ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಮೊದಲ ಸಲ ಬೆಂಗಳೂರಿಗೆ ಆಗಮನ, ಏರ್‌ಪೋರ್ಟಿಂದ ರ‍್ಯಾಲಿ, ಬಳಿಕ ಅಭಿನಂದನಾ ಸಭೆ

ಬೆಂಗಳೂರು(ಅ.29): ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿಯ ಅಧ್ಯಕ್ಷ ಹುದ್ದೆ ಅಲಂಕರಿಸಿದ ಬಳಿಕ ನ.6ರಂದು ಮೊದಲ ಬಾರಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ವೇಳೆ ಅಭೂತಪೂರ್ವ ಸ್ವಾಗತದ ಜತೆಗೆ ಅದ್ಧೂರಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲು ಕೆಪಿಸಿಸಿ ಸಿದ್ಧತೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ.17ರಂದು ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 6,825 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು, ದೆಹಲಿಯಲ್ಲಿ ಪದಗ್ರಹಣ ಕಾರ್ಯಕ್ರಮವೂ ನಡೆದಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಾಯಿನಾಡಿಗೆ ವಾಪಸ್ಸಾಗುತ್ತಿರುವ ಖರ್ಗೆ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಕೆಪಿಸಿಸಿ ನಿರ್ಧರಿಸಿದೆ.

ನ.6ರಂದು ಬೆಳಗ್ಗೆ 8 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಿಂದ ನೇರವಾಗಿ ಕೆಪಿಸಿಸಿ ಕಚೇರಿಗೆ ಆಗಮಿಸಲಿದ್ದು, ಕೆಪಿಸಿಸಿ ಕಚೇರಿವರೆಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಬೃಹತ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಮನ್‌ಮೋಹನ್ ಸಿಂಗ್ 2.0 ವರ್ಶನ್ ಖರ್ಗೆ, ನೂತನ ಅಧ್ಯಕ್ಷರ ಟೀಕಿಸಿದ ನಾಯಕನಿಗೆ ಗೇಟ್‌ಪಾಸ್!

ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕರು ಹಾಗೂ ಮುಖಂಡರ ಭೇಟಿ ಮಾಡಲಿದ್ದಾರೆ. ಹಿರಿಯ ನಾಯಕರೊಂದಿಗೆ ಸಭೆಯನ್ನೂ ನಡೆಸಲಿದ್ದಾರೆ. ಬಳಿಕ ಬಳಿಕ ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ಅರಮನೆಯಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಅಭಿನಂದನಾ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಖರ್ಗೆ 'ಕೈ'ಯಲ್ಲಿ ಅಧಿಕಾರ: ಏನಾಗಲಿದೆ ರಾಜ್ಯ ಕಾಂಗ್ರೆಸ್ ಚಿತ್ರಣ?

ಬೆಂಗಳೂರಿನ ಅಭಿನಂದನಾ ಕಾರ್ಯಕ್ರಮ ಮುಗಿದ ಬಳಿಕ ಹುಬ್ಬಳ್ಳಿಯಲ್ಲಿ ಮತ್ತೊಂದು ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಈ ಬಗ್ಗೆ ದಿನಾಂಕ ಹಾಗೂ ರೂಪುರೇಷೆಗಳು ಇನ್ನೂ ಅಂತಿಮವಾಗಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ನ.6ರಂದು ಬೆಂಗಳೂರಿಗೆ ಆಗಮಿಸಲಿರುವ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಏನು ಕಾರ‍್ಯಕ್ರಮ?

- ನ.6ರ ಬೆಳಗ್ಗೆ 8ಕ್ಕೆ ಕೆಂಪೇಗೌಡ ಅಂ.ರಾ. ಏರ್‌ಪೋರ್ಟ್‌ಗೆ ಮಲ್ಲಿಕಾರ್ಜುನ ಖರ್ಗೆ ಆಗಮನ
- ಏರ್‌ಪೋರ್ಟ್‌ನಿಂದ ಕರ್ನಾಟಕ ಕಾಂಗ್ರೆಸ್‌ ಸಮಿತಿ ಕಚೇರಿಯ ವರೆಗೆ ಬೃಹತ್‌ ಮೆರವಣಿಗೆ
- ಕೆಪಿಸಿಸಿ ಕಚೇರಿಯಲ್ಲಿ ಖರ್ಗೆ ಅವರಿಂದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಜತೆ ಸಭೆ
- ಬಳಿಕ ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ
- ಹುಬ್ಬಳ್ಳಿಯಲ್ಲೂ ಮತ್ತೊಂದು ಸಮಾವೇಶ ನಡೆಸಲು ನಿರ್ಧಾರ. ದಿನಾಂಕ ಇನ್ನೂ ನಿಗದಿ ಇಲ್ಲ