ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡದ ಬಗ್ಗೆ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಧಾನ ಹೊರಹಾಕುತ್ತಿದ್ದಾರೆ. ಆ ಬಗ್ಗೆ ಮಾತನಾಡದಂತೆ ಬಿ.ಎಲ್‌.ಸಂತೋಷ್‌ ಅವರು ಬಿಜೆಪಿಗರಿಗೆ ಫರ್ಮಾನು ಹೊರಡಿಸಿದ್ದಾರೆ. ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ. ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರು ಏನು ಎಂದು ಪ್ರಶ್ನಿಸಿದ ಕಾಂಗ್ರೆಸ್‌ 

ಬೆಂಗಳೂರು(ಸೆ.02): ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು, ಕಾಂಗ್ರೆಸ್‌ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಶತಮಾನದ ಜೋಕ್‌ ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್‌ನ 40ರಿಂದ 45 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಬಿ.ಎಲ್‌.ಸಂತೋಷ್‌ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡದ ಬಗ್ಗೆ ಬಿಜೆಪಿ ಶಾಸಕರು, ನಾಯಕರು ಬಹಿರಂಗವಾಗಿಯೇ ಅಸಮಧಾನ ಹೊರಹಾಕುತ್ತಿದ್ದಾರೆ. ಆ ಬಗ್ಗೆ ಮಾತನಾಡದಂತೆ ಬಿ.ಎಲ್‌.ಸಂತೋಷ್‌ ಅವರು ಬಿಜೆಪಿಗರಿಗೆ ಫರ್ಮಾನು ಹೊರಡಿಸಿದ್ದಾರೆ. ತಮ್ಮಲ್ಲಿನ ಹುಳುಕುಗಳೇ ಕೊಳೆತು ನಾರುತ್ತಿದೆ. ಅದನ್ನು ಸರಿಪಡಿಸುವ ಯೋಗ್ಯತೆ ಇಲ್ಲದವರು ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿ ಸಾಧಿಸುವುದಾದರು ಏನು ಎಂದು ಪ್ರಶ್ನಿಸಿದೆ.

ಸಂತೋಷ್‌ ಮೊದ್ಲು ತಮ್ಮವರನ್ನೇ ಪಕ್ಷದಲ್ಲಿ ಉಳಿಸಿಕೊಳ್ಳಲಿ: ಜಗದೀಶ್‌ ಶೆಟ್ಟರ್‌

ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಡ್ಡು ಹೊಡೆದು ಬಿ.ಎಲ್‌.ಸಂತೋಷ್‌ ಅವರು ನಡೆಸಿದ ಸಭೆಗೆ ಬಿ.ಎಸ್‌.ಯಡಿಯೂರಪ್ಪ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ. ವಿ.ಸೋಮಣ್ಣ, ಎಸ್‌.ಟಿ.ಸೋಮಶೇಖರ್‌, ಶಂಕರ ಪಾಟೀಲ್‌ ಮುನೇನಕೊಪ್ಪ, ಶಿವರಾಂ ಹೆಬ್ಬಾರ್‌, ಎಂ.ಪಿ.ರೇಣುಕಾಚಾರ್ಯ ಹೀಗೆ ಹಲವರು ಗೈರಾಗಿದ್ದರು. ಬಿ.ಎಲ್‌.ಸಂತೋಷ್‌ ಅವರೇ, ಮೊದಲು ನಿಮ್ಮವರನ್ನು ಸಂಪರ್ಕಿಸಲು ಪ್ರಯತ್ನಿಸಿ. ಸುಳ್ಳು ಹೇಳಿಕೊಂಡು ತಿರುಗುವ ಮೊದಲು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಮತ್ತು ವಿಶ್ವಾಸವನ್ನು ಹೊಂದಲು ಪ್ರಯತ್ನಿಸಿ ಎಂದು ಹೇಳಿದೆ.

ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ಕರ್ನಾಟಕ ಬಿಜೆಪಿ ಮುಳುಗಿರುವ ಹಡಗು. ಬಿ.ಎಲ್‌.ಸಂತೋಷ್‌ ಅವರು ಸೀ ಡೈವರ್‌ ಥರ ಸಮುದ್ರದಲ್ಲಿ ಮುಳುಗಿ ರಾಜ್ಯ ಬಿಜೆಪಿಯನ್ನು ಮೇಲೆತ್ತಲಿ. ಅವರ ಪಕ್ಷ ಸರಿಯಿದ್ದಿದ್ದರೆ ಅವರ ಶಾಸಕರು ನಮ್ಮ ಪಕ್ಷದ ಕಡೆ ಯಾಕೆ ಬರುತ್ತಾರೆ. ಬಿ.ಎಲ್‌.ಸಂತೋಷ್‌ ಅವರ ಸಭೆಗೆ ಬಿ.ಎಸ್‌.ಯಡಿಯೂರಪ್ಪ ಸೇರಿ ಹಲವರು ಹೋಗಿಲ್ಲ ಎಂಬ ಮಾಹಿತಿಯಿದೆ. ಹೀಗೆ ಮುಂದುವರಿದರೆ ಬಿ.ಎಲ್‌.ಸಂತೋಷ್‌ ಸಭೆ ಮಾಡಿದರೆ, ಅದರಲ್ಲಿ ಯಾರೂ ಭಾಗಿಯಾಗುವುದಿಲ್ಲ ಎಂದು ತಿಳಿಸಿದರು.