* ರಾಜ್ಯದಲ್ಲಿ ಕೆಲವು ಸಂಘಟನೆಗಳು ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿವೆ* ಸಿಎಂ ಬಸವರಾಜ್ ಬೊಮ್ಮಾಯಿ ಮೂಕ ಬಸವಣ್ಣ ಆಗಿದ್ದಾರೆ* ಎಲ್ಲದಕ್ಕೂ ಕೋರ್ಟಗೆ ಹೋಗಿ ಅನ್ನೋದಾದ್ರೆ ವಿಧಾನಸೌಧ ಯಾಕೆ ಬೇಕು ? ವಿಧಾನಸೌಧಕ್ಕೆ ಬೆಂಕಿ ಹಚ್ಚಿ ಸುಟ್ಟಾಕಿ
ಶರಣಯ್ಯ ಹಿರೇಮಠ ಏಷ್ಯಾನೆಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ(ಏ. 6):- ರಾಜ್ಯದಲ್ಲಿ ಕೆಲವು ಸಂಘಟನೆಗಳು ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿವೆ. ಆದ್ರೂ ಸಿಎಂ ಬಸವರಾಜ್ ಬೊಮ್ಮಾಯಿ ಮೂಕ ಬಸವಣ್ಣ ಆಗಿದ್ದಾರೆ. ಎಲ್ಲದಕ್ಕೂ ಕೋರ್ಟಗೆ ಹೋಗಿ ಎನ್ನುವುದಾದ್ರೆ ವಿಧಾನ ಸೌಧ ಆದ್ರೂ ಯಾಕೆ ಬೇಕು ? ಬೆಂಕಿ ಹಚ್ಚಿ ಸುಟ್ಟು ಹಾಕ್ಬಿಡಿ ವಿಧಾನ ಸೌಧವನ್ನ.. ಹೀಗೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ.
ಕಲಬುರ್ಗಿಯಲ್ಲಿ ಎಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ ಖರ್ಗೆ, ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಸಂಪೂರ್ಣ ಶೂನ್ಯವಾಗಿದೆ. ಇದನ್ನು ಮರೆಮಾಚಲು ಅನಗತ್ಯ ಇಲ್ಲದ ಇಸ್ಯೂಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋಮುವಾದ, ಎಮೋಶನಲ್ ಇಸ್ಯೂಗಳ ಮೇಲೆ ಚುನಾವಣೆ ಎದುರಸುವುದೇ ಬಿಜೆಪಿ ತಂತ್ರವಾಗಿದೆ. ಯುಪಿ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಮಾಡಿದ್ದನ್ನೇ ಕರ್ನಾಟಕದಲ್ಲೂ ಮಾಡಲು ಹೊರಟಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ , ಸರಕಾರದ ಸಾಧನೆಗಳ ಬಗ್ಗೆ ಮಾತನಾಡುವುದು ಬಿಟ್ಟು ಹಲಾಲ್, ಹಿಜಾಬ್, ಮಸೀದಿ ಮೈಕ್ ಗಳ ಮೇಲಿನ ಮೈಕ್ ಗಳ ಬಗ್ಗೆ ಮಾತಾಡ್ತಿದಾರೆ ಎಂದರು.
ಸಿಟಿ ರವಿ ವಿರುದ್ದ ಆಕ್ರೋಶ
ಹಲಾಲ್ ಎಕನಾಮಿಕಲ್ ಜಿಹಾದ್ ಅಂತ ಸಿಟಿ ರವಿ ಹೇಳ್ತಾರೆ. ಹಿಂದೂಗಳು ಹಲಾಲ್ ಪ್ರೊಡಕ್ಟ್ ಖರೀದಿ ಮಾಡಬೇಡಿ, ಆರ್ಥಿಕ ಸಂಘರ್ಷ ಮಾಡಿ ಅಂತ ರವಿ ಹೇಳ್ತಿದಾರೆ. ಹಾಗಾದ್ರೆ ಬಿಜೆಪಿಗೆ ಹತ್ತಿರವಿರುವ ಅದಾನಿ, ಟಾಟಾ, ಪತಂಜಲಿ, ಡಾಬರ್ ಇಂಡಿಯಾ ಇನ್ನಿತರ ಕಂಪೆನಿಗಳು ಹಲಾಲ್ ಸರ್ಟಿಫಿಕೆಟ್ ಪಡೆದುಕೊಂಡು ವಿದೇಶಗಳಿಗೆ ತಮ್ಮ ಪ್ರಾಡಕ್ಟ್ ರಫ್ತು ಮಾಡ್ತಿಲ್ಲವಾ ? ಈ ವಿಚಾರಗಳು ಬಂದಾಗ ಸಿಟಿ ರವಿ ಅವರು ಯಾಕೆ ಸುಮ್ಮನಿರ್ತಾರೆ ? ಹಲಾಲ್ ಸರ್ಟಿಫಿಕೆಟ್ ಪಡೆಯುವ ಈ ಕಂಪೆನಿಗಳು ದೇಶದ್ರೋಹಿಗಳು ಅಂತ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ? ನಿಮ್ಮ ಹಿಂದೂತ್ವ ಕೇವಲ ನಾಲಿಗೆ ಮೇಲಿದೆ.. ವ್ಯಾಪಾರದ ವಿಚಾರಕ್ಕೆ ಬಂದ್ರೆ ನಿಮಗೆ ಲಾಭ ಮುಖ್ಯ ಹಿಂದೂತ್ವ ಅಲ್ಲ ಎಂದು ಪ್ರೀಯಾಂಕ್ ಖರ್ಗೆ ಕಿಡಿಕಾರಿದರು.
ರಾಜ್ಯದ ಇಮೇಜ್ ಗೆ ಧಕ್ಕೆ
ರಾಜ್ಯದಲ್ಲಿ ಸಾಮರಸ್ಯ ಕೆಡುತ್ತಿರುವುದರಿಂದ ಪಕ್ಕದ ಆಂದ್ರಪ್ರದೇಶ ಸರಕಾರ ನಮ್ಮಲ್ಲಿ ಬಂಡವಾಳ ಹೂಡಿ ಎಂದು ಕರೆ ನೀಡುತ್ತಿದೆ. ಬೇರೆ ಕಡೆ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ. ಪಕ್ಕದ ರಾಜ್ಯದವರು ನಮ್ಮ ರಾಜ್ಯವನ್ನು ಹಿಯಾಳಿಸುತ್ತಿದ್ದಾರೆ. ಈಗಲೂ ಮೌನಿಯಾದ್ರೆ ಹೇಗೆ ಸಿಎಂ ಸಾಹೇಬ್ರೆ ? ಈಗಲಾದ್ರೂ ಮಾತಾಡಿ. ನೀವು ಮೂಕ ಬಸವಣ್ಣ ಆಗಿದ್ದಿರಿ ಎಂದು ಪ್ರೀಯಾಂಕ್ ಖರ್ಗೆ ಸಿಎಂ ಬೊಮ್ಮಾಯಿ ಅವರನ್ನು ಕುಟುಕಿದರು.
ಹೈಕಮಾಂಡ್ ಮುಂದೆ ನಿಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ರಾಜ್ಯದ ಇಮೇಜ್ ಗೆ ಧಕ್ಕೆ ತರುತ್ತಿದ್ದಿರಿ. ನಿಮಗೆ ಹಿಂದುತ್ವದ ಬಗ್ಗೆ ಅಷ್ಟು ಕಾಳಜಿ ಇದ್ರೆ ಅಮಿತ್ ಶಾ ಮಗ, ಕೈಕಾಲು ಬಿದ್ದು ಯುಎಇ (ಮುಸ್ಲಿಂ ಕಂಟ್ರಿ)ನಲ್ಲಿ ಯಾಕೆ ಕ್ರಿಕೆಟ್ ಟೂರ್ನಮೆಂಟ್ ಮಾಡಬೇಕಿತ್ತು ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮದು ಹಿಂದುತ್ವವೇ ಅಲ್ಲ
ಬಿಜೆಪಿಯವರಿಗೆ ಹಿಂದುತ್ವ ಕೇವಲ ನಾಲಿಗೆ ಮೇಲಿದೆ. ಮನಸ್ಸಿನಲ್ಲಿ ಇಲ್ಲ. ಹಿಂದೂ ಧರ್ಮದ ಹಲವು ಜಾತಿಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮಗಳು ಸ್ಥಾಪಿಸಲಾಗಿದೆ. ಆದ್ರೆ ನಯಾ ಪೈಸೆ ಖರ್ಚು ಮಾಡಿಲ್ಲ. ಅಭಿವೃದ್ಧಿ ಮಾಡಿಲ್ಲ. ಇವರಿಗೆ ಹಿಂದೂಗಳ ಅಭಿವೃದ್ಧಿ ಬಗ್ಗೆಯೂ ಚಿಂತನೆ ಇಲ್ಲ. ಕೇವಲ ಓಟ್ ಬ್ಯಾಂಕ್ ಗಾಗಿ ಹಿಂದೂ ಅಂತಿದಾರೆ ಎಂದರು.
