹಾಗೂ 21 ರಂದು ರಾಯಚೂರಿಗೆ ಆಗಮಿಸಲಿದೆ. ಇದರ ನಡುವೆ ನಾಲ್ಕು ದಿನಗಳ ಕಾಲ ಆಂಧ್ರಪ್ರದೇಶದಲ್ಲಿ ಯಾತ್ರೆ ನಡೆಸಲಿದ್ದು, ಎಲ್ಲಾ ಸಿದ್ಧತೆಗಳನ್ನೂ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸಮಿತಿ ನೋಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.