ಬೆಳಗಾವಿ, (ಏ.10): ಈ ಉಪಚುನಾವಣೆ ಕರ್ನಾಟಕ‌ ಹಾಗೂ ದೇಶದ ದಿಕ್ಕು ಬದಲಾಯಿಸುವ ಚುನಾವಣೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್‌ಸಿಂಗ್ ಸುರ್ಜೇವಾಲ, ಬೆಳಗಾವಿ ನಗರದ ರಸ್ತೆ ಮೇಲೆ ಸಿಎಂ ಒಂದು ಕಿಮೀ ನಡೆದು ತೋರಿಸಲಿ, ನಿಮಗೆ ಗಾಯ ಆಗದಿದ್ರೆ ನೀವು ಹೇಳಿದ್ದು ಕೇಳ್ತೇವೆ. ಸತೀಶ್ ಜಾರಕಿಹೊಳಿಗೆ ಕೆಲಸ ಮಾಡುವಲ್ಲಿ ತಮ್ಮದೇ ಆದ ನೀತಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಮೇಲೆ ಸಿಎಂ ಖುರ್ಚಿ ಅಲ್ಲಾಡುತ್ತೆ. ದೆಹಲಿಯವರು ಸಹ ಸಿಎಂ ಬದಲಾವಣೆ ಬಯಸುತ್ತಿದ್ದಾರೆ ಎಂದು ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು. 

ಕರ್ನಾಟಕ, ದೇಶ ಬದಲಾವಣೆ ಬಯಸುತ್ತಿದೆ. ಕೇವಲ‌ ಭ್ರಷ್ಟಾಚಾರ ಬಿಎಸ್‌ವೈ ಸರ್ಕಾರದ ಆಡಳಿತ ಆಗಿದೆ. ದುರಾಡಳಿತ, ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ಸರ್ಕಾರ ನಂಬರ್ ಒನ್ ಆಗಿದೆ. ಕರ್ನಾಟಕ ಜನರ ಮತದಿಂದ ಈ ಸರ್ಕಾರ ಬಂದಿಲ್ಲ. ಇದೊಂದು ಅನೈತಿಕ ಸರ್ಕಾರ, ಪ್ರಜಾಪ್ರಭುತ್ವ ಕೊಲೆಗೈದು ಸರ್ಕಾರ ರಚಿಸಲಾಗಿದೆ ಎಂದು ಕಿಡಿಕಾರಿದರು.

ಬೈಎಲೆಕ್ಷನ್‌ ಬ್ಯಾಟಲ್‌: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್ ಇರೋದಿಲ್ಲ, ಬಿಎಸ್‌ವೈ

ಕರ್ನಾಟಕ ಮತದಾರರಿಂದ ಆರಿಸಿ ಬಂದ ಸರ್ಕಾರ ಅಲ್ಲ ಇದು. ಕರ್ನಾಟಕ ಅಭಿವೃದ್ಧಿಗೆ ಈ ಸರ್ಕಾರ ಬ್ರೇಕ್ ಹಾಕಿದೆ. ದೇಶದಲ್ಲೇ ಮೊದಲ ಬಾರಿ ಹಿರಿಯ ಸಚಿವ ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈಶ್ವರಪ್ಪ ತಪ್ಪಿದ್ರೆ ಅವರನ್ನು ವಜಾ ಮಾಡಲಿ, ಸಿಎಂ ತಪ್ಪಿದ್ರೆ ಅವರು ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.

ಈ ಇಬ್ಬರಲ್ಲಿ ಒಬ್ಬರು ತಪ್ಪಿದ್ದಾರಲ್ಲ. ದೆಹಲಿ ಬಿಜೆಪಿ ನಾಯಕರು ಏಕೆ ಸುಮ್ಮನೆ ಇದ್ದಾರೆ..? ಬಿಜೆಪಿ ಶಾಸಕ ಯತ್ನಾಳ್ ವಿಜಯೇಂದ್ರ ಟ್ಯಾಕ್ಸ್ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಶಾಸಕ ಯತ್ನಾಳ್ ತಪ್ಪಿದ್ರೆ ಅವರನ್ನೇಕೆ ಪಕ್ಷದಿಂದ ವಜಾ ಮಾಡ್ತಿಲ್ಲ?, ಬಿ.ಸಿ.ಪಾಟೀಲ್, ಸುಧಾಕರ್ ಕ್ಷಮೆ ಕೇಳುವ ಪರಿಸ್ಥಿತಿ ಇದೆ. ಸರ್ಕಾರ ಇದೆಯಾ ಅಥವಾ ಸರ್ಕಸ್ ಇದೆಯಾ? ಈ ಸರ್ಕಸ್ ರಾಜ್ಯದ ಅಭಿವೃದ್ಧಿ ಹೇಗೆ ಮಾಡುತ್ತೆ? ಪ್ರಶ್ನಿಸಿದರು.

ವಾಲ್ಮೀಕಿ ಸಮಾಜ ಎಸ್‌ಟಿ ಮೀಸಲಾತಿ ಹೆಚ್ಚಿಸುವ ಬೇಡಿಕೆ ಇಟ್ಟಿದ್ದಾರೆ. ಮರಾಠಾ ಸಮುದಾಯಕ್ಕೆ 2ಎ ಮೀಸಲಾತಿ ಬಗ್ಗೆ ಮರೆತುಬಿಟ್ಟಿದ್ದಾರೆ. ಕೋಲಿ, ಕುರುಬ ಸಮಾಜ ಎಸ್‌ಟಿ ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಮೊದಲು ಭರವಸೆ ನೀಡಿ ಈಗ ಉಲ್ಟಾ ಹೊಡೆದಿದ್ದಾರೆ ಎಂದರು.

ಸಾರಿಗೆ ಇಲಾಖೆ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲು 6ನೇ ವೇತನ ಆಯೋಗ. ಅವರು ಕರ್ನಾಟಕದ ಮಕ್ಕಳಲ್ವೇ, ಅವರನ್ನು ಕೆಲಸದಿಂದ ಕಿತ್ತು ಹಾಕಲಾಗುತ್ತಿದೆ. ಎಸ್ಮಾ ಜಾರಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.