Asianet Suvarna News Asianet Suvarna News

ಹಠಕ್ಕೆ ಬಿದ್ದ ನಾಯಕರು: ಉಪಚುನಾವಣೆ ಗೆಲುವಿಗೆ ಕಾಂಗ್ರೆಸ್ ರಣತಂತ್ರ

ಕರ್ನಾಟಕದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕಾಗಿ ಗೆಲುವಿನ ರಣತಂತ್ರ ಕುರಿತು ಚರ್ಚಿಸಿದೆ.

Karnataka Congress Leader Meeting Over By Elections 2021 rbj
Author
Bengaluru, First Published Apr 11, 2021, 3:51 PM IST

ಬೆಂಗಳೂರು, (ಏ.11): ಬೆಳಗಾವಿ ಲೋಕಸಭೆ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು ಶತಾಯಗತಾಯ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದು, ರಣತಂತ್ರ ಕುರಿತು ಚರ್ಚಿಸಲು ಇಂದು (ಭಾನುವಾರ) ಬೆಳಗಾವಿಯಲ್ಲಿ ಹಿರಿಯ ನಾಯಕರನ್ನೊಳಗೊಂಡ ಸಭೆ ನಡೆಸಲಾಗಿದೆ.

ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕರಾದ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ವೀಕ್ಷಕರಾದ ಮಧುಗೌಡ್ ಯಕ್ಷಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಅಭ್ಯರ್ಥಿಯಾದ ಸತೀಶ್ ಕೆ.ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

'ಕೈ ಅಭ್ಯರ್ಥಿ ಗೆದ್ರೆ, ಸಿಎಂ ಸೀಟ್ ಅಲ್ಲಾಡುತ್ತೆ,ಹೈಕಮಾಂಡ್ ಸಹ ಬದಲಾವಣೆ ಬಯಸುತ್ತಿದೆ'

ಬೆಳಗಾವಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ನಾಲ್ಕು ಅವದಿಯಿಂದಲೂ ಕಾಂಗ್ರೆಸ್ ಕೈ ತಪ್ಪಿ ಹೋಗಿದೆ. ಹೇಗಾದರೂ ಮಾಡಿ ಈ ಬಾರಿ ಕ್ಷೇತ್ರವನ್ನು ಮರಳಿ ವಶಪಡೆಯಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದೆ. ಅಬ್ಬರದ ಪ್ರಚಾರ ಕೂಡ ನಡೆಯುತ್ತಿದೆ.

ಈ ನಡುವೆ ಹೊರಗಿನಿಂದ ಬಂದ ನಾಯಕರ ರಾಜಕಾರಣವನ್ನು ಸ್ಥಳೀಯರು ಒಪ್ಪಿಕೊಳ್ಳುವುದಿಲ್ಲ ಎಂಬ ಅಸಮಾಧಾನಗಳು ಕೇಳಿ ಬಂದಿದ್ದವು. ಹೀಗಾಗಿ ಒಮ್ಮತ ಮೂಡಿಸಲು ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಯತ್ನಿಸಿದ್ದು, ಬೆಳಗಾವಿಯ ಜತೆಗೆ ಉಪ ಚುನಾವಣೆ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳಾದ ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ.

ಬಹಳ ಪ್ರಮುಖವಾಗಿ ಸದ್ಯ ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಬಿಜೆಪಿ ವಿರೋಧ ಅಲೆ ಇದೆ. ಇದನ್ನ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ಇದೇ ಏಪ್ರಿಲ್ 17ರಂದು ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಮೇ.02ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios