ಬೆಂಗಳೂರು, (ಮಾ.09):  ಪೆಟ್ರೋಲ್ ಹಾಗೂ ಡೀಸೆಲ್ ಮತ್ತು ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ

ಇನ್ನು ಈ ಬಗ್ಗೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರಣಿ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಅವರು ಮಾಡಿರುವ ಸರಣಿ ಟ್ವೀಟ್ ಈ ಕೆಳಗಿನಂತಿದೆ ನೋಡಿ.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮುಖ್ಯ ಕಾರಣ. ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷ್ಕರುಣೆಯಿಂದ ಹೇರುತ್ತಿರುವ ತೆರಿಗೆಗಳು ಕಾರಣ. ಬಿಜೆಪಿ ದುರಾಡಳಿತಕ್ಕೆ ಸಿಕ್ಕಿ ದೇಶದ ಜನ ನರಳಾಡುತ್ತಿದ್ದಾರೆ 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 125 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ 57 ರೂಪಾಯಿ ಇತ್ತು. ಈಗ ಕಚ್ಚಾತೈಲ ಬೆಲೆ  ಬ್ಯಾರಲ್ ಗೆ ಕೇವಲ 54.77 ಡಾಲರ್ ಇರುವಾಗ  ಪೆಟ್ರೋಲ್ ಬೆಲೆ 94ರಿಂದ 100 ರೂಪಾಯಿ ಆಗಿದೆ. ಇದೆನಾ ನಿಮ್ಮ ಅಚ್ಚೇ ದಿನ್?

ಕಳೆದ ವರ್ಷ ಇದೇ ದಿನ ದೇಶದಲ್ಲಿ ಪೆಟ್ರೋಲ್ ಗೆ ರೂ.75 ಹಾಗೂ ಡೀಸೆಲ್ ಗೆ ರೂ.67 ಇತ್ತು. ಒಂದೇ ವರ್ಷದಲ್ಲಿ ಸುಮಾರು ರೂ.20 ಏರಿದೆ. ಮನಮೋಹನ್ ಸಿಂಗ್ ನೇತ್ರತ್ವದ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ತುಸು ಏರಿಕೆಯಾದರೂ ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರು ಈಗೆಲ್ಲಿ ಅಡಗಿ ಕೂತಿದ್ದಾರೆ?

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕಾರಣ ಎಂದು ಸಬೂಬು ಕೊಡುವ ಬಿಜೆಪಿ ನಾಯಕರು, ಮೋದಿ ಅಧಿಕಾರಕ್ಕೆ ಬಂದರೆ ಡಾಲರ್ ಮೌಲ್ಯವನ್ನು ರೂ.20 ಕ್ಕೆ ಇಳಿಸ್ತೀವಿ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ.

2013 ರಲ್ಲಿ ಒಂದು ಡಾಲರ್ ಮೌಲ್ಯ  54.94 ರೂಪಾಯಿಯಾಗಿತ್ತು. ಇಂದು ಡಾಲರ್ ಮೌಲ್ಯ 73 ರೂಪಾಯಿಯಾಗಿದೆ. 2014 ರ ನಂತರ  ರೂಪಾಯಿ ಮೌಲ್ಯ ಕುಸಿಯಲು ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತ ಕಾರಣವಲ್ಲವೇ ?

ಕೇಂದ್ರ ಸರ್ಕಾರ 2015 ರಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮೇಲೆ ರೂ.9.20 ಹಾಗೂ ಡೀಸೆಲ್ ಮೇಲೆ ರೂ.3.45 ಅಬಕಾರಿ ಸುಂಕ ವಿಧಿಸುತ್ತಿತ್ತು. ಈ ವರ್ಷ ಪೆಟ್ರೋಲ್ ಮೇಲೆ ರೂ.32.98 ಹಾಗೂ ಡೀಸೆಲ್ ಮೇಲೆ ರೂ.31.84 ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಹಾಗಾದರೆ ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರ ಕಾರಣವೋ ಅಥವಾ ತೆರಿಗೆ ಹಚ್ಚಳವೋ?

ಪೆಟ್ರೋಲ್ ಬೆಲೆ ರಾಮನ ಭಾರತದಲ್ಲಿ ರೂ.93, ಸೀತೆಯ ನೇಪಾಳದಲ್ಲಿ ರೂ.53 ರಾವಣನ ಲಂಕೆಯಲ್ಲಿ ರೂ.51 ಇದೆ ಅಂತ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯಂ ಸ್ವಾಮಿ ಅವರೇ ತಮ್ಮ ಟ್ವೀಟ್ ನಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆ ಇದೆಯಾ?

2013-14 ರಲ್ಲಿ ಭಾರತ 184 ಮಿಲಿಯನ್ ಟನ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿತ್ತು, ಇದು 2019-20 ರಲ್ಲಿ 228 ಮಿಲಿಯನ್ ಟನ್ ಗೆ ಏರಿಕೆಯಾಗಿದೆ. ಕಚ್ಚಾತೈಲ ಆಮದಿನಲ್ಲಿ ಶೇ.10 ಕಡಿಮೆಯಾದರೂ ದೇಶ ಅಭಿವೃದ್ಧಿಯಾಗಿಬಿಡುತ್ತೆ ಅಂದಿದ್ದ ಮೋದಿಯವರು ಕಚ್ಚಾತೈಲಕ್ಕಾಗಿ ವಿದೇಶಿ ಅವಲಂಬನೆ ಕಡಿಮೆ ಮಾಡಲು ಈವರೆಗೆ ಮಾಡಿದ್ದಾದರೂ ಏನು?